عربيEnglish

The Noble Qur'an Encyclopedia

Towards providing reliable exegeses and translations of the meanings of the Noble Qur'an in the world languages

The Believers [Al-Mumenoon] - Kannada translation

Surah The Believers [Al-Mumenoon] Ayah 118 Location Maccah Number 23

ಸತ್ಯವಿಶ್ವಾಸಿಗಳು ಯಶಸ್ವಿಯಾದರು.

ಅವರು ಯಾರೆಂದರೆ, ತಮ್ಮ ನಮಾಝ್‍ನಲ್ಲಿ ವಿನಮ್ರತೆಯಿರುವವರು.

ಅನಗತ್ಯ ವಿಷಯಗಳಿಂದ ವಿಮುಖರಾಗುವವರು.

ತಮ್ಮ ಗುಹ್ಯಭಾಗಗಳನ್ನು (ಅನೈತಿಕ ಸಂಗದಿಂದ) ಕಾಪಾಡುವವರು.

ತಮ್ಮ ಮಡದಿಯರು ಅಥವಾ ತಮ್ಮ ಅಧೀನದಲ್ಲಿರುವ ಗುಲಾಮಸ್ತ್ರೀಯರ ಜೊತೆಗೆ ಹೊರತು. ಇವರು ಆಕ್ಷೇಪಾರ್ಹರಲ್ಲ.

ಆದರೆ ಯಾರು ಇವರ ಹೊರತಾದವರನ್ನು ಹುಡುಕುತ್ತಾರೋ ಅವರೇ ಅತಿರೇಕಿಗಳು.

ಅವರು ಯಾರೆಂದರೆ, ತಮ್ಮ ವಿಶ್ವಸ್ಥತೆಯನ್ನು ಮತ್ತು ಕರಾರುಗಳನ್ನು ಕಾಪಾಡುವವರು.

ತಮ್ಮ ನಮಾಝ್‍ಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವವರು.

ಅಂದರೆ, ಅತ್ಯುನ್ನತ ಸ್ವರ್ಗವನ್ನು (ಫಿರ್ದೌಸ್) ವಾರೀಸಾಗಿ ಪಡೆಯುವವರು. ಅವರು ಅಲ್ಲಿ ಶಾಶ್ವತವಾಗಿ ವಾಸಿಸುವರು.

ನಿಶ್ಚಯವಾಗಿಯೂ ನಾವು ಮನುಷ್ಯನನ್ನು ಜೇಡಿಮಣ್ಣಿನ ಸತ್ವದಿಂದ ಸೃಷ್ಟಿಸಿದೆವು.

ನಂತರ ಅವನನ್ನು ವೀರ್ಯವಾಗಿ ಮಾಡಿ ಒಂದು ಭದ್ರ ಸ್ಥಳದಲ್ಲಿಟ್ಟೆವು.

ನಂತರ ಆ ವೀರ್ಯವನ್ನು ಹೆಪ್ಪುಗಟ್ಟಿದ ರಕ್ತಪಿಂಡವಾಗಿ ಮಾಡಿದೆವು. ನಂತರ ಆ ರಕ್ತಪಿಂಡವನ್ನು ಮಾಂಸದ ಮುದ್ದೆಯಾಗಿ ಮಾಡಿದೆವು. ನಂತರ ಆ ಮಾಂಸದ ಮುದ್ದೆಯನ್ನು ಮೂಳೆಗಳಾಗಿ ಮಾಡಿದೆವು. ನಂತರ ಆ ಮೂಳೆಗಳನ್ನು ಮಾಂಸದಿಂದ ಹೊದಿಸಿದೆವು. ನಂತರ ಅದನ್ನು ಇನ್ನೊಂದು ಸೃಷ್ಟಿಯಾಗಿ ಬೆಳೆಸಿದೆವು. ಆದ್ದರಿಂದ ಅತ್ಯುತ್ತಮ ಸೃಷ್ಟಿಕರ್ತನಾದ ಅಲ್ಲಾಹು ಸಮೃದ್ಧಪೂರ್ಣನಾಗಿದ್ದಾನೆ.

ನಂತರ ಅದರ ಬಳಿಕ ನೀವು ಖಂಡಿತ ಸಾಯುವಿರಿ.

ನಂತರ ಪುನರುತ್ಥಾನ ದಿನದಂದು ನಿಮ್ಮನ್ನು ಖಂಡಿತ ಜೀವ ನೀಡಿ ಎಬ್ಬಿಸಲಾಗುವುದು.

ನಾವು ನಿಮ್ಮ ಮೇಲ್ಭಾಗದಲ್ಲಿ ಏಳು ಆಕಾಶಗಳನ್ನು ಸೃಷ್ಟಿಸಿದ್ದೇವೆ. ನಾವು ಸೃಷ್ಟಿಯ ಬಗ್ಗೆ ಯಾವತ್ತೂ ನಿರ್ಲಕ್ಷ್ಯರಾಗಿರಲಿಲ್ಲ.

ನಾವು ಆಕಾಶದಿಂದ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಮಳೆಯನ್ನು ಸುರಿಸಿ, ಅದನ್ನು ಭೂಮಿಯಲ್ಲಿ ತಂಗುವಂತೆ ಮಾಡಿದೆವು. ಅದನ್ನು ಇಂಗಿ ಹೋಗುವಂತೆ ಮಾಡಲು ನಮಗೆ ಖಂಡಿತ ಸಾಮರ್ಥ್ಯವಿದೆ.

ನಂತರ ಅದರಿಂದ ನಾವು ನಿಮಗೆ ಖರ್ಜೂರ ಮತ್ತು ದ್ರಾಕ್ಷಿ ತೋಟಗಳನ್ನು ನಿರ್ಮಿಸಿಕೊಟ್ಟೆವು. ಅವುಗಳಲ್ಲಿ ನಿಮಗೆ ಹೇರಳ ಹಣ್ಣು-ಹಂಪಲುಗಳಿವೆ. ಅದರಿಂದಲೇ ನೀವು ತಿನ್ನುತ್ತೀರಿ.

ಸೀನಾ ಪರ್ವತದಲ್ಲಿ ಬೆಳೆಯುವ ಒಂದು ಮರವನ್ನು ನಾವು ಸೃಷ್ಟಿಸಿದ್ದೇವೆ. ಅದು ಎಣ್ಣೆಯನ್ನು ಉತ್ಪಾದಿಸುತ್ತದೆ ಮತ್ತು ಆಹಾರ ಸೇವಿಸುವವರಿಗೆ ಪಲ್ಯವಾಗಿದೆ.

