عربيEnglish

The Noble Qur'an Encyclopedia

Towards providing reliable exegeses and translations of the meanings of the Noble Qur'an in the world languages

Explained in detail [Fussilat] - Kannada translation

Surah Explained in detail [Fussilat] Ayah 54 Location Maccah Number 41

ಹಾ-ಮೀಮ್.

ಇದು ಪರಮ ದಯಾಳು ಮತ್ತು ಕರುಣಾನಿಧಿಯಾದ (ಅಲ್ಲಾಹನ) ಕಡೆಯಿಂದ ಅವತೀರ್ಣವಾಗಿದೆ.

ಇದು ವಚನಗಳನ್ನು ವಿವರಿಸಿಕೊಡಲಾದ ಗ್ರಂಥವಾಗಿದೆ. ತಿಳುವಳಿಕೆಯಿರುವ ಜನರಿಗೆ ಅರಬ್ಬಿ ಭಾಷೆಯಲ್ಲಿರುವ ಕುರ್‌ಆನ್ ಆಗಿದೆ.

ಇದು ಸುವಾರ್ತೆಯನ್ನು ತಿಳಿಸುವ ಮತ್ತು ಮುನ್ನೆಚ್ಚರಿಕೆ ನೀಡುವ (ಗ್ರಂಥವಾಗಿದೆ). ಆದರೆ ಅವರಲ್ಲಿ ಹೆಚ್ಚಿನವರು ವಿಮುಖರಾಗಿದ್ದಾರೆ. ಅವರು (ಇದಕ್ಕೆ) ಕಿವಿಗೊಡುವುದಿಲ್ಲ.

ಅವರು ಹೇಳಿದರು: “ನೀವು ನಮ್ಮನ್ನು ಯಾವುದರ ಕಡೆಗೆ ಕರೆಯುತ್ತಿದ್ದೀರೋ (ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದ) ರೀತಿಯಲ್ಲಿ ನಮ್ಮ ಹೃದಯಗಳನ್ನು ಮುಚ್ಚಲಾಗಿವೆ. ನಮ್ಮ ಕಿವಿಗಳು ಕಿವುಡಾಗಿವೆ. ನಮ್ಮ ಮತ್ತು ನಿಮ್ಮ ನಡುವೆ ಒಂದು ಪರದೆಯಿದೆ. ಆದ್ದರಿಂದ ನೀವು ಕರ್ಮವೆಸಗಿರಿ. ನಾವು ಕೂಡ ಕರ್ಮವೆಸಗುತ್ತೇವೆ.”

ಹೇಳಿರಿ: “ನಾನು ನಿಮ್ಮಂತೆಯೇ ಇರುವ ಒಬ್ಬ ಮನುಷ್ಯ. ನಿಮ್ಮ ದೇವನು ಏಕೈಕ ದೇವನೆಂದು ನನಗೆ ದೇವವಾಣಿ ನೀಡಲಾಗುತ್ತಿದೆ. ಆದ್ದರಿಂದ ನೀವು ಅವನ ಕಡೆಗೆ ತಿರುಗಿರಿ ಮತ್ತು ಅವನಲ್ಲಿ ಕ್ಷಮೆಯಾಚಿಸಿರಿ.” ಬಹುದೇವಾರಾಧಕರಿಗೆ ವಿನಾಶ ಕಾದಿದೆ.

ಅಂದರೆ ಝಕಾತ್ ನೀಡದವರಿಗೆ. ಅವರು ಪರಲೋಕವನ್ನು ನಿಷೇಧಿಸುತ್ತಾರೆ.

ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರಿಗೆ ಅಂತ್ಯವಿಲ್ಲದ ಪ್ರತಿಫಲವಿದೆ.

ಹೇಳಿರಿ: “ಎರಡು ದಿನಗಳಲ್ಲಿ ಭೂಮಿಯನ್ನು ಸೃಷ್ಟಿಸಿದ (ಅಲ್ಲಾಹನನ್ನು) ನೀವು ನಿಷೇಧಿಸುತ್ತೀರಾ ಮತ್ತು ಅವನೊಂದಿಗೆ ಸರಿಸಾಟಿಗಳನ್ನು ಮಾಡುತ್ತೀರಾ? ಅವನೇ ಸರ್ವಲೋಕಗಳ ಪರಿಪಾಲಕ.”

