The Noble Qur'an Encyclopedia
Towards providing reliable exegeses and translations of the meanings of the Noble Qur'an in the world languagesOriginator [Fatir] - Kannada translation
Surah Originator [Fatir] Ayah 45 Location Maccah Number 35
ಭೂಮ್ಯಾಕಾಶಗಳನ್ನು ಸೃಷ್ಟಿಸಿದ ಮತ್ತು ದೇವದೂತರುಗಳನ್ನು ಎರಡು, ಮೂರು ಹಾಗೂ ನಾಲ್ಕು ರೆಕ್ಕೆಗಳುಳ್ಳ ದೂತರಾಗಿ ಕಳುಹಿಸಿದ ಅಲ್ಲಾಹನಿಗೆ ಸರ್ವಸ್ತುತಿ. ಅವನು ಸೃಷ್ಟಿಯಲ್ಲಿ ಅವನು ಇಚ್ಛಿಸುವುದನ್ನು ಹೆಚ್ಚಿಸುತ್ತಾನೆ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
ಅಲ್ಲಾಹು ಜನರಿಗೆ ಯಾವುದೇ ದಯೆಯನ್ನು ತೆರೆದುಕೊಟ್ಟರೆ ಅದಕ್ಕೆ ತಡೆಯೊಡ್ಡಲು ಯಾರಿಗೂ ಸಾಧ್ಯವಿಲ್ಲ. ಅವನು ಏನಾದರೂ ತಡೆಹಿಡಿದರೆ ಅವನ ನಂತರ ಅದನ್ನು ಬಿಡಿಸಿಕೊಡುವವರು ಯಾರೂ ಇಲ್ಲ. ಅವನು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
ಓ ಜನರೇ! ಅಲ್ಲಾಹು ನಿಮಗೆ ದಯಪಾಲಿಸಿದ ಅನುಗ್ರಹವನ್ನು ಸ್ಮರಿಸಿರಿ. ಅಲ್ಲಾಹನನ್ನು ಬಿಟ್ಟು ಆಕಾಶ ಮತ್ತು ಭೂಮಿಯಿಂದ ನಿಮಗೆ ಉಪಜೀವನವನ್ನು ಒದಗಿಸುವ ಬೇರೆ ಸೃಷ್ಟಿಕರ್ತರಿದ್ದಾರೆಯೇ? ಅವನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ಆದರೂ ನಿಮ್ಮನ್ನು ಹೇಗೆ ತಪ್ಪಿಸಿಬಿಡಲಾಗುತ್ತಿದೆ?
ಅವರು ನಿಮ್ಮನ್ನು ನಿಷೇಧಿಸಿದರೆ—ನಿಮಗಿಂತ ಮೊದಲೂ ಅನೇಕ ಸಂದೇಶವಾಹಕರುಗಳು ನಿಷೇಧಕ್ಕೊಳಗಾಗಿದ್ದಾರೆ. ಎಲ್ಲಾ ವಿಷಯಗಳನ್ನೂ ಅಲ್ಲಾಹನ ಕಡೆಗೇ ಮರಳಿಸಲಾಗುತ್ತದೆ.
ಓ ಮನುಷ್ಯರೇ! ನಿಶ್ಚಯವಾಗಿಯೂ ಅಲ್ಲಾಹನ ವಾಗ್ದಾನವು ಸತ್ಯವಾಗಿದೆ. ಆದ್ದರಿಂದ ಇಹಲೋಕ ಜೀವನವು ನಿಮ್ಮನ್ನು ಮರುಳುಗೊಳಿಸದಿರಲಿ. ನಯವಂಚಕನಾದ ಶೈತಾನನು ಅಲ್ಲಾಹನ ವಿಷಯದಲ್ಲಿ ನಿಮ್ಮನ್ನು ಮರುಳುಗೊಳಿಸದಿರಲಿ.
ನಿಶ್ಚಯವಾಗಿಯೂ ಶೈತಾನನು ನಿಮ್ಮ ವೈರಿಯಾಗಿದ್ದಾನೆ. ಆದ್ದರಿಂದ ಅವನನ್ನು ವೈರಿಯಾಗಿಯೇ ಸ್ವೀಕರಿಸಿರಿ. ಅವನು ತನ್ನ ಪಕ್ಷವನ್ನು ಕರೆಯುತ್ತಿರುವುದು ಅವರು ನರಕವಾಸಿಗಳಲ್ಲಿ ಸೇರಲೆಂದು ಮಾತ್ರವಾಗಿದೆ.
ಸತ್ಯನಿಷೇಧಿಗಳು ಯಾರೋ—ಅವರಿಗೆ ಕಠೋರ ಶಿಕ್ಷೆಯಿದೆ. ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರಿಗೆ ಕ್ಷಮೆ ಮತ್ತು ಮಹಾ ಪ್ರತಿಫಲವಿದೆ.
