The Noble Qur'an Encyclopedia
Towards providing reliable exegeses and translations of the meanings of the Noble Qur'an in the world languagesThose who set the ranks [As-Saaffat] - Kannada translation
Surah Those who set the ranks [As-Saaffat] Ayah 182 Location Maccah Number 37
ಸಾಲುಗಟ್ಟಿ ನಿಂತ ದೇವದೂತರುಗಳ ಮೇಲಾಣೆ!
ತೀಕ್ಷ್ಣವಾಗಿ ಗದರಿಸುವವರ ಮೇಲಾಣೆ!
ಉಪದೇಶವನ್ನು ಪಠಿಸುವವರ ಮೇಲಾಣೆ!
ಖಂಡಿತವಾಗಿಯೂ ನಿಮ್ಮ ದೇವನು ಏಕೈಕನಾಗಿದ್ದಾನೆ.
ಅವನು ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಪರಿಪಾಲಕ ಹಾಗೂ ಉದಯ ಸ್ಥಾನಗಳ ಪರಿಪಾಲಕನಾಗಿದ್ದಾನೆ.
ನಿಶ್ಚಯವಾಗಿಯೂ ನಾವು ಸಮೀಪದ ಆಕಾಶವನ್ನು ನಕ್ಷತ್ರಗಳ ಶೃಂಗಾರದಿಂದ ಅಲಂಕರಿಸಿದ್ದೇವೆ.
ವಿದ್ರೋಹಿಗಳಾದ ಎಲ್ಲಾ ಶೈತಾನರಿಂದ ನಾವು ಅದನ್ನು ಭದ್ರಪಡಿಸಿದ್ದೇವೆ.
ಉಪರಿಲೋಕದ ದೇವದೂತರುಗಳ ಮಾತುಗಳಿಗೆ ಕಿವಿಗೊಡಲು ಅವರಿಗೆ ಸಾಧ್ಯವಾಗುವುದಿಲ್ಲ. ಎಲ್ಲಾ ದಿಕ್ಕುಗಳಿಂದಲೂ ಅವರಿಗೆ ಎಸೆಯಲಾಗುತ್ತದೆ.
ಅವರನ್ನು ಓಡಿಸುವುದಕ್ಕಾಗಿ. ಅವರಿಗೆ ಶಾಶ್ವತ ಶಿಕ್ಷೆಯೂ ಇದೆ.
ಆದರೆ, ಅವರಲ್ಲಿ ಯಾರಾದರೂ (ದೇವದೂತರ) ಮಾತನ್ನು ಕದ್ದು ಕೇಳಿ ಓಡಿದರೆ, (ತಕ್ಷಣ) ಜ್ವಲಿಸುವ ಒಂದು ಜ್ವಾಲೆಯು ಅವನನ್ನು ಹಿಂಬಾಲಿಸುತ್ತದೆ.
(ಪ್ರವಾದಿಯವರೇ) ಅವರೊಡನೆ ಕೇಳಿರಿ: “ಅವರನ್ನು ಸೃಷ್ಟಿಸುವುದು ಕಷ್ಟವೋ? ಅಥವಾ ನಾವು ಸೃಷ್ಟಿಸಿದ ಇತರ ಸೃಷ್ಟಿಗಳನ್ನೋ?” ನಿಶ್ಚಯವಾಗಿಯೂ ನಾವು ಅವರನ್ನು ಅಂಟಿಕೊಳ್ಳುವ ಜೇಡಿಮಣ್ಣಿನಿಂದ ಸೃಷ್ಟಿಸಿದ್ದೇವೆ.
ಅಲ್ಲ, ನಿಮಗೆ ಅಚ್ಚರಿಯಾಗುತ್ತದೆ.[1] ಆದರೆ ಅವರು ತಮಾಷೆ ಮಾಡುತ್ತಾರೆ!
ಅವರಿಗೆ ಉಪದೇಶ ನೀಡಲಾದರೆ ಅವರು ಅದನ್ನು ಸ್ವೀಕರಿಸುವುದಿಲ್ಲ.
ಅವರು ಯಾವುದಾದರೂ ದೃಷ್ಟಾಂತವನ್ನು ಕಂಡರೆ ಲೇವಡಿ ಮಾಡುತ್ತಾರೆ.
ಅವರು ಹೇಳುತ್ತಾರೆ: “ಇದು ಸ್ಪಷ್ಟ ಮಾಟಗಾರಿಕೆಯಲ್ಲದೆ ಇನ್ನೇನಲ್ಲ.
ನಾವು ಸತ್ತು ಮಣ್ಣು ಮತ್ತು ಮೂಳೆಗಳಾಗಿ ಬಿಟ್ಟ ಬಳಿಕ ನಮ್ಮನ್ನು ಪುನಃ ಜೀವ ನೀಡಿ ಎಬ್ಬಿಸಲಾಗುವುದೇ?
ಮತ್ತು ನಮ್ಮ ಪೂರ್ವಜರನ್ನು ಕೂಡ?”
ಹೇಳಿರಿ: “ಹೌದು! ನೀವು ಅವಮಾನಿತರಾಗುವಿರಿ.”
ಅದು ಒಂದು ತೀಕ್ಷ್ಣ ಗದರಿಕೆ ಮಾತ್ರವಾಗಿರುವುದು. ಆಗ ಅಗೋ! ಅವರು ನೋಡ ತೊಡಗುವರು.
ಅವರು ಹೇಳುವರು: “ಅಯ್ಯೋ! ನಮ್ಮ ದುರ್ಗತಿಯೇ! ಇದು ಪ್ರತಿಫಲದ ದಿನ!”
ಇದು ನೀವು ನಿಷೇಧಿಸುತ್ತಿದ್ದ ಅಂತಿಮ ತೀರ್ಪು ನೀಡುವ ದಿನವಾಗಿದೆ.