ಅವನು ಭೂಮಿಯಲ್ಲಿ—ಅದರ ಮೇಲ್ಭಾಗದಲ್ಲಿ—ಪರ್ವತಗಳನ್ನು ಸ್ಥಾಪಿಸಿದನು ಮತ್ತು ಅದರಲ್ಲಿ ಸಮೃದ್ಧಿಯನ್ನಿಟ್ಟನು. ಅದರಲ್ಲಿರುವ (ನಿವಾಸಿಗಳ) ಆಹಾರಗಳನ್ನು ಅದರಲ್ಲಿ ನಿರ್ಣಯಿಸಿದನು. (ಅವನು ಇದನ್ನು ಮಾಡಿದ್ದು ಕೇವಲ) ನಾಲ್ಕು ದಿನಗಳಲ್ಲಿ. ಅಗತ್ಯವುಳ್ಳವರಿಗೆ ಸರಿಯಾದ ಪ್ರಮಾಣದಲ್ಲಿ.

ನಂತರ ಅವನು ಆಕಾಶದ ಕಡೆಗೆ ತಿರುಗಿದನು. ಅದು ಹೊಗೆಯಂತೆ ಇತ್ತು. ಅವನು ಅದರೊಂದಿಗೆ ಮತ್ತು ಭೂಮಿಯೊಂದಿಗೆ ಹೇಳಿದನು: “ನೀವು ಸ್ವಯಂಪ್ರೇರಣೆಯಿಂದ ಅಥವಾ ಬಲವಂತದಿಂದ ಬನ್ನಿರಿ.” ಅವೆರಡೂ ಹೇಳಿದವು: “ನಾವು ಸ್ವಯಂಪ್ರೇರಣೆಯಿಂದ ಬಂದಿದ್ದೇವೆ.”

ಅವನು ಎರಡು ದಿನಗಳಲ್ಲಿ ಏಳು ಆಕಾಶಗಳನ್ನು ನಿರ್ಮಿಸಿದನು. ಎಲ್ಲಾ ಆಕಾಶಗಳಿಗೂ ಅದರ ಕಾರ್ಯನಿರ್ವಹಣೆಯನ್ನು ಆದೇಶಿಸಿದನು. ನಾವು ಇಹಲೋಕದ ಆಕಾಶವನ್ನು ದೀಪಗಳಿಂದ ಅಲಂಕರಿಸಿದೆವು ಮತ್ತು ಸುರಕ್ಷಿತಗೊಳಿಸಿದೆವು. ಇದು ಪ್ರಬಲನು ಮತ್ತು ಸರ್ವಜ್ಞನಾದ ಅಲ್ಲಾಹನ ನಿರ್ಣಯವಾಗಿದೆ.

ಅವರೇನಾದರೂ ವಿಮುಖರಾಗುವುದಾದರೆ ಹೇಳಿರಿ: “ಆದ್ ಗೋತ್ರ ಮತ್ತು ಸಮೂದ್ ಗೋತ್ರಗಳ ಮೇಲೆರಗಿದ ಭೀಕರ ಶಿಕ್ಷೆಯಂತಿರುವ ಒಂದು ಶಿಕ್ಷೆಯ ಬಗ್ಗೆ ನಾನು ನಿಮಗೆ ಎಚ್ಚರಿಕೆ ನೀಡುತ್ತಿದ್ದೇನೆ.”

“ಅಲ್ಲಾಹನನ್ನು ಬಿಟ್ಟು ಬೇರೆ ಯಾರನ್ನೂ ಆರಾಧಿಸಬೇಡಿ” ಎಂದು ಹೇಳುತ್ತಾ ಅವರ ಮುಂದಿನಿಂದಲೂ ಹಿಂದಿನಿಂದಲೂ ಸಂದೇಶವಾಹಕರುಗಳು ಅವರ ಬಳಿಗೆ ಬಂದ ಸಂದರ್ಭ. ಅವರು ಹೇಳಿದರು: “ನಮ್ಮ ಪರಿಪಾಲಕನು (ಅಲ್ಲಾಹು) ಇಚ್ಛಿಸುತ್ತಿದ್ದರೆ ದೇವದೂತರು‍ಗಳನ್ನು ಕಳುಹಿಸುತ್ತಿದ್ದನು. ನಿಮ್ಮೊಡನೆ ಕಳುಹಿಸಲಾದ ಆ ಸಂದೇಶವನ್ನು ನಿಶ್ಚಯವಾಗಿಯೂ ನಾವು ನಿಷೇಧಿಸಿದ್ದೇವೆ.”