ಯಾರಿಗೆ ಅವನ ದುಷ್ಕರ್ಮಗಳನ್ನು ಅಂದಗೊಳಿಸಿ ಕೊಡಲಾಗಿ, ಅವನು ಅದನ್ನು ಸತ್ಕರ್ಮಗಳೆಂದು ಭಾವಿಸುತ್ತಾನೋ (ಅವನ ಸ್ಥಿತಿಯು ಸನ್ಮಾರ್ಗದಲ್ಲಿರುವ ವ್ಯಕ್ತಿಯಂತಾಗಲು ಸಾಧ್ಯವೇ)? ಅಲ್ಲಾಹು ಅವನು ಇಚ್ಛಿಸುವವರನ್ನು ದಾರಿ ತಪ್ಪಿಸುತ್ತಾನೆ ಮತ್ತು ಅವನು ಇಚ್ಛಿಸುವವರಿಗೆ ಸನ್ಮಾರ್ಗ ತೋರಿಸುತ್ತಾನೆ. ಆದ್ದರಿಂದ ಅವರ ಬಗ್ಗೆ ಬೇಸರಪಟ್ಟು ನೀವು ನಿಮ್ಮನ್ನೇ ನಾಶ ಮಾಡಬೇಡಿ. ನಿಶ್ಚಯವಾಗಿಯೂ ಅವರು ಮಾಡುವ ಕರ್ಮಗಳ ಕುರಿತು ಅಲ್ಲಾಹು ಬಹಳ ಚೆನ್ನಾಗಿ ತಿಳಿದಿದ್ದಾನೆ.
ಅಲ್ಲಾಹನೇ ಮಾರುತಗಳನ್ನು ಕಳುಹಿಸುತ್ತಾನೆ. ಅವು ಮೋಡಗಳನ್ನು ಎತ್ತಿಕೊಳ್ಳುತ್ತವೆ. ನಂತರ ನಾವು ಅದನ್ನು ಬರಡು ಭೂಮಿಗೆ ಸಾಗಿಸಿ, ನಂತರ ಅದರ ಮೂಲಕ ಬರಡು ಭೂಮಿಗೆ ಜೀವ ನೀಡುತ್ತೇವೆ. ಹೀಗೆಯೇ ಪುನರುತ್ಥಾನವು ಕೂಡ ನಡೆಯುತ್ತದೆ.
ಯಾರಾದರೂ ಪ್ರತಿಷ್ಠೆಯನ್ನು ಬಯಸುವುದಾದರೆ ಪ್ರತಿಷ್ಠೆಗಳೆಲ್ಲವೂ ಅಲ್ಲಾಹನಿಗೆ ಸೇರಿದ್ದಾಗಿವೆ. ಒಳ್ಳೆಯ ವಚನಗಳು ಅವನ ಬಳಿಗೆ ಏರಿ ಹೋಗುತ್ತವೆ. ಸತ್ಕರ್ಮಗಳು ಅವುಗಳನ್ನು ಮೇಲಕ್ಕೇರಿಸುತ್ತವೆ. ಯಾರು ಕೆಟ್ಟ ಸಂಚುಗಳನ್ನು ರೂಪಿಸುತ್ತಾರೋ ಅವರಿಗೆ ಕಠೋರ ಶಿಕ್ಷೆಯಿದೆ. ಅವರ ಸಂಚುಗಳೆಲ್ಲವೂ ಸರ್ವನಾಶವಾಗುವುವು.
ಅಲ್ಲಾಹು ನಿಮ್ಮನ್ನು ಮಣ್ಣಿನಿಂದ, ನಂತರ ವೀರ್ಯದಿಂದ ಸೃಷ್ಟಿಸಿದನು. ನಂತರ ಅವನು ನಿಮ್ಮನ್ನು ಜೋಡಿಗಳನ್ನಾಗಿ (ಗಂಡು-ಹೆಣ್ಣು) ಮಾಡಿದನು. ಯಾವುದೇ ಹೆಣ್ಣು ಗರ್ಭ ಧರಿಸುವಾಗಲೂ ಜನ್ಮ ನೀಡುವಾಗಲೂ ಅವನಿಗೆ ತಿಳಿಯದೇ ಇರುವುದಿಲ್ಲ. ದೀರ್ಘಾಯಷ್ಯವಿರುವ ವ್ಯಕ್ತಿಗೆ ಆಯುಷ್ಯ ನೀಡುವುದು ಮತ್ತು ಯಾರದ್ದಾದರೂ ಆಯುಷ್ಯ ಕುಗ್ಗಿಸುವುದು ಒಂದು ಗ್ರಂಥದಲ್ಲಿರುವಂತೆಯೇ ನಡೆಯುತ್ತವೆ. ನಿಶ್ಚಯವಾಗಿಯೂ ಅದು ಅಲ್ಲಾಹನಿಗೆ ಬಹಳ ಸುಲಭವಾಗಿದೆ.