(ಅಲ್ಲಾಹು ಆದೇಶಿಸುವನು): “ಅಕ್ರಮವೆಸಗಿದವರನ್ನು, ಅವರ ಸಹಚರರನ್ನು ಮತ್ತು ಅವರು ಆರಾಧಿಸುತ್ತಿದ್ದವುಗಳನ್ನು ಒಟ್ಟುಗೂಡಿಸಿರಿ.
ಅಲ್ಲಾಹನನ್ನು ಬಿಟ್ಟು (ಆರಾಧಿಸುತ್ತಿದ್ದವುಗಳನ್ನು). ಅವರೆಲ್ಲರಿಗೂ ನರಕದ ದಾರಿಯನ್ನು ತೋರಿಸಿ.
ಅವರನ್ನು ನಿಲ್ಲಿಸಿ! ಅವರೊಡನೆ ಪ್ರಶ್ನಿಸಬೇಕಾಗಿದೆ.”
(ಅವರೊಡನೆ ಕೇಳಲಾಗುವುದು): “ನಿಮಗೇನಾಗಿದೆ? ನೀವೇಕೆ ಪರಸ್ಪರ ಸಹಾಯ ಮಾಡುವುದಿಲ್ಲ?”
ಅಲ್ಲ, ವಾಸ್ತವವಾಗಿ ಇಂದು ಅವರು (ಸಂಪೂರ್ಣ) ಶರಣಾಗಿದ್ದಾರೆ.
ಅವರಲ್ಲಿ ಒಬ್ಬರು ಇನ್ನೊಬ್ಬರ ಕಡೆಗೆ ತಿರುಗಿ ಪ್ರಶ್ನಿಸುವರು.
ಅವರು ಹೇಳುವರು: “ನಿಶ್ಚಯವಾಗಿಯೂ ನೀವು ನಮ್ಮ ಬಲಭಾಗದಿಂದ ನಮ್ಮ ಬಳಿಗೆ ಬರುತ್ತಿದ್ದಿರಿ.”
ಅವರು ಉತ್ತರಿಸುವರು: “ಅಲ್ಲ, ನೀವು ಸತ್ಯವಿಶ್ವಾಸಿಗಳಾಗಿರಲಿಲ್ಲ.
ನಮಗೆ ನಿಮ್ಮ ಮೇಲೆ ಯಾವುದೇ ಅಧಿಕಾರವಿರಲಿಲ್ಲ. ಬದಲಿಗೆ, ನೀವು ಅತಿರೇಕಿಗಳಾದ ಜನರಾಗಿದ್ದಿರಿ.
ಆದ್ದರಿಂದ ನಮ್ಮ ಪರಿಪಾಲಕನ (ಅಲ್ಲಾಹನ) ವಚನವು ನಮ್ಮ ಮೇಲೆ ಖಾತ್ರಿಯಾಯಿತು. ನಿಶ್ಚಯವಾಗಿಯೂ ನಾವು ಶಿಕ್ಷೆಯ ರುಚಿಯನ್ನು ನೋಡುವೆವು.
ನಾವು ನಿಮ್ಮನ್ನು ದಾರಿತಪ್ಪಿಸಿದೆವು. (ಏಕೆಂದರೆ) ನಾವು ಸ್ವತಃ ದಾರಿತಪ್ಪಿದ್ದೆವು.”
ಆದ್ದರಿಂದ ಆ ದಿನದಂದು ಅವರೆಲ್ಲರೂ ಶಿಕ್ಷೆಯಲ್ಲಿ ಪಾಲುದಾರರಾಗುವರು.
ನಿಶ್ಚಯವಾಗಿಯೂ ನಾವು ಅಪರಾಧಿಗಳೊಡನೆ ಹೀಗೆಯೇ ವರ್ತಿಸುವೆವು.
ಅವರೊಡನೆ, “ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ” ಎಂದು ಹೇಳಲಾದರೆ ಅವರು ಅಹಂಕಾರ ತೋರುತ್ತಿದ್ದರು.
ಅವರು ಹೇಳುತ್ತಿದ್ದರು: “ಒಬ್ಬ ಮಾನಸಿಕ ಅಸ್ವಸ್ಥ ಕವಿಯ ಮಾತು ಕೇಳಿ ನಾವು ನಮ್ಮ ದೇವರುಗಳನ್ನು ಬಿಟ್ಟುಬಿಡಬೇಕೇ?”
ಅಲ್ಲ, ವಾಸ್ತವವಾಗಿ ಅವರು (ಪ್ರವಾದಿ) ಸತ್ಯದೊಂದಿಗೆ ಬಂದಿದ್ದರು ಮತ್ತು ಅವರು (ಮೊದಲಿನ) ಪ್ರವಾದಿಗಳನ್ನು ದೃಢೀಕರಿಸಿದ್ದರು.
ನಿಶ್ಚಯವಾಗಿಯೂ ನೀವು ಯಾತನಾಮಯ ಶಿಕ್ಷೆಯ ರುಚಿಯನ್ನು ನೋಡುವಿರಿ.
ನೀವು ಮಾಡಿದ ಕರ್ಮಗಳ ಪ್ರತಿಫಲವನ್ನೇ ಹೊರತು ಬೇರೇನೂ ನಿಮಗೆ ನೀಡಲಾಗುವುದಿಲ್ಲ.
ಆದರೆ, ಅಲ್ಲಾಹನ ನಿಷ್ಕಳಂಕ ದಾಸರು ಇದರಿಂದ ಹೊರತಾಗಿದ್ದಾರೆ.
ಅವರಿಗೆ ನಿಶ್ಚಿತ ಉಪಜೀವನವಿದೆ.
ಹಣ್ಣು-ಹಂಪಲುಗಳಿವೆ! ಅವರನ್ನು ಅಲ್ಲಿ ಗೌರವಿಸಲಾಗುವುದು.