ನಿಶ್ಚಯವಾಗಿಯೂ ನಿಮಗೆ ಜಾನುವಾರುಗಳಲ್ಲಿ ನೀತಿಪಾಠವಿದೆ. ಅವುಗಳ ಹೊಟ್ಟೆಗಳಲ್ಲಿ ಏನಿದೆಯೋ ಅದರಿಂದ ನಾವು ನಿಮಗೆ ಕುಡಿಯಲು (ಹಾಲು) ನೀಡುತ್ತೇವೆ. ಅವುಗಳಿಂದ ನಿಮಗೆ ಹಲವಾರು ಉಪಕಾರಗಳಿವೆ. ಅವುಗಳ ಮಾಂಸವನ್ನೂ ನೀವು ತಿನ್ನುತ್ತೀರಿ.

ಅವುಗಳ ಬೆನ್ನುಗಳಲ್ಲಿ ಮತ್ತು ನಾವೆಗಳಲ್ಲಿ ನೀವು ಸವಾರಿ ಮಾಡುತ್ತೀರಿ.

ನಾವು ನೂಹರನ್ನು ಅವರ ಜನರ ಬಳಿಗೆ ಸಂದೇಶವಾಹಕರಾಗಿ ಕಳುಹಿಸಿದೆವು. ಅವರು ಹೇಳಿದರು: “ಓ ನನ್ನ ಜನರೇ! ನೀವು ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರು ನಿಮಗಿಲ್ಲ. ನೀವು ಅವನನ್ನು ಭಯಪಡುವುದಿಲ್ಲವೇ?”

ಆಗ ಅವರ ಜನರಲ್ಲಿದ್ದ ಸತ್ಯನಿಷೇಧಿ ಮುಖಂಡರು ಹೇಳಿದರು: “ಇವನು ನಿಮ್ಮಂತಿರುವ ಒಬ್ಬ ಮನುಷ್ಯ ಮಾತ್ರ. ಇವನು ನಿಮಗಿಂತಲೂ ಹೆಚ್ಚು ಶ್ರೇಷ್ಠನಾಗಲು ಬಯಸುತ್ತಿದ್ದಾನೆ. ಅಲ್ಲಾಹು ಇಚ್ಛಿಸಿದ್ದರೆ ದೇವದೂತರನ್ನು ಕಳುಹಿಸುತ್ತಿದ್ದನು. ನಾವು ನಮ್ಮ ಪೂರ್ವಜರ ಕಾಲದಿಂದ ಇಂತಹ ಒಂದು ಸುದ್ದಿಯನ್ನು ಕೇಳಿಯೇ ಇಲ್ಲ.

ಈತ ಬುದ್ಧಿಸ್ತಿಮಿತ ಕಳಕೊಂಡ ವ್ಯಕ್ತಿಯಾಗಿದ್ದಾನೆ. ಆದ್ದರಿಂದ ಇವನ ವಿಷಯದಲ್ಲಿ ಸ್ವಲ್ಪ ಸಮಯ ಕಾಯಿರಿ.”

ನೂಹ್ ಪ್ರಾರ್ಥಿಸಿದರು: “ಓ ನನ್ನ ಪರಿಪಾಲಕನೇ! ನನಗೆ ಸಹಾಯ ಮಾಡು. ಏಕೆಂದರೆ ಇವರು ನನ್ನನ್ನು ನಿಷೇಧಿಸಿದ್ದಾರೆ.”

ಆಗ ನಾವು ಅವರಿಗೆ ದೇವವಾಣಿಯನ್ನು ನೀಡಿದೆವು: ನಮ್ಮ ಕಣ್ಣುಗಳ ಮುಂಭಾಗದಲ್ಲಿ ನಮ್ಮ ದೇವವಾಣಿಯ ನಿರ್ದೇಶನದಂತೆ ನೀವು ಒಂದು ನಾವೆಯನ್ನು ನಿರ್ಮಿಸಿರಿ. ನಂತರ ನಮ್ಮ ಆಜ್ಞೆಯು ಬಂದು ಒಲೆ ಉಕ್ಕಿ ಹರಿದಾಗ, ಎಲ್ಲಾ ಜೀವಿಗಳ ಒಂದೊಂದು ಜೋಡಿಯನ್ನು (ಗಂಡು ಮತ್ತು ಹೆಣ್ಣು) ಅದರಲ್ಲಿ ಹತ್ತಿಸಿರಿ. ತಮ್ಮ ಕುಟುಂಬದವರಲ್ಲಿ ಯಾರ ಮೇಲೆ ಅಲ್ಲಾಹನ ಮಾತು ಖಾತ್ರಿಯಾಗಿದೆಯೋ ಅವರನ್ನು ಬಿಟ್ಟು ಉಳಿದವರನ್ನು ಹತ್ತಿಸಿರಿ. ಅಕ್ರಮಿಗಳ ವಿಷಯದಲ್ಲಿ ನನ್ನೊಂದಿಗೆ ಮಾತನಾಡಬೇಡಿ. ನಿಶ್ಚಯವಾಗಿಯೂ ಅವರು ಮುಳುಗಿ ಸಾಯುವರು.

ನಂತರ ನೀವು ಮತ್ತು ನಿಮ್ಮ ಜೊತೆಯಲ್ಲಿರುವವರು ನಾವೆಯಲ್ಲಿ ಆರೂಢರಾದಾಗ, “ಅಕ್ರಮಿಗಳಾದ ಜನರಿಂದ ನಮ್ಮನ್ನು ಪಾರುಮಾಡಿದ ಅಲ್ಲಾಹನಿಗೆ ಸರ್ವಸ್ತುತಿ” ಎಂದು ಹೇಳಿರಿ.

ಹೇಳಿರಿ: “ಓ ನನ್ನ ಪರಿಪಾಲಕನೇ! ನನ್ನನ್ನು ಸಮೃದ್ಧವಾದ ಸ್ಥಳದಲ್ಲಿ ಇಳಿಸು. ಇಳಿಸುವವರಲ್ಲಿ ನೀನು ಅತಿಶ್ರೇಷ್ಠನಾಗಿರುವೆ.”

ನಿಶ್ಚಯವಾಗಿಯೂ ಅದರಲ್ಲಿ (ಜಲಪ್ರಳಯದಲ್ಲಿ) ಅನೇಕ ದೃಷ್ಟಾಂತಗಳಿವೆ. ನಿಜಕ್ಕೂ ನಾವು ಪರೀಕ್ಷಿಸುವವರೇ ಆಗಿದ್ದೇವೆ.