ಎರಡು ಸಮುದ್ರಗಳು ಸಮಾನವಲ್ಲ. ಇದರಲ್ಲಿರುವ ನೀರು ತಾಜಾ ಮತ್ತು ರುಚಿಯಾಗಿದ್ದು ಕುಡಿಯಲು ಆಹ್ಲಾದಕರವಾಗಿದೆ. ಅದು ಕಹಿ ಉಪ್ಪು ನೀರನ್ನು ಹೊಂದಿದೆ. ಆದರೆ, ಈ ಎರಡು ನೀರಿನಿಂದಲೂ ನೀವು ತಾಜಾ ಮಾಂಸವನ್ನು (ಮೀನುಗಳನ್ನು) ತಿನ್ನುತ್ತೀರಿ ಮತ್ತು ನೀವು ಧರಿಸುವ ಆಭರಣಗಳನ್ನು (ಮುತ್ತು-ಹವಳ) ಹೊರತೆಗೆಯುತ್ತೀರಿ. ನಾವೆಗಳು ಅದರ ನೀರನ್ನು ಸೀಳುತ್ತಾ ಸಾಗುವುದನ್ನು ನೀವು ನೋಡುತ್ತೀರಿ. ಇವೆಲ್ಲವೂ ನೀವು ಅಲ್ಲಾಹನ ಔದಾರ್ಯದಿಂದ ಉಪಜೀವನವನ್ನು ಹುಡುಕಲೆಂದು ಮತ್ತು ಅವನಿಗೆ ಕೃತಜ್ಞರಾಗಲೆಂದಾಗಿದೆ.
ಅವನು ರಾತ್ರಿಯನ್ನು ಹಗಲಿನಲ್ಲಿ ತೂರಿಸುತ್ತಾನೆ ಮತ್ತು ಹಗಲನ್ನು ರಾತ್ರಿಯಲ್ಲಿ ತೂರಿಸುತ್ತಾನೆ. ಅವನು ಸೂರ್ಯ-ಚಂದ್ರರನ್ನು ವಿಧೇಯಗೊಳಿಸಿದ್ದಾನೆ. ಎಲ್ಲವೂ ಒಂದು ನಿಗದಿತ ಅವಧಿಯವರೆಗೆ ಚಲಿಸುತ್ತವೆ. ಅವನೇ ನಿಮ್ಮ ಪರಿಪಾಲಕನಾದ ಅಲ್ಲಾಹು. ಸಾರ್ವಭೌಮತ್ವವು ಅವನಿಗೆ ಸೇರಿದ್ದು. ನೀವು ಅವನನ್ನು ಬಿಟ್ಟು ಯಾರನ್ನು ಕರೆದು ಪ್ರಾರ್ಥಿಸುತ್ತಿದ್ದೀರೋ ಅವರ ಸ್ವಾಧೀನದಲ್ಲಿ ಖರ್ಜೂರದ ಬೀಜದ ಪೊರೆಯೂ ಇಲ್ಲ.
ನೀವು ಅವರನ್ನು ಕರೆದು ಪ್ರಾರ್ಥಿಸಿದರೆ ಅವರು ನಿಮ್ಮ ಪ್ರಾರ್ಥನೆಯನ್ನು ಕೇಳುವುದಿಲ್ಲ. ಅವರು ಅದನ್ನು ಕೇಳಿದರೂ ಉತ್ತರ ನೀಡುವುದಿಲ್ಲ. ಪುನರುತ್ಥಾನದ ದಿನದಂದು ಅವರು ನಿಮ್ಮ ಸಹಭಾಗಿತ್ವ (ಶಿರ್ಕ್) ವನ್ನು ನಿಷೇಧಿಸುವರು. ಸೂಕ್ಷ್ಮಜ್ಞಾನಿಯಾದ ಅಲ್ಲಾಹನಂತೆ ನಿಮಗೆ ತಿಳಿಸಿಕೊಡುವವರು ಯಾರೂ ಇಲ್ಲ.
ಓ ಮನುಷ್ಯರೇ! ನೀವು ಅಲ್ಲಾಹನ ಮೇಲೆ ಅವಲಂಬಿತರಾಗಿದ್ದೀರಿ. ಅಲ್ಲಾಹು ನಿರಪೇಕ್ಷನು ಮತ್ತು ಸ್ತುತ್ಯರ್ಹನಾಗಿದ್ದಾನೆ.