ಸುಖಸಮೃದ್ಧವಾದ ಸ್ವರ್ಗೋದ್ಯಾನಗಳಲ್ಲಿ.
ಅವರು ಪರಸ್ಪರ ಎದುರು-ಬದುರಾಗಿ ಮಂಚಗಳಲ್ಲಿ ಕುಳಿತಿರುವರು.
ಹರಿಯುವ ಚಿಲುಮೆಯ ನೀರು ತುಂಬಿದ ಲೋಟಗಳನ್ನು ಅವರ ಸುತ್ತಲೂ ತರಲಾಗುವುದು.
ಅದು ಬೆಳ್ಳಗಿದ್ದು ಕುಡಿಯುವವರಿಗೆ ಆಹ್ಲಾದಕರವಾಗಿರುವುದು.
ಅದರಲ್ಲಿ ಯಾವುದೇ ಅಡ್ಡ ಪರಿಣಾಮವಿಲ್ಲ. ಅದರಿಂದ ನಶೆಯೂ ಉಂಟಾಗುವುದಿಲ್ಲ.
ದೃಷ್ಟಿಯನ್ನು ನಿಯಂತ್ರಿಸುವ[1] ಮತ್ತು ಅರಳಿದ ನೇತ್ರಗಳುಳ್ಳ ಅಪ್ಸರೆಯರು ಅವರ ಬಳಿಯಿರುವರು.
ಅವರು ಜೋಪಾನವಾಗಿಡಲಾದ ಮೊಟ್ಟೆಗಳಂತೆ ಇರುವರು.
ಅವರು ಪರಸ್ಪರ ಒಬ್ಬರು ಇನ್ನೊಬ್ಬರ ಕಡೆಗೆ ತಿರುಗಿ ಪ್ರಶ್ನಿಸುವರು.
ಅವರಲ್ಲಿ ಒಬ್ಬನು ಹೇಳುವನು: “ನಿಜಕ್ಕೂ ನನಗೊಬ್ಬ ಗೆಳೆಯನಿದ್ದನು.
ಅವನು ಕೇಳುತ್ತಿದ್ದನು: ನೀನು (ಪರಲೋಕದಲ್ಲಿ) ವಿಶ್ವಾಸವಿಡುತ್ತೀಯಾ?
ನಾವು ಸತ್ತು ಮಣ್ಣು ಮತ್ತು ಮೂಳೆಗಳಾಗಿ ಬಿಟ್ಟ ಬಳಿಕವೂ ನಮಗೆ ನಮ್ಮ ಕರ್ಮಫಲಗಳನ್ನು ನೀಡಲಾಗುತ್ತದೆಯೇ?”
ಅವನು (ಅವನು ತನ್ನ ಬಳಿಯಿರುವವರೊಡನೆ) ಕೇಳುವನು: “ನೀವು ಅವನನ್ನು ನೋಡಲು ಬಯಸುತ್ತೀರಾ?”
ಆಗ ಅವನು ಇಣುಕಿ ನೋಡಿದಾಗ ಆತ ನರಕದ ಮಧ್ಯಭಾಗದಲ್ಲಿರುವುದನ್ನು ಕಾಣುವನು.
ಅವನು ಹೇಳುವನು: “ಅಲ್ಲಾಹನಾಣೆ! ನೀನು ನನ್ನನ್ನು ಇನ್ನೇನು ನಾಶ ಮಾಡಿಯೇ ಬಿಡುತ್ತಿದ್ದೆ.
ನನ್ನ ಪರಿಪಾಲಕನ (ಅಲ್ಲಾಹನ) ಅನುಗ್ರಹವಿಲ್ಲದಿರುತ್ತಿದ್ದರೆ, ನಾನು ಕೂಡ (ನರಕಕ್ಕೆ) ಹಾಜರುಪಡಿಸಲಾಗುವವರಲ್ಲಿ ಸೇರಿರುತ್ತಿದ್ದೆ.”
(ಸ್ವರ್ಗವಾಸಿಗಳು ಹೇಳುವರು): “ಇನ್ನು ನಾವು ಸಾಯುವುದಿಲ್ಲ.
ನಮ್ಮ ಮೊದಲ ಸಾವಿನ ಹೊರತು. ಇನ್ನು ನಮಗೆ ಶಿಕ್ಷೆಯೂ ಇಲ್ಲ.”
ನಿಶ್ಚಯವಾಗಿಯೂ ಇದೇ ಮಹಾ ವಿಜಯ.
ಕರ್ಮವೆಸಗುವವರು ಇಂತಹ (ವಿಜಯಕ್ಕಾಗಿಯೇ) ಕರ್ಮವೆಸಗಲಿ.
ಈ ಆತಿಥ್ಯವು ಉತ್ತಮವೋ? ಅಥವಾ ಝಕ್ಕೂಮ್ ಮರವೋ?[1]
ನಿಶ್ಚಯವಾಗಿಯೂ ನಾವು ಅದನ್ನು ಅಕ್ರಮಿಗಳಿಗೆ ಪರೀಕ್ಷೆಯಾಗಿ ಮಾಡಿದ್ದೇವೆ.
ಅದು ನರಕಾಗ್ನಿಯ ತಳಭಾಗದಿಂದ ಹೊರಹೊಮ್ಮುವ ಮರವಾಗಿದೆ.
ಅದರ ಮೊಗ್ಗುಗಳು ಶೈತಾನರ ತಲೆ ಬುರುಡೆಗಳಂತಿವೆ.
ನಿಶ್ಚಯವಾಗಿಯೂ ಅವರು ಅದರಿಂದ ತಿನ್ನುವರು ಮತ್ತು ಹೊಟ್ಟೆ ತುಂಬಿಸುವರು.
ನಂತರ ಅವರಿಗೆ ಮಿಶ್ರಣಗೊಂಡ ಕುದಿಯುವ ಪಾನೀಯವನ್ನು ನೀಡಲಾಗುವುದು.