ನಂತರ, ಅವರ ಬಳಿಕ ನಾವು ಇನ್ನೊಂದು ತಲೆಮಾರನ್ನು ಸೃಷ್ಟಿಸಿದೆವು.

ಅವರ ಬಳಿಗೆ ಅವರಿಂದಲೇ ಒಬ್ಬ ಸಂದೇಶವಾಹಕರನ್ನು ಕಳುಹಿಸಿದೆವು. (ಅವರು ಹೇಳಿದರು): “ಅಲ್ಲಾಹನನ್ನು ಆರಾಧಿಸಿರಿ. ನಿಮಗೆ ಅವನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ನೀವು ಅವನನ್ನು ಭಯಪಡುವುದಿಲ್ಲವೇ?”

ಅವರ ಜನರಲ್ಲಿದ್ದ, ಸತ್ಯನಿಷೇಧಿಗಳಾದ ಮತ್ತು ಪರಲೋಕದ ಭೇಟಿಯನ್ನು ನಿಷೇಧಿಸಿದ ಮುಖಂಡರು—ನಾವು ಅವರಿಗೆ ಐಹಿಕ ಸುಖಭೋಗಗಳನ್ನು ನೀಡಿದ್ದೆವು—ಹೇಳಿದರು: “ಇವನು ನಿಮ್ಮಂತಿರುವ ಒಬ್ಬ ಮನುಷ್ಯ ಮಾತ್ರ. ನೀವು ತಿನ್ನುವುದನ್ನೇ ಇವನೂ ತಿನ್ನುತ್ತಾನೆ ಮತ್ತು ನೀವು ಕುಡಿಯುವುದನ್ನೇ ಇವನೂ ಕುಡಿಯುತ್ತಾನೆ.

ನೀವು ನಿಮ್ಮಂತಿರುವ ಒಬ್ಬ ಮನುಷ್ಯನನ್ನು ಅನುಸರಿಸಿದರೆ, ನೀವು ಖಂಡಿತ ನಷ್ಟ ಹೊಂದುವಿರಿ.

ನೀವು ಸತ್ತು, ಮಣ್ಣು ಮತ್ತು ಮೂಳೆಗಳಾಗಿ ಬಿಟ್ಟ ಬಳಿಕವೂ ನಿಮಗೆ ಪುನಃ ಜೀವ ನೀಡಿ ಹೊರತೆಗೆಯಲಾಗುವುದೆಂದು ಇವನು ನಿಮಗೆ ವಾಗ್ದಾನ ಮಾಡುತ್ತಿದ್ದಾನೆಯೇ?

ನಿಮಗೆ ವಾಗ್ದಾನ ಮಾಡಲಾಗುತ್ತಿರುವ ಈ ವಿಷಯವು ಬಹಳ ದೂರದಲ್ಲಿದೆ! ಬಹಳ ದೂರದಲ್ಲಿದೆ!

ಜೀವನವೆಂದರೆ ನಮ್ಮ ಈ ಇಹಲೋಕದ ಜೀವನದ ಮಾತ್ರ. ಇಲ್ಲಿ ನಾವು ಹುಟ್ಟುತ್ತಲೂ ಸಾಯುತ್ತಲೂ ಇರುತ್ತೇವೆ. ನಮಗೆ ಜೀವ ನೀಡಿ ಎಬ್ಬಿಸಲಾಗುವ ಸಂಗತಿಯೇ ಇಲ್ಲ.

ಇವನು ಅಲ್ಲಾಹನ ಮೇಲೆ ಸುಳ್ಳನ್ನು ಆರೋಪಿಸುವ ವ್ಯಕ್ತಿ. ನಾವು ಇವನಲ್ಲಿ ವಿಶ್ವಾಸವಿಡುವುದೇ ಇಲ್ಲ.”

ಅವರು (ಸಂದೇಶವಾಹಕರು) ಹೇಳಿದರು: “ಓ ನನ್ನ ಪರಿಪಾಲಕನೇ! ನನಗೆ ಸಹಾಯ ಮಾಡು. ಏಕೆಂದರೆ ಇವರು ನನ್ನನ್ನು ನಿಷೇಧಿಸಿದ್ದಾರೆ.”

ಅಲ್ಲಾಹು ಹೇಳಿದನು: “ಅವರು ಶೀಘ್ರದಲ್ಲೇ ಖಂಡಿತ ಮರುಗುವ ಸ್ಥಿತಿಯಲ್ಲಾಗುವರು.”

ನಂತರ ಒಂದು ಭಯಾನಕ ಚೀತ್ಕಾರವು ನ್ಯಾಯಯುತವಾಗಿ ಅವರನ್ನು ಹಿಡಿದುಕೊಂಡಿತು. ನಾವು ಅವರನ್ನು ಕಸಕಡ್ಡಿಗಳಂತೆ ಮಾಡಿದೆವು. ಅಕ್ರಮವೆಸಗಿದ ಜನರು ಅಲ್ಲಾಹನ ದಯೆಯಿಂದ ದೂರವಾಗಲಿ!

ನಂತರ, ಅವರ ಬಳಿಕ ನಾವು ಬೇರೆ ತಲೆಮಾರುಗಳನ್ನು ಸೃಷ್ಟಿಸಿದೆವು.

ಯಾವುದೇ ಸಮುದಾಯವು ಅದಕ್ಕೆ ನಿಶ್ಚಯಿಸಲಾದ ಅವಧಿಯನ್ನು ದಾಟಿ ಹೋಗುವುದಿಲ್ಲ. ಅವರು ಹಿಂದೆ ಉಳಿಯುವುದೂ ಇಲ್ಲ.

ನಂತರ ನಾವು ಸತತವಾಗಿ ನಮ್ಮ ಸಂದೇಶವಾಹಕರನ್ನು ಕಳುಹಿಸಿದೆವು. ಯಾವುದೇ ಸಮುದಾಯಕ್ಕೆ ಅವರ ಸಂದೇಶವಾಹಕರು ಬಂದಾಗಲೆಲ್ಲ ಅವರು ಆ ಸಂದೇಶವಾಹಕರನ್ನು ನಿಷೇಧಿಸಿದರು. ಆಗ ನಾವು ಅವರಲ್ಲಿ ಒಬ್ಬರು ಇನ್ನೊಬ್ಬರನ್ನು ಹಿಂಬಾಲಿಸುವಂತೆ ಮಾಡಿ, ಅವರನ್ನು ದಂತಕಥೆಗಳನ್ನಾಗಿ ಮಾಡಿದೆವು. ವಿಶ್ವಾಸವಿಡದ ಜನರು ಅಲ್ಲಾಹನ ದಯೆಯಿಂದ ದೂರವಾಗಲಿ!