ಅವನು ಇಚ್ಛಿಸಿದರೆ ನಿಮ್ಮನ್ನು ನಾಶ ಮಾಡಿ ಹೊಸದೊಂದು ಸೃಷ್ಟಿಯನ್ನು ತರುವನು.
ಅದು ಅಲ್ಲಾಹನ ಮಟ್ಟಿಗೆ ಕಷ್ಟವೇನೂ ಅಲ್ಲ.
ಪಾಪಗಳ ಭಾರವನ್ನು ಹೊರುವವರು ಇತರರು ಮಾಡಿದ ಪಾಪಗಳ ಭಾರವನ್ನು ಹೊರುವುದಿಲ್ಲ. ಪಾಪಭಾರವನ್ನು ಹೊತ್ತು ಕಷ್ಟಪಡುವವನು ತನ್ನ ಭಾರವನ್ನು ಹೊರಲು ಯಾರನ್ನಾದರೂ ಕರೆದರೆ, ಅವನು ಅದರಿಂದ ಏನನ್ನೂ ಹೊರುವುದಿಲ್ಲ. ಅವನು ಹತ್ತಿರದ ಸಂಬಂಧಿಯಾಗಿದ್ದರೂ ಸಹ. ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಅದೃಶ್ಯ ಸ್ಥಿತಿಯಲ್ಲಿ ಭಯಪಡುವವರಿಗೆ ಮತ್ತು ನಮಾಝ್ ಸಂಸ್ಥಾಪಿಸುವವರಿಗೆ ಮಾತ್ರ ನೀವು ನೀಡುವ ಎಚ್ಚರಿಕೆ ಪ್ರಯೋಜನಕಾರಿಯಾಗುತ್ತದೆ. ಯಾರು ಪರಿಶುದ್ಧನಾಗುತ್ತಾನೋ ಅವನು ಪರಿಶುದ್ಧನಾಗುವುದು ಅವನ ಒಳಿತಿಗೇ ಆಗಿದೆ. ಎಲ್ಲರೂ ಅಲ್ಲಾಹನ ಬಳಿಗೇ ಮರಳಿ ಹೋಗಬೇಕಾಗಿದೆ.
ಕಣ್ಣು ಕಾಣದವನು ಮತ್ತು ಕಣ್ಣು ಕಾಣುವವನು ಸಮಾನರಲ್ಲ.
ಅಂಧಕಾರಗಳು ಮತ್ತು ಬೆಳಕು ಸಮಾನವಲ್ಲ.
ನೆರಳು ಮತ್ತು ಬಿಸಿಲು ಸಮಾನವಲ್ಲ.
ಬದುಕಿರುವವರು ಮತ್ತು ಸತ್ತವರು ಸಮಾನರಲ್ಲ. ಅಲ್ಲಾಹು ಅವನು ಇಚ್ಛಿಸುವವರಿಗೆ ಖಂಡಿತ ಕೇಳುವಂತೆ ಮಾಡುತ್ತಾನೆ. ಸಮಾಧಿಗಳಲ್ಲಿರುವವರಿಗೆ ಕೇಳುವಂತೆ ಮಾಡಲು ನಿಮಗೆ ಸಾಧ್ಯವಿಲ್ಲ.
ನೀವು ಕೇವಲ ಮುನ್ನೆಚ್ಚರಿಕೆ ನೀಡುವವರಾಗಿದ್ದೀರಿ.
ನಿಶ್ಚಯವಾಗಿಯೂ ನಾವು ನಿಮ್ಮನ್ನು ಸುವಾರ್ತೆ ತಿಳಿಸುವವರಾಗಿ ಮತ್ತು ಮುನ್ನೆಚ್ಚರಿಕೆ ನೀಡುವವರಾಗಿ ಸತ್ಯದೊಂದಿಗೆ ಕಳುಹಿಸಿದ್ದೇವೆ. ಒಬ್ಬ ಮುನ್ನೆಚ್ಚರಿಕೆಗಾರ ಬರದ ಯಾವುದೇ ಸಮುದಾಯವೂ ಕಳೆದು ಹೋಗಿಲ್ಲ.
ಅವರು ನಿಮ್ಮನ್ನು ನಿಷೇಧಿಸಿದರೆ—ಅವರಿಗಿಂತ ಮೊದಲಿನ ಜನರೂ (ಅವರ ಪ್ರವಾದಿಗಳನ್ನು) ನಿಷೇಧಿಸಿದ್ದಾರೆ. ಅವರ ಸಂದೇಶವಾಹಕರುಗಳು ಅವರ ಬಳಿಗೆ ಪವಾಡಗಳು, ಸಾಕ್ಷ್ಯಾಧಾರಗಳು ಮತ್ತು ಬೆಳಕು ಬೀರುವ ಗ್ರಂಥಗಳೊಂದಿಗೆ ಬಂದಿದ್ದರು.