ನಂತರ ಅವರೆಲ್ಲರೂ ಮರಳುವುದು ನರಕದ ಕಡೆಗಾಗಿದೆ.
ನಿಶ್ಚಯವಾಗಿಯೂ ಅವರು ತಮ್ಮ ಪೂರ್ವಜರನ್ನು ದಾರಿತಪ್ಪಿದ್ದಾಗಿ ಕಂಡಿದ್ದರು.
ಇವರು ಅವರ ಹೆಜ್ಜೆಗಳನ್ನು (ಹಿಂಬಾಲಿಸಿ) ಧಾವಿಸುತ್ತಿದ್ದಾರೆ.
ಇವರಿಗಿಂತ ಮೊದಲಿನ ಜನರಲ್ಲಿ ಹೆಚ್ಚಿನವರು ದಾರಿತಪ್ಪಿದ್ದರು.
ನಾವು ಅವರಿಗೆ ಮುನ್ನೆಚ್ಚರಿಕೆಗಾರರನ್ನು (ಪ್ರವಾದಿಗಳನ್ನು) ಕಳುಹಿಸಿದ್ದೆವು.
ಮುನ್ನೆಚ್ಚರಿಕೆ ನೀಡಲಾದವರ ಅಂತ್ಯವು ಹೇಗಿತ್ತೆಂದು ನೋಡಿರಿ.
ಅಲ್ಲಾಹನ ನಿಷ್ಕಳಂಕ ದಾಸರು ಇದಕ್ಕೆ ಹೊರತಾಗಿದ್ದಾರೆ.
ನೂಹ್ ನಮ್ಮನ್ನು ಕರೆದು ಪ್ರಾರ್ಥಿಸಿದ್ದರು. ನಾವು ಪ್ರಾರ್ಥನೆಗೆ ಎಷ್ಟು ಚೆನ್ನಾಗಿ ಉತ್ತರಿಸುತ್ತೇವೆ.
ನಾವು ಅವರನ್ನು ಮತ್ತು ಅವರ ಜನರನ್ನು ಮಹಾ ದುರಂತದಿಂದ ಪಾರು ಮಾಡಿದೆವು.
ನಾವು ಅವರ ಸಂತಾನವನ್ನು (ಭೂಮಿಯಲ್ಲಿ) ಅವಶೇಷಿಸಿದವರನ್ನಾಗಿ ಮಾಡಿದೆವು.
ನಾವು ನಂತರದ ತಲೆಮಾರುಗಳಲ್ಲಿ ಅವರ (ಉತ್ತಮ ಹೆಸರನ್ನು) ಉಳಿಸಿದೆವು.
ಸರ್ವಲೋಕದವರಲ್ಲಿ ನೂಹರ ಮೇಲೆ ಶಾಂತಿಯಿರಲಿ!
ನಿಶ್ಚಯವಾಗಿಯೂ ನಾವು ನೀತಿವಂತರಿಗೆ ಹೀಗೆಯೇ ಪ್ರತಿಫಲವನ್ನು ನೀಡುವೆವು.
ನಿಶ್ಚಯವಾಗಿಯೂ ಅವರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಿ ಸೇರಿದ್ದಾರೆ.
ನಂತರ ನಾವು ಉಳಿದವರನ್ನು ಮುಳುಗಿಸಿದೆವು.
ನಿಶ್ಚಯವಾಗಿಯೂ ಇಬ್ರಾಹೀಮ್ ಕೂಡ ಅವರ ಗುಂಪಿಗೆ ಸೇರಿದವರು.
ಅವರು ಅವರ ಪರಿಪಾಲಕನ (ಅಲ್ಲಾಹನ) ಬಳಿಗೆ ಸುರಕ್ಷಿತ ಹೃದಯದೊಂದಿಗೆ ಬಂದ ಸಂದರ್ಭ!
ಅವರು ತಮ್ಮ ತಂದೆ ಮತ್ತು ಊರ ಜನರೊಡನೆ ಕೇಳಿದರು: “ನೀವು ಏನು ಆರಾಧಿಸುತ್ತಿದ್ದೀರಿ?
ನೀವು ಅಲ್ಲಾಹನನ್ನು ಬಿಟ್ಟು ಮಿಥ್ಯ ದೇವರುಗಳನ್ನು ಬಯಸುತ್ತೀರಾ?
ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಬಗ್ಗೆ ನಿಮ್ಮ ಕಲ್ಪನೆಯೇನು?”
ನಂತರ ಅವರು ನಕ್ಷತ್ರಗಳ ಕಡೆಗೆ ಒಂದು ನೋಟವನ್ನು ಬೀರಿದರು.
ಅವರು ಹೇಳಿದರು: “ನಾನು ಅಸ್ವಸ್ಥನಾಗಿದ್ದೇನೆ.”
ಆಗ ಜನರು ಇಬ್ರಾಹೀಮರನ್ನು ಬಿಟ್ಟು ತಿರುಗಿ ನಡೆದರು.
ಇಬ್ರಾಹೀಮ್ ಅವರ ದೇವರುಗಳ ಕಡೆಗೆ ತಿರುಗಿ ಕೇಳಿದರು: “ನೀವೇಕೆ ತಿನ್ನುವುದಿಲ್ಲ?
ನಿಮಗೇನಾಗಿದೆ? ನೀವೇಕೆ ಮಾತನಾಡುವುದಿಲ್ಲ?”
ನಂತರ ಅವರು ಅವುಗಳ ಕಡೆಗೆ ತಿರುಗಿ ಬಲಗೈಯಿಂದ ಬಲವಾದ ಏಟು ಕೊಟ್ಟರು.
ಜನರು ಅವರ ಬಳಿಗೆ ಓಡೋಡಿ ಬಂದರು.