ನಂತರ ನಾವು ಮೂಸಾ ಮತ್ತು ಅವರ ಸಹೋದರ ಹಾರೂನರನ್ನು ನಮ್ಮ ದೃಷ್ಟಾಂತಗಳೊಂದಿಗೆ ಮತ್ತು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಕಳುಹಿಸಿದೆವು.

ಫರೋಹ ಮತ್ತು ಅವನ ಜನರ ಮುಖಂಡರ ಬಳಿಗೆ. ಆದರೆ ಅವರು ಅಹಂಕಾರದಿಂದ ವರ್ತಿಸಿದರು. ಅವರು ಮಹಾ ದರ್ಪದ ಜನರಾಗಿದ್ದರು.

ಅವರು ಹೇಳಿದರು: “ಏನು? ನಾವು ನಮ್ಮಂತಿರುವ ಇಬ್ಬರು ವ್ಯಕ್ತಿಗಳಲ್ಲಿ ವಿಶ್ವಾಸವಿಡಬೇಕೇ? ಅದೂ ಅವರ ಜನರು ನಮ್ಮ ಗುಲಾಮರಾಗಿರುವಾಗ!”

ಅವರು ಅವರಿಬ್ಬರನ್ನೂ ನಿಷೇಧಿಸಿದರು. ಆದ್ದರಿಂದ ಅವರು ವಿನಾಶ ಹೊಂದಿದವರಲ್ಲಿ ಸೇರಿದರು.

ನಾವು ಮೂಸಾರಿಗೆ ಗ್ರಂಥವನ್ನು ನೀಡಿದೆವು. ಅವರು (ಇಸ್ರಾಯೇಲ್ ಮಕ್ಕಳು) ಸನ್ಮಾರ್ಗ ಪಡೆಯಲೆಂದು.

ನಾವು ಮರ್ಯಮರ ಪುತ್ರ ಈಸಾರನ್ನು ಮತ್ತು ಅವರ ತಾಯಿಯನ್ನು ಒಂದು ದೃಷ್ಟಾಂತವಾಗಿ ಮಾಡಿದೆವು. ವಾಸಯೋಗ್ಯವಾದ ಮತ್ತು ನೀರಿನ ಚಿಲುಮೆಯಿರುವ ಒಂದು ಎತ್ತರದ ಸ್ಥಳದಲ್ಲಿ ನಾವು ಅವರಿಬ್ಬರಿಗೆ ಆಶ್ರಯ ನೀಡಿದೆವು.

ಸಂದೇಶವಾಹಕರುಗಳೇ![[ ImageMedia, 22-01-2024 18:07]] ಶುದ್ಧ ವಸ್ತುಗಳನ್ನು ತಿನ್ನಿರಿ ಮತ್ತು ಸತ್ಕರ್ಮ ಮಾಡಿರಿ. ನಿಶ್ಚಯವಾಗಿಯೂ ನೀವು ಮಾಡುವ ಕರ್ಮಗಳನ್ನು ನಾನು ತಿಳಿಯುತ್ತಿದ್ದೇನೆ.

ನಿಶ್ಚಯವಾಗಿಯೂ ಇದು ನಿಮ್ಮ ಧರ್ಮವು ಏಕೈಕ ಧರ್ಮವಾಗಿದೆ ಮತ್ತು ನಾನು ನಿಮ್ಮ ಪರಿಪಾಲಕನಾಗಿದ್ದೇನೆ. ಆದ್ದರಿಂದ ನೀವು ನನ್ನನ್ನು ಭಯಪಡಿರಿ.

ನಂತರ ಅವರು ತಮ್ಮ ವಿಷಯದಲ್ಲಿ (ಧರ್ಮದಲ್ಲಿ) ಭಿನ್ನಮತ ತಳೆದು ಹಲವು ಗುಂಪುಗಳಾಗಿ ವಿಭಜನೆಯಾದರು. ಎಲ್ಲಾ ಗುಂಪುಗಳೂ ಅವರ ಬಳಿ ಏನಿದೆಯೋ ಅದರಲ್ಲೇ ಖುಷಿಪಡುತ್ತಿದ್ದಾರೆ.

ಆದ್ದರಿಂದ (ಪ್ರವಾದಿಯವರೇ) ನೀವು ಅವರನ್ನು ಒಂದು ಅವಧಿಯವರೆಗೆ ಅವರ ಗೊಂದಲದಲ್ಲೇ ಇರಲು ಬಿಟ್ಟುಬಿಡಿ.

ಅವರೇನು ಭಾವಿಸುತ್ತಿದ್ದಾರೆ? ನಾವು ಅವರಿಗೆ ಆಸ್ತಿ ಮತ್ತು ಮಕ್ಕಳನ್ನು ಹೆಚ್ಚಿಸುತ್ತಿರುವುದು,

ಅವರಿಗೆ ಒಳಿತುಗಳನ್ನು ನೀಡಲು ನಾವು ತ್ವರೆ ಮಾಡುತ್ತಿದ್ದೇವೆ ಎಂದೇ? ಅಲ್ಲ, ಅವರು (ಸತ್ಯಸಂಗತಿಯನ್ನು) ತಿಳಿಯುವುದಿಲ್ಲ.[1]

ನಿಶ್ಚಯವಾಗಿಯೂ ತಮ್ಮ ಪರಿಪಾಲಕನ (ಅಲ್ಲಾಹನ) ಭಯದಿಂದ ನಡುಗುವವರು,

ತಮ್ಮ ಪರಿಪಾಲಕನ (ಅಲ್ಲಾಹನ) ವಚನಗಳಲ್ಲಿ ವಿಶ್ವಾಸವಿಡುವವರು,

ತಮ್ಮ ಪರಿಪಾಲಕನೊಂದಿಗೆ (ಅಲ್ಲಾಹನೊಂದಿಗೆ) ಸಹಭಾಗಿತ್ವ (ಶಿರ್ಕ್) ಮಾಡದವರು,

ಕೊಡುವುದೆಲ್ಲವನ್ನೂ ಕೊಡುವವರು ಮತ್ತು ನಮಗೆ ನಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳಬೇಕಾಗಿದೆಯೆಂದು ಹೃದಯಗಳಲ್ಲಿ ಭಯವನ್ನು ಹೊಂದಿರುವವರು ಯಾರೋ,

ಅವರೇ ಒಳಿತಿನ ವಿಷಯಗಳಲ್ಲಿ ತ್ವರೆ ಮಾಡುವವರು. ಅವರೇ ಅದರಲ್ಲಿ ಮುಂಚೂಣಿಯಲ್ಲಿರುವವರು.