ನಂತರ ನಾನು ಸತ್ಯನಿಷೇಧಿಗಳನ್ನು ಹಿಡಿದೆನು. ಆಗ ನನ್ನ ಶಿಕ್ಷೆಯು ಹೇಗಿತ್ತು!
ಅಲ್ಲಾಹು ಆಕಾಶದಿಂದ ಮಳೆ ಸುರಿಸುವುದನ್ನು ನೀವು ನೋಡಿಲ್ಲವೇ? ನಂತರ ನಾವು ಅದರಿಂದ ವಿಭಿನ್ನ ಬಣ್ಣಗಳಿರುವ ಹಣ್ಣುಗಳನ್ನು ಉತ್ಪಾದಿಸಿದೆವು. ಪರ್ವತಗಳಲ್ಲಿ ಬಳಿ ಮತ್ತು ಕೆಂಪು ವರ್ಣವೈವಿಧ್ಯತೆಗಳಿರುವ ರಸ್ತೆಗಳಿವೆ. ಕೆಲವು ಕಡುಗಪ್ಪು ಬಣ್ಣವನ್ನು ಹೊಂದಿವೆ.
ಅದೇ ರೀತಿ ಮನುಷ್ಯರು, ಜೀವರಾಶಿಗಳು ಮತ್ತು ಜಾನುವಾರುಗಳಲ್ಲೂ ವಿಭಿನ್ನ ಬಣ್ಣಗಳಿವೆ. ಅಲ್ಲಾಹನ ದಾಸರಲ್ಲಿ ಜ್ಞಾನವಂತರು ಮಾತ್ರ ಅವನನ್ನು ಭಯಪಡುತ್ತಾರೆ. ನಿಶ್ಚಯವಾಗಿಯೂ ಅಲ್ಲಾಹು ಪ್ರಬಲನು ಮತ್ತು ಕ್ಷಮಿಸುವವನಾಗಿದ್ದಾನೆ.
ನಿಶ್ಚಯವಾಗಿಯೂ ಅಲ್ಲಾಹನ ಗ್ರಂಥವನ್ನು ಪಠಿಸುವವರು, ನಮಾಝ್ ಸಂಸ್ಥಾಪಿಸುವವರು ಮತ್ತು ನಾವು ನೀಡಿದ ಸಂಪತ್ತಿನಿಂದ ರಹಸ್ಯವಾಗಿ ಮತ್ತು ಬಹಿರಂಗವಾಗಿ ಖರ್ಚು ಮಾಡುವವರು ಯಾರೋ—ಅವರು ಎಂದಿಗೂ ನಷ್ಟವಾಗದ ವ್ಯಾಪಾರವನ್ನು ಬಯಸುತ್ತಾರೆ.
ಅವನು ಅವರಿಗೆ ಅವರ ಪೂರ್ಣ ಪ್ರತಿಫಲವನ್ನು ನೀಡಲೆಂದು ಮತ್ತು ಅವನ ಔದಾರ್ಯದಿಂದ ಅದಕ್ಕಿಂತಲೂ ಹೆಚ್ಚು ನೀಡಲೆಂದು. ನಿಶ್ಚಯವಾಗಿಯೂ ಅವನು ಕ್ಷಮಿಸುವವನು ಮತ್ತು ಕೃತಜ್ಞನಾಗಿದ್ದಾನೆ.
ನಾವು ನಿಮಗೆ ದೇವವಾಣಿಯ ಮೂಲಕ ನೀಡಿದ ಈ ಗ್ರಂಥವು ಸಂಪೂರ್ಣ ಸತ್ಯವಾಗಿದೆ. ಅದು ಅದಕ್ಕಿಂತ ಮೊದಲಿನ ಗ್ರಂಥಗಳನ್ನು ದೃಢೀಕರಿಸುತ್ತದೆ. ನಿಶ್ಚಯವಾಗಿಯೂ ಅಲ್ಲಾಹು ತನ್ನ ದಾಸರ ಬಗ್ಗೆ ಸೂಕ್ಷ್ಮವಾಗಿ ತಿಳಿಯುವವನು ಮತ್ತು ನೋಡುವವನಾಗಿದ್ದಾನೆ.
ನಂತರ ನಮ್ಮ ದಾಸರಲ್ಲಿ ನಾವು ಆರಿಸಿದವರಿಗೆ ನಾವು ಗ್ರಂಥವನ್ನು ಉತ್ತರಾಧಿಕಾರವಾಗಿ ನೀಡಿದೆವು. ಅವರಲ್ಲಿ ಸ್ವಯಂ ಅಕ್ರಮವೆಸಗಿದವರು, ಮಧ್ಯಮ ನಿಲುವನ್ನು ಹೊಂದಿದವರು ಮತ್ತು ಅಲ್ಲಾಹನ ಅಪ್ಪಣೆಯಂತೆ ಸತ್ಕರ್ಮವೆಸಗುವುದರಲ್ಲಿ ಮುಂಚೂಣಿಯಲ್ಲಿರುವವರು ಇದ್ದಾರೆ. ಅದೇ ಅತಿದೊಡ್ಡ ಔದಾರ್ಯ.