ಇಬ್ರಾಹೀಮ್ ಕೇಳಿದರು: “ನೀವೇ ಸ್ವತಃ ಕಡೆದು ನಿರ್ಮಿಸಿದ್ದನ್ನು ನೀವು ಆರಾಧಿಸುತ್ತಿದ್ದೀರಾ?
ವಾಸ್ತವವಾಗಿ, ಅಲ್ಲಾಹನೇ ನಿಮ್ಮನ್ನು ಮತ್ತು ನೀವು ನಿರ್ಮಿಸುವುದನ್ನು ಸೃಷ್ಟಿಸಿದವನು.”
ಜನರು ಹೇಳಿದರು: “ನೀವು ಅವನಿಗೆ ಒಂದು ದೊಡ್ಡ ಅಗ್ನಿಕುಂಡವನ್ನು ನಿರ್ಮಿಸಿ, ಅವನನ್ನು ಜ್ವಲಿಸುವ ಅಗ್ನಿಗೆ ಎಸೆಯಿರಿ.”
ಅವರು ಇಬ್ರಾಹೀಮರನ್ನು ಕುತಂತ್ರದಿಂದ ನಾಶ ಮಾಡಲು ಬಯಸಿದ್ದರು. ಆದರೆ ನಾವು ಅವರನ್ನು ಅತ್ಯಂತ ಅಧಮರನ್ನಾಗಿ ಮಾಡಿದೆವು.
ಇಬ್ರಾಹೀಮ್ ಹೇಳಿದರು: “ನಿಶ್ಚಯವಾಗಿಯೂ ನಾನು ನನ್ನ ಪರಿಪಾಲಕನ (ಅಲ್ಲಾಹನ) ಕಡೆಗೆ ತೆರಳುತ್ತೇನೆ. ಅವನು ನನಗೆ ದಾರಿ ತೋರಿಸುವನು.
ನನ್ನ ಪರಿಪಾಲಕನೇ! ನನಗೆ ನೀತಿವಂತರಲ್ಲಿ ಸೇರಿದ ಮಗುವನ್ನು ಕರುಣಿಸು.”
ಆಗ ನಾವು ಅವರಿಗೆ ಸಹಿಷ್ಣುತೆಯುಳ್ಳ ಮಗು ಜನಿಸುವ ಬಗ್ಗೆ ಸುವಾರ್ತೆಯನ್ನು ತಿಳಿಸಿದೆವು.
ನಂತರ ಅವನು (ಮಗು) ತಂದೆಯೊಂದಿಗೆ ಓಡಾಡುವ ಪ್ರಾಯಕ್ಕೆ ತಲುಪಿದಾಗ ಅವರು (ಇಬ್ರಾಹೀಂ) ಹೇಳಿದರು: “ಮಗೂ! ನಾನು ನಿನ್ನ ಕತ್ತು ಕೊಯ್ಯುತ್ತಿರುವಂತೆ ಕನಸು ಕಾಣುತ್ತಿದ್ದೇನೆ. ನಿನ್ನ ಅಭಿಪ್ರಾಯವೇನೆಂದು ಹೇಳು?” ಮಗ ಹೇಳಿದನು: “ಅಪ್ಪಾ! ನಿಮಗೆ ಆಜ್ಞಾಪಿಸಲಾಗಿರುವುದನ್ನು ನಿರ್ವಹಿಸಿರಿ. ಅಲ್ಲಾಹು ಬಯಸಿದರೆ ನಿಶ್ಚಯವಾಗಿಯೂ ನೀವು ನನ್ನನ್ನು ತಾಳ್ಮೆ ವಹಿಸುವವರಲ್ಲಿ ಕಾಣುವಿರಿ.”
ನಂತರ ಅವರಿಬ್ಬರೂ (ಅಲ್ಲಾಹನ ಆಜ್ಞೆಗೆ) ಶರಣಾಗಿ, ಅವರು ಮಗನನ್ನು ಹಣೆಯ ಮೇಲೆ ಮಲಗಿಸಿದಾಗ.
ನಾವು ಅವರನ್ನು ಕರೆದು ಹೇಳಿದೆವು: “ಓ ಇಬ್ರಾಹೀಮ್!
ನಿಶ್ಚಯವಾಗಿಯೂ ನೀವು ಕನಸನ್ನು ನಿಜಪಡಿಸಿದ್ದೀರಿ.” ನಿಶ್ಚಯವಾಗಿಯೂ ನಾವು ನೀತಿವಂತರಿಗೆ ಈ ರೀತಿ ಪ್ರತಿಫಲವನ್ನು ನೀಡುತ್ತೇವೆ.
ನಿಶ್ಚಯವಾಗಿಯೂ ಇದು ಸ್ಪಷ್ಟ ಪರೀಕ್ಷೆಯಾಗಿತ್ತು.
ನಾವು ಅವರ (ಮಗನ) ಬದಲಿಗೆ ಬಲಿ ನೀಡಲು ಒಂದು ಮಹಾ ಬಲಿಮೃಗವನ್ನು ನೀಡಿದೆವು.
ನಾವು ಅವರ (ಇಬ್ರಾಹೀಮರ) ಕೀರ್ತಿಯನ್ನು ಅವರ ನಂತರದವರಲ್ಲಿ ಉಳಿಸಿದೆವು.
ಇಬ್ರಾಹೀಮರ ಮೇಲೆ ಶಾಂತಿಯಿರಲಿ!
ನಾವು ನೀತಿವಂತರಿಗೆ ಈ ರೀತಿ ಪ್ರತಿಫಲವನ್ನು ನೀಡುತ್ತೇವೆ.
ನಿಶ್ಚಯವಾಗಿಯೂ ಅವರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಿ ಸೇರಿದವರಾಗಿದ್ದರು.