ಯಾವುದೇ ಮನುಷ್ಯನ ಮೇಲೂ ಅವನ ಸಾಮರ್ಥ್ಯಕ್ಕಿಂತ ಹೆಚ್ಚಿನದ್ದನ್ನು ನಾವು ಹೊರಿಸುವುದಿಲ್ಲ. ಸತ್ಯ ಸಮೇತ ಮಾತನಾಡುವ ಒಂದು ಗ್ರಂಥವು ನಮ್ಮ ಬಳಿಯಿದೆ. ಅವರಿಗೆ ಯಾವುದೇ ಅನ್ಯಾಯವಾಗುವುದಿಲ್ಲ.

ಆದರೆ, ಅವರ ಹೃದಯಗಳು ಈ ವಿಷಯದಲ್ಲಿ ನಿರ್ಲಕ್ಷ್ಯವಾಗಿವೆ. ಅವರಿಗೆ ಇದರ ಹೊರತಾಗಿರುವ ಬೇರೆ ದುಷ್ಕರ್ಮಗಳೂ ಇವೆ. ಅವರು ಅದನ್ನು ಮಾಡುತ್ತಿದ್ದಾರೆ.

ಎಲ್ಲಿಯವರೆಗೆಂದರೆ, ನಾವು ಅವರಲ್ಲಿನ ಸಂಪನ್ನರನ್ನು ಶಿಕ್ಷೆಯ ಮೂಲಕ ಹಿಡಿದುಕೊಂಡಾಗ ಅಗೋ! ಅವರು ಗೋಗರೆಯುತ್ತಿದ್ದಾರೆ.

ಇಂದು ನೀವು ಗೋಗರೆಯಬೇಕಾಗಿಲ್ಲ. ನಿಶ್ಚಯವಾಗಿಯೂ ನಿಮಗೆ ನಮ್ಮ ಕಡೆಯಿಂದ ಸಹಾಯವು ದೊರೆಯುವುದಿಲ್ಲ.

ನನ್ನ ವಚನಗಳನ್ನು ನಿಮಗೆ ಓದಿಕೊಡಲಾಗುತ್ತಿತ್ತು. ಆಗ ನೀವು ನಿಮ್ಮ ಹಿಮ್ಮಡಿಗಳಲ್ಲಿ ಹಿಂದಕ್ಕೆ ತಿರುಗಿ ನಡೆಯುತ್ತಿದ್ದಿರಿ.

ಅಹಂಕಾರದಿಂದ ವರ್ತಿಸುತ್ತಾ (ನಡೆಯುತ್ತಿದ್ದಿರಿ). ಅದೊಂದು ರಾತ್ರಿ ಕಥೆಯೋ ಎಂಬಂತೆ ನೀವು ಅದರ (ಕುರ್‌ಆನ್‍ನ) ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಿರಿ.

ಅವರು ಈ ಮಾತಿನ (ಕುರ್‌ಆನಿನ) ಬಗ್ಗೆ ಆಳವಾಗಿ ಯೋಚಿಸುವುದಿಲ್ಲವೇ? ಅಥವಾ, ಅವರ ಪೂರ್ವಜರ ಬಳಿಗೆ ಬರದೇ ಇರುವಂತದ್ದು ಇವರ ಬಳಿಗೆ ಬಂದಿದೆಯೇ?

ಅವರಿಗೆ ಅವರ ಸಂದೇಶವಾಹಕರ ಪರಿಚಯವಿಲ್ಲದಿರುವುದರಿಂದ ಅವರು ಅವರನ್ನು ನಿಷೇಧಿಸುತ್ತಿದ್ದಾರೆಯೇ?

ಅವರಿಗೆ (ಪ್ರವಾದಿಗೆ) ಬುದ್ಧಿಭ್ರಮಣೆಯಾಗಿದೆಯೆಂದು ಅವರು ಹೇಳುತ್ತಿದ್ದಾರೆಯೇ? ಅಲ್ಲ, ವಾಸ್ತವವಾಗಿ ಅವರು (ಪ್ರವಾದಿ) ಸತ್ಯದೊಂದಿಗೆ ಅವರ ಬಳಿಗೆ ಬಂದಿದ್ದಾರೆ. ಆದರೆ ಅವರಲ್ಲಿ ಹೆಚ್ಚಿನವರು ಸತ್ಯವನ್ನು ದ್ವೇಷಿಸುತ್ತಾರೆ.

ಒಂದು ವೇಳೆ ಸತ್ಯವು ಅವರ ಸ್ವೇಚ್ಛೆಗಳನ್ನು ಹಿಂಬಾಲಿಸಿದ್ದರೆ ಭೂಮ್ಯಾಕಾಶಗಳು ಮತ್ತು ಅವುಗಳಲ್ಲಿರುವ ಎಲ್ಲರೂ ನಾಶವಾಗುತ್ತಿದ್ದರು. ಅಲ್ಲ, ವಾಸ್ತವವಾಗಿ ನಾವು ಅವರಿಗೆ ನಮ್ಮ ಉಪದೇಶವನ್ನು ತಲುಪಿಸಿದ್ದೇವೆ. ಆದರೆ ಅವರು ಅವರಿಗೆ ನೀಡಲಾದ ಉಪದೇಶದಿಂದ ವಿಮುಖರಾಗಿದ್ದಾರೆ.

ನೀವು ಅವರೊಡನೆ ಏನಾದರೂ ಪ್ರತಿಫಲವನ್ನು ಕೇಳುತ್ತಿದ್ದೀರಾ? ನಿಮಗಂತೂ ನಿಮ್ಮ ಪರಿಪಾಲಕನು (ಅಲ್ಲಾಹು) ಕೊಡುವ ಪ್ರತಿಫಲವೇ ಅತ್ಯುತ್ತಮವಾಗಿದೆ. ಅವನು ಉಪಜೀವನ ಒದಗಿಸುವವರಲ್ಲಿ ಅತಿಶ್ರೇಷ್ಠನಾಗಿದ್ದಾನೆ.