ಅವರು ಶಾಶ್ವತ ವಾಸದ ಸ್ವರ್ಗೋದ್ಯಾನಗಳನ್ನು ಪ್ರವೇಶಿಸುವರು. ಅಲ್ಲಿ ಅವರಿಗೆ ಬಂಗಾರ ಮತ್ತು ಮುತ್ತಿನ ಕಡಗಗಳ್ನು ತೊಡಿಸಲಾಗುವುದು. ಅಲ್ಲಿ ಅವರ ಪೋಷಾಕು ರೇಷ್ಮೆಯಾಗಿರುವುದು.
ಅವರು ಹೇಳುವರು: “ನಮ್ಮಿಂದ ವ್ಯಥೆಯನ್ನು ನಿವಾರಿಸಿದ ಅಲ್ಲಾಹನಿಗೆ ಸರ್ವಸ್ತುತಿ. ನಿಶ್ಚಯವಾಗಿಯೂ ನಮ್ಮ ಪರಿಪಾಲಕನು (ಅಲ್ಲಾಹು) ಕ್ಷಮಿಸುವವನು ಮತ್ತು ಕೃತಜ್ಞನಾಗಿದ್ದಾನೆ.
ಅವನು ತನ್ನ ಔದಾರ್ಯದಿಂದ ನಮಗೆ ಶಾಶ್ವತ ವಾಸದ ಸ್ಥಳದಲ್ಲಿ (ಸ್ವರ್ಗದಲ್ಲಿ) ವಾಸ್ತವ್ಯಗೊಳಿಸಿದ್ದಾನೆ. ಇಲ್ಲಿ ನಮಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಇಲ್ಲಿ ನಮಗೆ ಯಾವುದೇ ಸುಸ್ತು ಕೂಡ ಉಂಟಾಗುವುದಿಲ್ಲ.”
ಸತ್ಯನಿಷೇಧಿಗಳು ಯಾರೋ—ಅವರಿಗೆ ನರಕಾಗ್ನಿಯಿದೆ. ಅವರಿಗೆ ಸಾವನ್ನು ವಿಧಿಸಲಾಗುವುದಿಲ್ಲ. ಹಾಗಿದ್ದರೆ ಅವರಿಗೆ ಸಾಯಬಹುದಾಗಿತ್ತು. ನರಕದ ಶಿಕ್ಷೆಯಲ್ಲಿ ಅವರಿಗೆ ಯಾವುದೇ ರಿಯಾಯಿತಿ ನೀಡಲಾಗುವುದಿಲ್ಲ. ನಾವು ಎಲ್ಲಾ ಕೃತಘ್ನರಿಗೂ ಈ ರೀತಿ ಪತಿಫಲ ನೀಡುತ್ತೇವೆ.
ಅಲ್ಲಿ ಅವರು ಕಿರಿಚುತ್ತಾ ಹೇಳುವರು: “ನಮ್ಮ ಪರಿಪಾಲಕನೇ! ನಮ್ಮನ್ನು ಇಲ್ಲಿಂದ ಹೊರಗೆ ಬಿಡು. ನಾವು ಸತ್ಕರ್ಮಗಳನ್ನು ಮಾಡುತ್ತೇವೆ. ನಾವು ಮಾಡುತ್ತಿದ್ದ ಕರ್ಮಗಳಲ್ಲದ ಬೇರೆ ಕರ್ಮಗಳನ್ನು ಮಾಡುತ್ತೇವೆ.” (ಅಲ್ಲಾಹು ಹೇಳುವನು): “ಉಪದೇಶವನ್ನು ಸ್ವೀಕರಿಸಲು ಬಯಸುವವರಿಗೆ ಉಪದೇಶವನ್ನು ಸ್ವೀಕರಿಸಲು ಸಾಕಾಗುವಷ್ಟು ಆಯುಷ್ಯವನ್ನು ನಾವು ನಿಮಗೆ ನೀಡಿರಲಿಲ್ಲವೇ? ಎಚ್ಚರಿಕೆ ನೀಡುವವರು (ಪ್ರವಾದಿಗಳು) ಕೂಡ ನಿಮ್ಮ ಬಳಿಗೆ ಬಂದಿದ್ದರು. ಆದ್ದರಿಂದ ನೀವು ಅದರ ರುಚಿಯನ್ನು ನೋಡಿರಿ. ಅಕ್ರಮಿಗಳಿಗೆ ಸಹಾಯ ಮಾಡಲು ಯಾರೂ ಇರುವುದಿಲ್ಲ.”