ನಾವು ಅವರಿಗೆ ಇಸ್‍ಹಾಕರ ಜನನದ ಬಗ್ಗೆ ಸುವಾರ್ತೆಯನ್ನು ತಿಳಿಸಿದೆವು. ಅವರು ಸಜ್ಜನರಲ್ಲಿ ಸೇರಿದ ಒಬ್ಬ ಪ್ರವಾದಿಯಾಗಿದ್ದರು.
ನಾವು ಅವರಿಗೆ ಮತ್ತು ಇಸ್‍ಹಾಕರಿಗೆ ಸಮೃದ್ಧಿಯನ್ನು ದಯಪಾಲಿಸಿದೆವು. ಅವರಿಬ್ಬರ ಸಂತಾನದಲ್ಲಿ ಒಳಿತು ಮಾಡುವವರಿದ್ದಾರೆ. ಸ್ವತಃ ಅವರೊಡನೆಯೇ ಸ್ಪಷ್ಟವಾಗಿ ಅಕ್ರಮವೆಸಗುವವರೂ ಇದ್ದಾರೆ.
ನಿಶ್ಚಯವಾಗಿಯೂ ನಾವು ಮೂಸಾ ಮತ್ತು ಹಾರೂನರಿಗೆ ಉಪಕಾರ ಮಾಡಿದ್ದೆವು.
ನಾವು ಅವರನ್ನು ಮತ್ತು ಅವರ ಜನರನ್ನು ಮಹಾ ದುರಂತದಿಂದ ರಕ್ಷಿಸಿದೆವು.
ನಾವು ಅವರಿಗೆ ಸಹಾಯ ಮಾಡಿದೆವು. ಆಗ ಅವರೇ ವಿಜಯಿಗಳಾದರು.
ನಾವು ಅವರಿಗೆ (ವಿಷಯಗಳನ್ನು) ಸ್ಪಷ್ಟಪಡಿಸುವ ಗ್ರಂಥವನ್ನು ನೀಡಿದೆವು.
ನಾವು ಅವರನ್ನು ನೇರ ಮಾರ್ಗದಲ್ಲಿ ದೃಢವಾಗಿ ನಿಲ್ಲಿಸಿದೆವು.
ನಾವು ಅವರ ಕೀರ್ತಿಯನ್ನು ನಂತರದ ತಲೆಮಾರುಗಳಲ್ಲಿ ಉಳಿಸಿದೆವು.
ಮೂಸಾ ಮತ್ತು ಹಾರೂನರ ಮೇಲೆ ಶಾಂತಿಯಿರಲಿ!
ನಿಶ್ಚಯವಾಗಿಯೂ ನಾವು ನೀತಿವಂತರಿಗೆ ಈ ರೀತಿ ಪ್ರತಿಫಲವನ್ನು ನೀಡುತ್ತೇವೆ.
ನಿಶ್ಚಯವಾಗಿಯೂ ಅವರಿಬ್ಬರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಿ ಸೇರಿದವರಾಗಿದ್ದರು.
ನಿಶ್ಚಯವಾಗಿಯೂ ಇಲ್ಯಾಸ್ ಪ್ರವಾದಿಗಳಲ್ಲಿ ಒಬ್ಬರಾಗಿದ್ದರು.
ಅವರು ತಮ್ಮ ಜನರೊಡನೆ ಹೇಳಿದ ಸಂದರ್ಭ: “ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?”
ನೀವು ಬಾಲ್ (ವಿಗ್ರಹವನ್ನು) ಕರೆದು ಪ್ರಾರ್ಥಿಸುತ್ತೀರಾ? ಮತ್ತು ಅತ್ಯುತ್ತಮ ಸೃಷ್ಟಿಕರ್ತನನ್ನು ತೊರೆಯುತ್ತೀರಾ?
ಅಂದರೆ ನಿಮ್ಮ ಮತ್ತು ನಿಮ್ಮ ಪೂರ್ವಜರ ಪರಿಪಾಲಕನಾದ ಅಲ್ಲಾಹನನ್ನು?
ಆದರೆ ಅವರು ಅವರನ್ನು ನಿಷೇಧಿಸಿದರು. ನಿಶ್ಚಯವಾಗಿಯೂ ಅವರನ್ನು (ಶಿಕ್ಷೆಗೆ) ಹಾಜರುಪಡಿಸಲಾಗುವುದು.
ಅಲ್ಲಾಹನ ನಿಷ್ಕಳಂಕ ದಾಸರು ಇದಕ್ಕೆ ಹೊರತಾಗಿದ್ದಾರೆ.
ನಂತರದ ತಲೆಮಾರುಗಳಲ್ಲಿ ನಾವು ಅವರ ಕೀರ್ತಿಯನ್ನು ಉಳಿಸಿದೆವು.
ಇಲ್ಯಾಸರ ಮೇಲೆ ಶಾಂತಿಯಿರಲಿ!
ನಿಶ್ಚಯವಾಗಿಯೂ ನಾವು ನೀತಿವಂತರಿಗೆ ಈ ರೀತಿ ಪ್ರತಿಫಲವನ್ನು ನೀಡುತ್ತೇವೆ.
ನಿಶ್ಚಯವಾಗಿಯೂ ಅವರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಿ ಸೇರಿದವರಾಗಿದ್ದರು.
ನಿಶ್ಚಯವಾಗಿಯೂ ಲೂತ್ ಸಂದೇಶವಾಹಕರಲ್ಲಿ ಸೇರಿದವರಾಗಿದ್ದರು.
ನಾವು ಅವರನ್ನು ಮತ್ತು ಅವರ ಕುಟುಂಬವನ್ನು ಸಂಪೂರ್ಣವಾಗಿ ರಕ್ಷಿಸಿದ ಸಂದರ್ಭ!
ಹಿಂದೆ ಉಳಿದವರಲ್ಲಿ ಸೇರಿದ ಒಬ್ಬ ವೃದ್ಧೆಯ ಹೊರತು.
ನಂತರ ಇತರರನ್ನು ನಾವು ನಾಶ ಮಾಡಿದೆವು.