ನಿಶ್ಚಯವಾಗಿಯೂ ನೀವು ಅವರನ್ನು ನೇರಮಾರ್ಗಕ್ಕೆ ಕರೆಯುತ್ತಿದ್ದೀರಿ.

ನಿಶ್ಚಯವಾಗಿಯೂ ಪರಲೋಕದಲ್ಲಿ ವಿಶ್ವಾಸವಿಡದವರು ಯಾರೋ ಅವರು ಆ ಮಾರ್ಗದಿಂದ ತಪ್ಪಿಹೋಗುತ್ತಿದ್ದಾರೆ.

ನಾವು ಅವರ ಮೇಲೆ ದಯೆ ತೋರಿ ಅವರ ಕಷ್ಟವನ್ನು ದೂರೀಕರಿಸಿದರೆ, ಅವರು ತಮ್ಮ ಅತಿರೇಕದಲ್ಲಿ ಅಂಧವಾಗಿ ವಿಹರಿಸುವುದನ್ನು ಹಟದಿಂದ ಮುಂದುವರಿಸುತ್ತಿದ್ದರು.

ನಾವು ಅವರನ್ನು ಶಿಕ್ಷೆಯ ಮೂಲಕವೂ ಹಿಡಿದಿದ್ದೆವು. ಆದರೂ ಅವರು ತಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಶರಣಾಗಲಿಲ್ಲ, ವಿನಮ್ರತೆಯನ್ನೂ ತೋರಲಿಲ್ಲ.

ಎಲ್ಲಿಯವರೆಗೆಂದರೆ, ನಾವು ಅವರ ಮೇಲೆ ಕಠೋರ ಶಿಕ್ಷೆಯ ಬಾಗಿಲನ್ನು ತೆರೆದುಕೊಟ್ಟಾಗ, ಅಗೋ! ಅವರು ಹತಾಶರಾಗುತ್ತಿದ್ದಾರೆ.

ನಿಮಗೆ ಕೇಳುವ ಶಕ್ತಿ, ದೃಷ್ಟಿ ಮತ್ತು ಹೃದಯಗಳನ್ನು ನೀಡಿದವನು ಅವನೇ. ನೀವು ಸ್ವಲ್ಪವೇ ಕೃತಜ್ಞರಾಗುತ್ತೀರಿ.

ಅವನೇ ನಿಮ್ಮನ್ನು ಸೃಷ್ಟಿಸಿ ಭೂಮಿಯಲ್ಲಿ ಹಬ್ಬಿಸಿದವನು. ನಿಮ್ಮನ್ನು ಅವನ ಬಳಿಗೇ ಒಟ್ಟುಗೂಡಿಸಲಾಗುತ್ತದೆ.

ಅವನೇ ಜೀವ ಮತ್ತು ಮರಣ ನೀಡುವವನು. ರಾತ್ರಿ ಹಗಲುಗಳ ಬದಲಾವಣೆಯು ಅವನ ನಿಯಂತ್ರಣದಲ್ಲಿದೆ. ಆದರೂ ನೀವು ಆಲೋಚಿಸುವುದಿಲ್ಲವೇ?

ಬದಲಿಗೆ, ಅವರ ಪೂರ್ವಜರು ಹೇಳಿದಂತೆಯೇ ಅವರೂ ಹೇಳಿದರು.

ಅವರು ಹೇಳಿದರು: “ನಾವು ಸತ್ತು ಮಣ್ಣು ಮತ್ತು ಮೂಳೆಗಳಾಗಿ ಬಿಟ್ಟ ಬಳಿಕ ನಮ್ಮನ್ನು ಪುನಃ ಜೀವ ನೀಡಿ ಎಬ್ಬಿಸಲಾಗುವುದೇ?

ಇದನ್ನು ನಮಗೂ, ನಮಗಿಂತ ಮೊದಲು ನಮ್ಮ ಪೂರ್ವಜರಿಗೂ ವಾಗ್ದಾನ ಮಾಡಲಾಗಿದೆ. ಇದು ಪ್ರಾಚೀನ ಕಾಲದ ಜನರ ಪುರಾಣಗಳಲ್ಲದೆ ಇನ್ನೇನೂ ಅಲ್ಲ.”

(ಪ್ರವಾದಿಯವರೇ) ಕೇಳಿರಿ: “ಭೂಮಿ ಮತ್ತು ಅದರಲ್ಲಿರುವ ಎಲ್ಲಾ ವಸ್ತುಗಳು ಯಾರಿಗೆ ಸೇರಿದ್ದು? ನಿಮಗೆ ತಿಳಿದಿದ್ದರೆ ಹೇಳಿರಿ.”

ಅವರು ಹೇಳುತ್ತಾರೆ: “ಅಲ್ಲಾಹನಿಗೆ ಸೇರಿದ್ದು.” ಕೇಳಿರಿ: “ಆದರೂ ನೀವು ಉಪದೇಶವನ್ನು ಸ್ವೀಕರಿಸುವುದಿಲ್ಲವೇ?”

ಕೇಳಿರಿ: “ಏಳಾಕಾಶಗಳ ಮತ್ತು ಮಹಾ ಸಿಂಹಾಸನದ ಪರಿಪಾಲಕ ಯಾರು?”

ಅವರು ಹೇಳುತ್ತಾರೆ: “ಅಲ್ಲಾಹು.” ಕೇಳಿರಿ: “ಆದರೂ ನೀವು ಅವನನ್ನು ಭಯಪಡುವುದಿಲ್ಲವೇ?”

ಕೇಳಿರಿ: “ಸರ್ವ ವಸ್ತುಗಳ ಸಾರ್ವಭೌಮತ್ವವು ಯಾರ ಕೈಯ್ಯಲ್ಲಿದೆ? ಅಭಯ ನೀಡುವವನು ಮತ್ತು ಅವನಿಗೆ ವಿರುದ್ಧವಾಗಿ ಅಭಯ ನೀಡಲು ಯಾರಿಗೂ ಸಾಧ್ಯವಿಲ್ಲದಂತಹವನು ಯಾರು? ನಿಮಗೆ ತಿಳಿದಿದ್ದರೆ ಹೇಳಿರಿ.”

ಅವರು ಹೇಳುತ್ತಾರೆ: “ಅಲ್ಲಾಹು.” ಕೇಳಿರಿ: “ಆದರೂ ನೀವು ಮೋಡಿಗೆ ಬಲಿಯಾಗುತ್ತಿರುವುದು ಹೇಗೆ?”[1]

ಅಲ್ಲ, ವಾಸ್ತವವಾಗಿ ನಾವು ಅವರ ಬಳಿಗೆ ಸತ್ಯವನ್ನೇ ತಂದಿದ್ದೇವೆ. ನಿಶ್ಚಯವಾಗಿಯೂ ಅವರು ಸುಳ್ಳು ಹೇಳುತ್ತಿದ್ದಾರೆ.