ನಿಶ್ಚಯವಾಗಿಯೂ ಅಲ್ಲಾಹು ಭೂಮ್ಯಾಕಾಶಗಳ ಅದೃಶ್ಯ ವಿಷಯಗಳನ್ನು ತಿಳಿದವನಾಗಿದ್ದಾನೆ. ನಿಶ್ಚಯವಾಗಿಯೂ ಅವನು ಹೃದಯಗಳಲ್ಲಿರುವುದನ್ನು ತಿಳಿಯುತ್ತಾನೆ.
ಅವನೇ ನಿಮ್ಮನ್ನು ಭೂಮಿಯಲ್ಲಿ ಪ್ರತಿನಿಧಿಗಳನ್ನಾಗಿ ಮಾಡಿದವನು. ಯಾರು ಸತ್ಯನಿಷೇಧಿಯಾಗುತ್ತಾನೋ ಅವನ ಸತ್ಯನಿಷೇಧದ ಪರಿಣಾಮವನ್ನು ಅವನೇ ಅನುಭವಿಸಬೇಕಾಗುತ್ತದೆ. ಅಲ್ಲಾಹನ ಬಳಿ ಸತ್ಯನಿಷೇಧಿಗಳಿಗೆ ಅವರ ಸತ್ಯನಿಷೇಧವು ದ್ವೇಷವನ್ನಲ್ಲದೆ ಬೇರೇನನ್ನೂ ಹೆಚ್ಚಿಸುವುದಿಲ್ಲ. ಸತ್ಯನಿಷೇಧಿಗಳಿಗೆ ಅವರ ಸತ್ಯನಿಷೇಧವು ನಷ್ಟವನ್ನಲ್ಲದೆ ಬೇರೇನನ್ನೂ ಹೆಚ್ಚಿಸುವುದಿಲ್ಲ.
ಹೇಳಿರಿ: “ನೀವು ಅಲ್ಲಾಹನನ್ನು ಬಿಟ್ಟು ಕರೆದು ಪ್ರಾರ್ಥಿಸುತ್ತಿರುವ ನಿಮ್ಮ ದೇವರುಗಳ ಬಗ್ಗೆ ಆಲೋಚಿಸಿದ್ದೀರಾ? ಅವರು ಭೂಮಿಯಲ್ಲಿ ಏನು ಸೃಷ್ಟಿಸಿದ್ದಾರೆಂದು ನನಗೆ ತೋರಿಸಿಕೊಡಿ. ಅಥವಾ ಅವರಿಗೆ ಆಕಾಶಗಳಲ್ಲಿ ಏನಾದರೂ ಪಾಲುದಾರಿಕೆಯಿದೆಯೇ? ಅಥವಾ ನಾವು ಅವರಿಗೆ ಒಂದು ಗ್ರಂಥವನ್ನು ನೀಡಿ ಅವರು ಅದರಲ್ಲಿರುವ ಸಾಕ್ಷ್ಯಗಳಂತೆ ನಡೆಯುತ್ತಿರುವರೇ? ಅಲ್ಲ. ವಾಸ್ತವವಾಗಿ, ಈ ಅಕ್ರಮಿಗಳು ಪರಸ್ಪರ ವಂಚನೆಯನ್ನು ಮಾತ್ರ ವಾಗ್ದಾನ ಮಾಡುತ್ತಿದ್ದಾರೆ.”
ನಿಶ್ಚಯವಾಗಿಯೂ ಅಲ್ಲಾಹು ಭೂಮ್ಯಾಕಾಶಗಳನ್ನು (ಅವುಗಳ ಸ್ಥಾನದಿಂದ) ತಪ್ಪಿ ಹೋಗದಂತೆ ಹಿಡಿದಿದ್ದಾನೆ. ಅವೇನಾದರೂ ತಪ್ಪಿ ಹೋದರೆ ಅವುಗಳನ್ನು ಹಿಡಿದು ನಿಲ್ಲಿಸಲು ಅವನ ಹೊರತು ಯಾರಿಗೂ ಸಾಧ್ಯವಿಲ್ಲ. ನಿಶ್ಚಯವಾಗಿಯೂ ಅವನು ಸಹಿಷ್ಣುತೆಯುಳ್ಳವನು ಮತ್ತು ಕ್ಷಮಿಸುವವನಾಗಿದ್ದಾನೆ.