ನೀವು ಬೆಳಗಾಗುವಾಗ ಅವರ ಊರುಗಳ ಬಳಿಯಿಂದ ಸಾಗುತ್ತೀರಿ.
ರಾತ್ರಿ ಕೂಡ. ಆದರೂ ನೀವು ಆಲೋಚಿಸುವುದಿಲ್ಲವೇ?
ನಿಶ್ಚಯವಾಗಿಯೂ ಯೂನುಸ್ ಸಂದೇಶವಾಹಕರಲ್ಲಿ ಸೇರಿದವರಾಗಿದ್ದರು.
ಅವರು ತುಂಬಿ ತುಳುಕುವ ನಾವೆಯ ಬಳಿಗೆ ಪಲಾಯನ ಮಾಡಿದ ಸಂದರ್ಭ!
ನಂತರ ಅಲ್ಲಿ ಚೀಟಿಯೆತ್ತಲಾದಾಗ ಅವರು ಪರಾಜಿತರಾದರು.
ನಂತರ ಅವರು ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದಾಗ ಮೀನು ಅವರನ್ನು ನುಂಗಿತು.
ಆದರೆ ಅವರು ಅಲ್ಲಾಹನ ಪರಿಶುದ್ಧಿಯನ್ನು ಕೊಂಡಾಡುವವರಲ್ಲಿ ಸೇರದಿರುತ್ತಿದ್ದರೆ
ಜನರಿಗೆ ಜೀವ ನೀಡಿ ಎಬ್ಬಿಸಲಾಗುವ ದಿನದವರೆಗೂ ಅವರು ಅದರ ಹೊಟ್ಟೆಯಲ್ಲೇ ಉಳಿಯುತ್ತಿದ್ದರು!
ನಂತರ ನಾವು ಅವರನ್ನು ಬಯಲು ಪ್ರದೇಶಕ್ಕೆ ಎಸೆದೆವು. ಆಗ ಅವರು ಅಸ್ವಸ್ಥರಾಗಿದ್ದರು.
ನಾವು ಅವರಿಗೆ (ನೆರಳು ನೀಡುವ) ಸೋರೆ ಬಳ್ಳಿಯ ಮರವನ್ನು ಬೆಳೆಸಿದೆವು.
ನಾವು ಅವರನ್ನು ಒಂದು ಲಕ್ಷ ಅಥವಾ ಅದಕ್ಕಿಂತಲೂ ಹೆಚ್ಚಿನ ಜನರ ಬಳಿಗೆ ಕಳುಹಿಸಿದೆವು.
ಅವರು (ಆ ಜನರು) ವಿಶ್ವಾಸವಿಟ್ಟರು. ಆದ್ದರಿಂದ ನಾವು ಅವರಿಗೆ ಒಂದು ಕಾಲದವರೆಗೆ ಸುಖ ಜೀವನವನ್ನು ಒದಗಿಸಿದೆವು.
(ಓ ಪ್ರವಾದಿಯವರೇ!) ಅವರೊಂದಿಗೆ ಕೇಳಿರಿ: “ನಿಮ್ಮ ಪರಿಪಾಲಕನಿಗೆ ಹೆಣ್ಣು ಮಕ್ಕಳು ಮತ್ತು ಅವರಿಗೆ ಗಂಡುಮಕ್ಕಳೇ?
ಅಥವಾ ನಾವು ದೇವದೂತರುಗಳನ್ನು ಸ್ತ್ರೀಯರನ್ನಾಗಿ ಸೃಷ್ಟಿಸುವಾಗ ಅವರು ಅಲ್ಲಿ ಉಪಸ್ಥಿತರಿದ್ದರೇ?”
ತಿಳಿಯಿರಿ! ಅವರು ಕೇವಲ ಸುಳ್ಳನ್ನು ಕಲ್ಪಿಸಿ ಹೇಳುತ್ತಿದ್ದಾರೆ.
ಅಲ್ಲಾಹನಿಗೆ ಮಕ್ಕಳಿದ್ದಾರೆಂದು. ನಿಶ್ಚಯವಾಗಿಯೂ ಅವರು ಸುಳ್ಳು ಹೇಳುವವರಾಗಿದ್ದಾರೆ.
ಅಲ್ಲಾಹು ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಿಗೆ ಪ್ರಾಶಸ್ತ್ಯ ನೀಡಿದನೇ?
ನಿಮಗೇನಾಗಿದೆ? ನೀವು ಹೇಗೆ ತೀರ್ಪು ನೀಡುತ್ತಿದ್ದೀರಿ?
ನೀವು ಆಲೋಚಿಸುವುದಿಲ್ಲವೇ?
ಇದಕ್ಕೆ ನಿಮ್ಮ ಬಳಿ ಯಾವುದಾದರೂ ಸ್ಪಷ್ಟ ಸಾಕ್ಷ್ಯಾಧಾರವಿದೆಯೇ?
ಹಾಗಿದ್ದರೆ ನೀವು ನಿಮ್ಮ ಗ್ರಂಥವನ್ನು ತನ್ನಿರಿ. ನೀವು ಸತ್ಯವಂತರಾಗಿದ್ದರೆ!
ಅವರು ಅವನ (ಅಲ್ಲಾಹನ) ಮತ್ತು ಜಿನ್ನ್‌ಗಳ ಮಧ್ಯೆ ಕುಟುಂಬ ಸಂಬಂಧವನ್ನು ಸ್ಥಾಪಿಸಿದ್ದರು. ಆದರೆ (ಇಂತಹ ನಂಬಿಕೆಯಿರುವ ಜನರನ್ನು) ನಿಶ್ಚಯವಾಗಿಯೂ ಶಿಕ್ಷೆಗೆ ಹಾಜರುಪಡಿಸಲಾಗುವುದೆಂದು ಜಿನ್ನ್‌ಗಳಿಗೆ ತಿಳಿದಿದೆ.