ಆದ್ ಗೋತ್ರದವರು ಭೂಮಿಯಲ್ಲಿ ಅನ್ಯಾಯವಾಗಿ ಅಹಂಕಾರ ತೋರಿದರು. “ನಮಗಿಂತಲೂ ಹೆಚ್ಚು ಶಕ್ತಿಯಿರುವವರು ಯಾರು?” ಎಂದು ಅವರು ಕೇಳಿದರು. ಅವರನ್ನು ಸೃಷ್ಟಿಸಿದ ಅಲ್ಲಾಹು ಅವರಿಗಿಂತಲೂ ಹೆಚ್ಚು ಶಕ್ತಿಶಾಲಿಯೆಂದು ಅವರಿಗೆ ತಿಳಿದಿಲ್ಲವೇ? ಅವರು ನಮ್ಮ ವಚನಗಳನ್ನು ನಿಷೇಧಿಸುತ್ತಿದ್ದರು.

ಕೊನೆಗೆ ಅಶುಭ ದಿನಗಳಲ್ಲಿ ನಾವು ಅವರ ಕಡೆಗೆ ಭೀಕರ ಚಳಿಗಾಳಿಯನ್ನು ಕಳುಹಿಸಿದೆವು. ಇಹಲೋಕದಲ್ಲಿ ಅವರು ಅವಮಾನಕರ ಶಿಕ್ಷೆಯ ರುಚಿ ನೋಡುವುದಕ್ಕಾಗಿ. ಆದರೆ ಪರಲೋಕದ ಶಿಕ್ಷೆಯು ಅತ್ಯಧಿಕ ಅವಮಾನಕರವಾಗಿದೆ. ಅವರಿಗೆ ಯಾವುದೇ ಸಹಾಯವು ಸಿಗುವುದಿಲ್ಲ.

ಸಮೂದ್ ಗೋತ್ರಕ್ಕೂ ನಾವು ಸನ್ಮಾರ್ಗವನ್ನು ತೋರಿಸಿದೆವು. ಆದರೆ ಅವರು ಸನ್ಮಾರ್ಗಕ್ಕಿಂತ ಕುರುಡುತನವನ್ನೇ ಇಷ್ಟಪಟ್ಟರು. ಆದ್ದರಿಂದ ಅವರು ಮಾಡಿದ ದುಷ್ಕೃತ್ಯಗಳ ಕಾರಣದಿಂದ ಅವಮಾನಕರವಾದ ಭೀಕರ ಶಿಕ್ಷೆಯು ಅವರನ್ನು ಹಿಡಿಯಿತು.

ನಾವು ಸತ್ಯವಿಶ್ವಾಸಿಗಳನ್ನು ಮತ್ತು ದೇವಭಯವುಳ್ಳವರನ್ನು ರಕ್ಷಿಸಿದೆವು.

ಅಲ್ಲಾಹನ ಶತ್ರುಗಳನ್ನು ನರಕದ ಬಳಿಗೆ ಕರೆತರಲಾಗುವ ದಿನ. ಅವರೆಲ್ಲರನ್ನೂ ಒಟ್ಟುಗೂಡಿಸಲಾಗುವುದು.

ಎಲ್ಲಿಯವರೆಗೆಂದರೆ ಅವರು ನರಕದ ಬಳಿಗೆ ಬಂದಾಗ ಅವರ ಕಿವಿಗಳು, ಕಣ್ಣುಗಳು ಮತ್ತು ಚರ್ಮಗಳು ಅವರ ವಿರುದ್ಧವಾಗಿ ಸಾಕ್ಷಿ ನುಡಿಯುವುವು.