ಅಲ್ಲಾಹನಿಗೆ ಯಾವುದೇ ಸಂತಾನವಿಲ್ಲ. ಅವನ ಜೊತೆಗೆ ಬೇರೆ ದೇವರುಗಳೂ ಇಲ್ಲ. ಇರುತ್ತಿದ್ದರೆ ಎಲ್ಲಾ ದೇವರುಗಳೂ ಅವರು ಸೃಷ್ಟಿಸಿದ್ದನ್ನು ತೆಗೆದುಕೊಂಡು ಹೋಗುತ್ತಿದ್ದರು. ಅವರು ಪ್ರಾಬಲ್ಯ ಪಡೆಯುವುದಕ್ಕಾಗಿ ಪರಸ್ಪರ ಹೊಡೆದಾಡುತ್ತಿದ್ದರು.[1] ಅವರು ಆರೋಪಿಸುವ ಎಲ್ಲಾ ಸುಳ್ಳುಗಳಿಂದಲೂ ಅಲ್ಲಾಹು ಎಷ್ಟೋ ಪರಿಶುದ್ಧನಾಗಿದ್ದಾನೆ.

ಅವನು ದೃಶ್ಯ-ಅದೃಶ್ಯವನ್ನು ತಿಳಿದವನು. ಅವರು ಮಾಡುವ ಸಹಭಾಗಿತ್ವದಿಂದ (ಶಿರ್ಕ್‌ನಿಂದ) ಅವನು ಎಷ್ಟೋ ಉನ್ನತನಾಗಿದ್ದಾನೆ.

ಹೇಳಿರಿ: “ನನ್ನ ಪರಿಪಾಲಕನೇ! ಇವರಿಗೆ ವಾಗ್ದಾನ ಮಾಡಲಾಗುವ ಶಿಕ್ಷೆಯನ್ನು ನನಗೆ ತೋರಿಸಿಕೊಡುವುದಾದರೆ,

ನನ್ನ ಪರಿಪಾಲಕನೇ! ನನ್ನನ್ನು ಅಕ್ರಮಿಗಳಾದ ಜನರಲ್ಲಿ ಸೇರಿಸಬೇಡ.”

ಅವರಿಗೆ ವಾಗ್ದಾನ ಮಾಡುತ್ತಿರುವ ಶಿಕ್ಷೆಯನ್ನು ನಿಮಗೆ ತೋರಿಸಿಕೊಡುವ ಸಾಮರ್ಥ್ಯ ಖಂಡಿತ ನಮಗಿದೆ.

ನೀವು ಒಳಿತಿನ ಮೂಲಕ ಕೆಡುಕನ್ನು ದೂರೀಕರಿಸಿರಿ. ಅವರು ವರ್ಣಿಸುವ ವಿಷಯಗಳ ಬಗ್ಗೆ ನಮಗೆ ಬಹಳ ಚೆನ್ನಾಗಿ ತಿಳಿದಿದೆ.

ಹೇಳಿರಿ: “ನನ್ನ ಪರಿಪಾಲಕನೇ! ಶೈತಾನರ ದುರ್ವಿಚಾರಗಳಿಂದ ನಾನು ನಿನ್ನಲ್ಲಿ ಅಭಯಕೋರುತ್ತೇನೆ.

ಓ ನನ್ನ ಪರಿಪಾಲಕನೇ! ಅವರು ನನ್ನ ಬಳಿ ಬರುವುದರಿಂದಲೂ ನಾನು ನಿನ್ನಲ್ಲಿ ಅಭಯಕೋರುತ್ತೇನೆ.”

ಎಲ್ಲಿಯವರೆಗೆಂದರೆ, ಅವರಲ್ಲೊಬ್ಬನಿಗೆ ಸಾವು ಸನ್ನಿಹಿತವಾದಾಗ, ಅವನು ಹೇಳುವನು: “ಓ ನನ್ನ ಪರಿಪಾಲಕನೇ! ನನ್ನನ್ನು ಹಿಂದಕ್ಕೆ ಕಳಿಸು.

ನಾನು ಮಾಡದೆ ಬಿಟ್ಟಿರುವ ಸತ್ಕರ್ಮಗಳನ್ನು ನಿರ್ವಹಿಸಲು.” ಇಲ್ಲ, ಎಂದಿಗೂ ಇಲ್ಲ! ಅದು ಕೇವಲ ಒಂದು ಮಾತು ಮಾತ್ರ. ಅವನು ಅದನ್ನು ಹೇಳುತ್ತಲೇ ಇರುವನು. ಅವರನ್ನು ಜೀವ ನೀಡಿ ಎಬ್ಬಿಸಲಾಗುವ ದಿನದ ತನಕ ಅವರ ಹಿಂದೆ ಒಂದು ಪರದೆಯಿದೆ.[1]

ಕಹಳೆಯಲ್ಲಿ ಊದಲಾದರೆ, ಅಂದು ಅವರ ನಡುವೆ ಯಾವುದೇ ಸಂಬಂಧಗಳು ಇರುವುದಿಲ್ಲ. ಅವರು ಪರಸ್ಪರ ವಿಚಾರಿಸುವುದೂ ಇಲ್ಲ.

ಯಾರ ತಕ್ಕಡಿಗಳು ಭಾರವಾಗುತ್ತದೋ ಅವರೇ ಯಶಸ್ವಿಯಾದವರು.

ಯಾರ ತಕ್ಕಡಿಗಳು ಹಗುರವಾಗುತ್ತದೋ ಅವರೇ ಸ್ವಯಂ ನಷ್ಟ ಹೊಂದಿದವರು. ಅವರು ನರಕಾಗ್ನಿಯಲ್ಲಿ ಶಾಶ್ವತವಾಗಿ ವಾಸಿಸುವರು.

ನರಕದ ಬೆಂಕಿಯು ಅವರ ಮುಖಗಳನ್ನು ಸುಟ್ಟು ಬಿಡುವುದು. ಅವರು ಅದರಲ್ಲಿ ವಿಕಾರವಾಗಿ ಹಲ್ಲುಕಿರಿಯುವರು.[1]

(ಅವರೊಂದಿಗೆ ಕೇಳಲಾಗುವುದು): “ನನ್ನ ವಚನಗಳನ್ನು ನಿಮಗೆ ಓದಿಕೊಡಲಾಗುವಾಗ ನೀವು ಅದನ್ನು ನಿಷೇಧಿಸುತ್ತಿರಲಿಲ್ಲವೇ?”