ಅವರು (ಅಲ್ಲಾಹನ ಬಗ್ಗೆ) ವರ್ಣಿಸಿ ಹೇಳುವ ಇಂತಹ ಸುಳ್ಳುಗಳಿಂದ ಅಲ್ಲಾಹು ಎಷ್ಟೋ ಪರಿಶುದ್ಧನಾಗಿದ್ದಾನೆ.
ಆದರೆ ಅಲ್ಲಾಹನ ನಿಷ್ಕಳಂಕ ದಾಸರು (ಇದರಿಂದ) ಹೊರತಾಗಿದ್ದಾರೆ.
ನಿಶ್ಚಯವಾಗಿಯೂ ನೀವು ಮತ್ತು ನೀವು ಆರಾಧಿಸುತ್ತಿರುವ ದೇವರುಗಳು.
ಯಾರನ್ನೂ ಅವನಿಂದ (ಅಲ್ಲಾಹನಿಂದ) ತಪ್ಪಿಸಿಬಿಡಲು ನಿಮಗೆ ಸಾಧ್ಯವಿಲ್ಲ.
ನರಕವಾಸಿಯಾಗುವವನ ಹೊರತು.
(ದೇವದೂತರುಗಳು ಹೇಳುತ್ತಾರೆ): “ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದು ನಿಶ್ಚಿತ ಸ್ಥಾನವಿದೆ.
ನಿಶ್ಚಯವಾಗಿಯೂ ನಾವು (ಅಲ್ಲಾಹನನ್ನು ಆರಾಧಿಸಲು) ಸಾಲುಗಟ್ಟಿ ನಿಲ್ಲುತ್ತೇವೆ.
ನಿಶ್ಚಯವಾಗಿಯೂ ನಾವು (ಅಲ್ಲಾಹನ) ಪರಿಶುದ್ಧಿಯನ್ನು ಕೊಂಡಾಡುವವರಾಗಿದ್ದೇವೆ.”
ನಿಶ್ಚಯವಾಗಿಯೂ ಅವರು (ಸತ್ಯನಿಷೇಧಿಗಳು) ಹೇಳುತ್ತಿದ್ದರು:
“ನಮ್ಮ ಬಳಿ ಪೂರ್ವಜರ ಯಾವುದಾದರೂ ಉಪದೇಶವು ಇರುತ್ತಿದ್ದರೆ.
ನಾವು ಕೂಡ ಅಲ್ಲಾಹನ ನಿಷ್ಕಳಂಕ ದಾಸರಾಗಿರುತ್ತಿದ್ದೆವು.”
ಆದರೂ ಅವರು ಅದನ್ನು (ಪವಿತ್ರ ಕುರ್‌ಆನನ್ನು) ನಿಷೇಧಿಸಿದರು. ಆದ್ದರಿಂದ ಸದ್ಯವೇ ಅವರು ತಿಳಿಯುವರು.
ನಮ್ಮ ವಾಗ್ದಾನವು ಸಂದೇಶವಾಹಕರುಗಳಾದ ನಮ್ಮ ದಾಸರಿಗೆ ಈಗಾಗಲೇ ಜಾರಿಯಾಗಿಬಿಟ್ಟಿದೆ.
(ಅದೇನೆಂದರೆ) ನಿಶ್ಚಯವಾಗಿಯೂ ಅವರಿಗೇ ಸಹಾಯ ಮಾಡಲಾಗುವುದೆಂದು.
ನಿಶ್ಚಯವಾಗಿಯೂ ನಮ್ಮ ಸೈನ್ಯವೇ ವಿಜಯಿಯಾಗುವುದೆಂದು.
ಆದ್ದರಿಂದ ನೀವು ಕೆಲವು ದಿನಗಳ ತನಕ ಅವರಿಂದ ವಿಮುಖರಾಗಿರಿ.
ಅವರನ್ನು ವೀಕ್ಷಿಸುತ್ತಿರಿ. ಅವರು ಕೂಡ ಮುಂದೆ (ಏನಾಗುವುದೆಂದು) ನೋಡುವರು.
ಅವರು ನಮ್ಮ ಶಿಕ್ಷೆಗಾಗಿ ತ್ವರೆ ಮಾಡುತ್ತಿದ್ದಾರೆಯೇ?
ಆದರೆ ನಮ್ಮ ಶಿಕ್ಷೆಯು ಅವರ ಅಂಗಳದಲ್ಲಿ ಇಳಿಯುವಾಗ ಮುನ್ನೆಚ್ಚರಿಕೆ ನೀಡಲಾದವರ ಮುಂಜಾನೆಯು ಬಹಳ ನಿಕೃಷ್ಟವಾಗಿರುವುದು!
ಆದ್ದರಿಂದ ನೀವು ಕೆಲವು ದಿನಗಳ ತನಕ ಅವರಿಂದ ವಿಮುಖರಾಗಿರಿ.
ಅವರನ್ನು ವೀಕ್ಷಿಸುತ್ತಿರಿ. ಅವರು ಕೂಡ ಮುಂದೆ (ಏನಾಗುವುದೆಂದು) ನೋಡುವರು.
ಮಹಾ ಪ್ರತಿಷ್ಠೆಯ ಒಡೆಯನಾದ ನಿಮ್ಮ ಪರಿಪಾಲಕನು (ಅಲ್ಲಾಹು) ಅವರು ವರ್ಣಿಸುವ ಎಲ್ಲಾ ಸುಳ್ಳುಗಳಿಂದ ಎಷ್ಟೋ ಪರಿಶುದ್ಧನಾಗಿದ್ದಾನೆ.
ಸಂದೇಶವಾಹಕರುಗಳ ಮೇಲೆ ಶಾಂತಿಯಿರಲಿ!
ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಸರ್ವಸ್ತುತಿ.