ಅವರು ತಮ್ಮ ಚರ್ಮಗಳೊಂದಿಗೆ ಕೇಳುವರು: “ನೀವೇಕೆ ನಮ್ಮ ವಿರುದ್ಧ ಸಾಕ್ಷಿ ಹೇಳಿದಿರಿ?” ಅವು ಹೇಳುವುವು: “ಎಲ್ಲ ವಸ್ತುಗಳಿಗೂ ಮಾತನಾಡುವ ಶಕ್ತಿ ನೀಡಿದ ಅಲ್ಲಾಹು ನಮ್ಮನ್ನು ಮಾತನಾಡಿಸಿದನು.” ಅವನೇ ನಿಮ್ಮನ್ನು ಮೊದಲ ಬಾರಿ ಸೃಷ್ಟಿಸಿದವನು. ನಿಮ್ಮನ್ನು ಅವನ ಬಳಿಗೇ ಮರಳಿಸಲಾಗುವುದು.

ನಿಮ್ಮ ಕಿವಿಗಳು, ನಿಮ್ಮ ಕಣ್ಣುಗಳು ಅಥವಾ ನಿಮ್ಮ ಚರ್ಮಗಳು ನಿಮ್ಮ ವಿರುದ್ಧ ಸಾಕ್ಷಿ ಹೇಳದಿರುವುದಕ್ಕಾಗಿ ನೀವು (ನಿಮ್ಮ ದುಷ್ಕರ್ಮಗಳನ್ನು) ಅವುಗಳಿಂದ ಅಡಗಿಸುತ್ತಿರಲಿಲ್ಲ. ಆದರೆ ನೀವು ಮಾಡುತ್ತಿರುವ ಕರ್ಮಗಳಲ್ಲಿ ಹೆಚ್ಚಿನವುಗಳನ್ನು ಅಲ್ಲಾಹು ತಿಳಿಯುವುದೇ ಇಲ್ಲ ಎಂದು ನೀವು ಭಾವಿಸಿದಿರಿ.

ನೀವು ನಿಮ್ಮ ಪರಿಪಾಲಕನ (ಅಲ್ಲಾಹನ) ಬಗ್ಗೆ ಇಟ್ಟುಕೊಂಡ ಆ ಭಾವನೆಯೇ ನಿಮ್ಮನ್ನು ಸರ್ವನಾಶ ಮಾಡಿತು. ಕೊನೆಗೆ ನೀವು ನಷ್ಟ ಹೊಂದಿದವರಲ್ಲಿ ಸೇರಿಬಿಟ್ಟಿರಿ.

ಈಗ ಅವರು ತಾಳ್ಮೆ ವಹಿಸಿದರೂ ಅವರ ವಾಸಸ್ಥಳವು ನರಕಾಗ್ನಿಯೇ ಆಗಿದೆ. ಅವರು ವಿನಾಯಿತಿಯನ್ನು ಬೇಡಿದರೂ ಅವರಿಗೆ ವಿನಾಯಿತಿ ನೀಡಲಾಗುವುದಿಲ್ಲ.

ನಾವು ಅವರಿಗೆ ಕೆಲವು ಸಂಗಡಿಗರನ್ನು ನಿಶ್ಚಯಿಸಿದ್ದೆವು. ಆ ಸಂಗಡಿಗರು ಅವರಿಗೆ ಅವರ ಮುಂದಿರುವುದನ್ನು ಮತ್ತು ಹಿಂದಿರುವುದನ್ನು ಅಲಂಕಾರಗೊಳಿಸಿ ತೋರಿಸಿದರು. ಅವರಿಗಿಂತ ಮೊದಲು ಗತಿಸಿದ ಜಿನ್ನ್ ಮತ್ತು ಮನುಷ್ಯರ ಸಮುದಾಯಗಳ ಜೊತೆಗೆ ಇವರ ಮೇಲೂ (ಶಿಕ್ಷೆಯ) ವಚನವು ಖಾತ್ರಿಯಾಗಿ ಬಿಟ್ಟಿತು. ನಿಶ್ಚಯವಾಗಿಯೂ ಅವರು ನಷ್ಟ ಹೊಂದಿದವರಾಗಿದ್ದರು.