ಅವರು ಹೇಳುವರು: “ನಮ್ಮ ಪರಿಪಾಲಕನೇ! ನಮ್ಮ ದುರ್ಗತಿಯು ನಮ್ಮನ್ನು ಮಣಿಸಿದೆ. ನಾವು ದಾರಿತಪ್ಪಿದ ಜನರಾಗಿದ್ದೆವು.

ನಮ್ಮ ಪರಿಪಾಲಕನೇ! ನಮ್ಮನ್ನು ಇಲ್ಲಿಂದ ಹೊರಗೆ ಬಿಡು. ನಾವೇನಾದರೂ ಪುನಃ ಅದೇ ದುರ್ಮಾರ್ಗಕ್ಕೆ ಮರಳಿದರೆ ನಿಜವಾಗಿಯೂ ನಾವೇ ಅಕ್ರಮಿಗಳು.”

ಅಲ್ಲಾಹು ಹೇಳುವನು: “ಅವಮಾನವನ್ನು ಸಹಿಸುತ್ತಾ ಇಲ್ಲೇ ಬಿದ್ದಿರಿ. ನನ್ನೊಡನೆ ಮಾತನಾಡಬೇಡಿ.

ನಿಶ್ಚಯವಾಗಿಯೂ, ನನ್ನ ದಾಸರಲ್ಲಿ ಒಂದು ಗುಂಪು ಜನರು ಹೇಳುತ್ತಿದ್ದರು: “ನಮ್ಮ ಪರಿಪಾಲಕನೇ! ನಾವು ವಿಶ್ವಾಸವಿಟ್ಟಿದ್ದೇವೆ. ಆದ್ದರಿಂದ ನಮ್ಮನ್ನು ಕ್ಷಮಿಸು ಮತ್ತು ನಮ್ಮ ಮೇಲೆ ದಯೆ ತೋರು. ನೀನು ದಯೆ ತೋರುವವರಲ್ಲಿ ಅತ್ಯುತ್ತಮನಾಗಿರುವೆ.”

ಆಗ ನೀವು ಅವರನ್ನು ತಮಾಷೆಯ ವಸ್ತುವಾಗಿ ಮಾಡಿಕೊಂಡಿರಿ. ಎಲ್ಲಿಯವರೆಗೆಂದರೆ, (ಈ ತಮಾಷೆಯು) ನಿಮಗೆ ನನ್ನ ನೆನಪನ್ನೇ ಮರೆಸಿಬಿಟ್ಟಿತು. ನೀವು ಅವರನ್ನು ಅಣಕಿಸಿ ನಗುತ್ತಿದ್ದಿರಿ.

ಅವರು ತಾಳ್ಮೆಯಿಂದ ಜೀವಿಸಿದ ಕಾರಣ ಇಂದು ನಾನು ಅವರಿಗೆ ಪ್ರತಿಫಲವನ್ನು ನೀಡಿದ್ದೇನೆ. ನಿಶ್ಚಯವಾಗಿಯೂ ಅವರೇ ವಿಜಯ ಗಳಿಸಿದವರು.”

ಅಲ್ಲಾಹು ಕೇಳುವನು: “ನೀವು ಭೂಮಿಯಲ್ಲಿ ಎಷ್ಟು ವರ್ಷಗಳ ಕಾಲ ವಾಸವಾಗಿದ್ದಿರಿ?”

ಅವರು ಹೇಳುವರು: “ನಾವು ಒಂದು ದಿನ ಅಥವಾ ದಿನದ ಸ್ವಲ್ಪ ಭಾಗ ಮಾತ್ರ ವಾಸವಾಗಿದ್ದೆವು. ಎಣಿಕೆ ಮಾಡಿದವರನ್ನು ಕೂಡ ಕೇಳಿ ನೋಡು.”

ಅಲ್ಲಾಹು ಹೇಳುವನು: “ನೀವು ಸ್ವಲ್ಪ ಸಮಯ ಮಾತ್ರ ವಾಸವಾಗಿದ್ದಿರಿ. ನಿಮಗೆ ಮೊದಲೇ ತಿಳಿದಿರುತ್ತಿದ್ದರೆ!

ನಾವು ನಿಮ್ಮನ್ನು ವ್ಯರ್ಥವಾಗಿ ಸೃಷ್ಟಿಸಿದ್ದೇವೆ ಮತ್ತು ನೀವು ನಮ್ಮ ಬಳಿಗೆ ಮರಳಿ ಬರುವುದಿಲ್ಲವೆಂದು ನೀವು ಭಾವಿಸಿದ್ದೀರಾ?”

ನೈಜ ಸಾಮ್ರಾಟನಾಗಿರುವ ಅಲ್ಲಾಹು ಪರಮೋನ್ನತನು. ಅವನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ಅವನು ಗೌರವಾನ್ವಿತ ಸಿಂಹಾಸನದ ಪರಿಪಾಲಕನಾಗಿದ್ದಾನೆ.

ಯಾರು ಅಲ್ಲಾಹನ ಜೊತೆಗೆ ಬೇರೆ ದೇವರನ್ನು ಕರೆದು ಪ್ರಾರ್ಥಿಸುತ್ತಾನೋ—ಹಾಗೆ ಪ್ರಾರ್ಥಿಸಲು ಅವನ ಬಳಿ ಯಾವುದೇ ಸಾಕ್ಷ್ಯಾಧಾರವಿಲ್ಲ—ಅವನ ವಿಚಾರಣೆಯು ಅವನ ಪರಿಪಾಲಕನ (ಅಲ್ಲಾಹನ) ಬಳಿಯಲ್ಲಿದೆ. ನಿಶ್ಚಯವಾಗಿಯೂ ಸತ್ಯನಿಷೇಧಿಗಳು ಯಶಸ್ವಿಯಾಗುವುದಿಲ್ಲ.[1]

ಹೇಳಿರಿ: “ನನ್ನ ಪರಿಪಾಲಕನೇ! ನನ್ನನ್ನು ಕ್ಷಮಿಸು. ನನಗೆ ದಯೆ ತೋರು. ದಯೆ ತೋರುವವರಲ್ಲಿ ನೀನು ಅತ್ಯುತ್ತಮನಾಗಿರುವೆ.”