ಅವರ ಬಳಿಗೆ ಒಬ್ಬ ಮುನ್ನೆಚ್ಚರಿಕೆಗಾರನು (ಪ್ರವಾದಿ) ಬಂದರೆ ಅವರು ಎಲ್ಲಾ ಸಮುದಾಯಗಳಿಗಿಂತಲೂ ಹೆಚ್ಚು ಸನ್ಮಾರ್ಗವನ್ನು ಪಡೆಯುವರು ಎಂದು ಅವರು ಅಲ್ಲಾಹನ ಮೇಲೆ ಪ್ರಬಲವಾಗಿ ಆಣೆ ಮಾಡಿ ಹೇಳಿದ್ದರು. ಆದರೆ ಅವರ ಬಳಿಗೆ ಒಬ್ಬ ಮುನ್ನೆಚ್ಚರಿಕೆಗಾರನು ಬಂದಾಗ ಅದು ಅವರಿಗೆ ದ್ವೇಷವನ್ನೇ ಹೊರತು ಇನ್ನೇನನ್ನೂ ಹೆಚ್ಚಿಸಿಕೊಡಲಿಲ್ಲ.
ಅವರು ಭೂಮಿಯಲ್ಲಿ ತಮ್ಮನ್ನು ತಾವೇ ಶ್ರೇಷ್ಠರೆಂದು ಭಾವಿಸಿದ್ದರಿಂದ ಮತ್ತು ಕೆಟ್ಟ ಸಂಚುಗಳನ್ನು ಮಾಡಿದ್ದರಿಂದ ಹೀಗಾಯಿತು. ಕೆಟ್ಟ ಸಂಚುಗಳು ಅದನ್ನು ಮಾಡಿದವರ ಮೇಲೆಯೇ ತಿರುಗೇಟಾಗಿ ಆವರಿಸುವುದು. ಹಾಗಾದರೆ ಇವರ ಪೂರ್ವಜರ ಮೇಲೆ ಜರುಗಿಸಲಾದ ಅದೇ ಕ್ರಮಗಳನ್ನು ಇವರು ಕಾಯುತ್ತಿದ್ದಾರೆಯೇ? ಅಲ್ಲಾಹನ ಕ್ರಮದಲ್ಲಿ ನೀವು ಯಾವುದೇ ಬದಲಾವಣೆಯನ್ನು ಕಾಣಲಾರಿರಿ. ಅಲ್ಲಾಹನ ಕ್ರಮದಲ್ಲಿ ನೀವು ಯಾವುದೇ ಪರಿವರ್ತನೆಯನ್ನು ಕಾಣಲಾರಿರಿ.
ಅವರು ಭೂಮಿಯಲ್ಲಿ ಸಂಚರಿಸಿ ಅವರ ಪೂರ್ವಜರ ಅಂತ್ಯವು ಹೇಗಿತ್ತೆಂದು ನೋಡಿಲ್ಲವೇ? ಅವರು ಇವರಿಗಿಂತಲೂ ಹೆಚ್ಚು ಶಕ್ತಿಶಾಲಿಗಳಾಗಿದ್ದರು. ಭೂಮ್ಯಾಕಾಶಗಳಲ್ಲಿರುವ ಯಾವುದೇ ವಸ್ತುವಿಗೂ ಅಲ್ಲಾಹನನ್ನು ಸೋಲಿಸಲು ಸಾಧ್ಯವಿಲ್ಲ. ನಿಶ್ಚಯವಾಗಿಯೂ ಅವನು ಸರ್ವಜ್ಞನು ಮತ್ತು ಸರ್ವಶಕ್ತನಾಗಿದ್ದಾನೆ.
ಮನುಷ್ಯರು ಮಾಡಿದ ಅನ್ಯಾಯಗಳ ಕಾರಣದಿಂದ ಅಲ್ಲಾಹು ಅವರನ್ನು ಹಿಡಿದು ಶಿಕ್ಷಿಸುತ್ತಿದ್ದರೆ, ಭೂಮಿಯಲ್ಲಿ ಒಂದೇ ಒಂದು ಜೀವಿಯನ್ನೂ ಅವನು ಉಳಿಸುತ್ತಿರಲಿಲ್ಲ. ಆದರೆ ಒಂದು ನಿಶ್ಚಿತ ಅವಧಿಯವರೆಗೆ ಅವನು ಅವರಿಗೆ ಕಾಲಾವಕಾಶ ನೀಡುತ್ತಾನೆ. ಅವರ ಅವಧಿಯೇನಾದರೂ ಬಂದುಬಿಟ್ಟರೆ (ಅವರಿಗೆ ಪಾರಾಗಲು ಸಾಧ್ಯವಿಲ್ಲ). ನಿಶ್ಚಯವಾಗಿಯೂ ಅಲ್ಲಾಹು ತನ್ನ ದಾಸರನ್ನು ನೋಡುತ್ತಿದ್ದಾನೆ.