ಸತ್ಯನಿಷೇಧಿಗಳು ಹೇಳಿದರು: “ನೀವು ಈ ಕುರ್‌ಆನಿಗೆ ಕಿವಿಗೊಡಬೇಡಿ. ಅದನ್ನು ಪಠಿಸುವುದನ್ನು ಕೇಳುವಾಗ ಗದ್ದಲ ಮಾಡಿರಿ. ನಿಮಗೆ ಅದನ್ನು ಸೋಲಿಸಲು ಸಾಧ್ಯವಾಗಬಹುದು.”

ನಿಶ್ಚಯವಾಗಿಯೂ ಆ ಸತ್ಯನಿಷೇಧಿಗಳಿಗೆ ನಾವು ಕಠೋರ ಶಿಕ್ಷೆಯ ರುಚಿಯನ್ನು ತೋರಿಸುವೆವು. ನಾವು ಅವರಿಗೆ ಅವರ ದುಷ್ಕರ್ಮಗಳ ಪ್ರತಿಫಲವನ್ನು ಖಂಡಿತ ನೀಡುವೆವು.

ಅದು ಅಲ್ಲಾಹನ ಶತ್ರುಗಳಿಗೆ ಶಿಕ್ಷೆಯಾಗಿರುವ ನರಕ. ಅವರಿಗೆ ಅಲ್ಲಿ ಶಾಶ್ವತ ವಾಸಕ್ಕಿರುವ ವಾಸ್ತವ್ಯವಿದೆ. ಅದು ಅವರು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದ್ದಕ್ಕೆ ಪ್ರತಿಫಲವಾಗಿದೆ.

ಸತ್ಯನಿಷೇಧಿಗಳು ಹೇಳುವರು: “ನಮ್ಮ ಪರಿಪಾಲಕನೇ! ನಮ್ಮನ್ನು ದಾರಿತಪ್ಪಿಸಿದ ಜಿನ್ನ್ ಮತ್ತು ಮನುಷ್ಯರ (ಎರಡು ಪಂಗಡಗಳನ್ನು) ನಮಗೆ ತೋರಿಸಿಕೊಡು. ಅವರು (ನರಕದಲ್ಲಿ) ಅತ್ಯಂತ ಕೆಳಗಿನವರಾಗಲು (ಕಠೋರ ಶಿಕ್ಷೆ ಅನುಭವಿಸುವಂತಾಗಲು) ನಾವು ಅವರನ್ನು ನಮ್ಮ ಪಾದಗಳ ಅಡಿಯಲ್ಲಿ ಹಾಕಿ ತುಳಿಯುವೆವು.

“ನಮ್ಮ ಪರಿಪಾಲಕನು ಅಲ್ಲಾಹು” ಎಂದು ಹೇಳಿ, ನಂತರ ಅದರಲ್ಲಿ ದೃಢವಾಗಿ ನಿಂತವರು ಯಾರೋ ಅವರ ಬಳಿಗೆ (ಅವರ ಮರಣದ ಸಮಯದಲ್ಲಿ) ದೇವದೂತರು‍ಗಳು ಇಳಿದು ಬಂದು ಹೇಳುವರು: “ನೀವು ಭಯಪಡಬೇಡಿ ಮತ್ತು ದುಃಖಿಸಬೇಡಿ. ನಿಮಗೆ ವಾಗ್ದಾನ ಮಾಡಲಾದ ಸ್ವರ್ಗದ ಬಗ್ಗೆ ಸಂತೋಷಪಡಿರಿ.

ಇಹಲೋಕದಲ್ಲಿ ನಾವು ನಿಮ್ಮ ಮಿತ್ರರಾಗಿದ್ದೆವು; ಪರಲೋಕದಲ್ಲೂ ಮಿತ್ರರಾಗಿರುವೆವು. ನಿಮಗೆ ಅಲ್ಲಿ ನಿಮ್ಮ ಮನಸ್ಸುಗಳು ಬಯಸುವುದೆಲ್ಲವೂ ಇರುವುವು ಮತ್ತು ನೀವು ಬೇಡುವುದೆಲ್ಲವೂ ಇರುವುವು.

ಅದು ಕ್ಷಮಾಶೀಲನು ಮತ್ತು ದಯಾಳುವಾದ ಅಲ್ಲಾಹನ ಆತಿಥ್ಯವಾಗಿದೆ.

ಅಲ್ಲಾಹನ ಕಡೆಗೆ ಕರೆಯುವ, ಸತ್ಕರ್ಮವೆಸಗುವ ಮತ್ತು ನಿಶ್ಚಯವಾಗಿಯೂ ನಾನು ಮುಸ್ಲಿಮರಲ್ಲಿ ಸೇರಿದವನೆಂದು ಹೇಳಿದವನಿಗಿಂತ ಉತ್ತಮ ಮಾತನ್ನು ಹೇಳಿದವನು ಯಾರು?

ಒಳಿತು ಮತ್ತು ಕೆಡುಕು ಸಮಾನವಾಗುವುದಿಲ್ಲ. ಕೆಡುಕನ್ನು ಒಳಿತಿನ ಮೂಲಕ ತಡೆಯಿರಿ. ಆಗ ಯಾರೊಡನೆ ನಿಮಗೆ ಶತ್ರುತ್ವವಿದೆಯೋ ಅವನು ನಿಮ್ಮ ಆಪ್ತ ಮಿತ್ರನಂತೆ ಮಾರ್ಪಡುವನು.

ತಾಳ್ಮೆಯುಳ್ಳವರಿಗೆ ಮಾತ್ರ ಇದನ್ನು ನೀಡಲಾಗಿದೆ. ಮಹಾ ಭಾಗ್ಯವಂತರಿಗೆ ಮಾತ್ರ ಇದನ್ನು ನೀಡಲಾಗಿದೆ.

ನಿಮಗೆ ಶೈತಾನನ ಕಡೆಯಿಂದ ಏನಾದರೂ ದುಷ್ಪ್ರೇರಣೆ ಉಂಟಾದರೆ ಅಲ್ಲಾಹನೊಡನೆ ಅಭಯ ಯಾಚಿಸಿರಿ. ನಿಶ್ಚಯವಾಗಿಯೂ ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.

ರಾತ್ರಿ, ಹಗಲು, ಸೂರ್ಯ ಮತ್ತು ಚಂದ್ರ ಅಲ್ಲಾಹನ ದೃಷ್ಟಾಂತಗಳಲ್ಲಿ ಸೇರಿದ್ದಾಗಿವೆ. ಸೂರ್ಯನಿಗೋ, ಚಂದ್ರನಿಗೋ ಸಾಷ್ಟಾಂಗ ಮಾಡಬೇಡಿ. ಬದಲಿಗೆ, ಅವುಗಳನ್ನು ಸೃಷ್ಟಿಸಿದ ಅಲ್ಲಾಹನಿಗೆ ಸಾಷ್ಟಾಂಗ ಮಾಡಿರಿ. ನೀವು ಅವನನ್ನು ಆರಾಧಿಸುವವರಾಗಿದ್ದರೆ.

ಅದರ ಬಳಿಕವೂ ಅವರು ಅಹಂಕಾರ ತೋರುವುದಾದರೆ ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಯಿರುವವರು (ದೇವದೂತರು‍ಗಳು) ರಾತ್ರಿ ಮತ್ತು ಹಗಲು ಅವನ ಪರಿಶುದ್ಧಿಯನ್ನು ಕೊಂಡಾಡುತ್ತಾರೆ. ಅವರು (ಎಂದಿಗೂ) ದಣಿಯುವುದಿಲ್ಲ.

ನೀವು ಭೂಮಿಯನ್ನು ಒಣಗಿ ಬರಡಾಗಿ ಕಾಣುವುದು ಅವರ ದೃಷ್ಟಾಂತಗಳಲ್ಲಿ ಒಂದಾಗಿದೆ. ನಂತರ ನಾವು ಅದರ ಮೇಲೆ ನೀರನ್ನು ಸುರಿಸಿದರೆ ಅದಕ್ಕೆ ಕಂಪನವುಂಟಾಗಿ ಬೆಳೆಯತೊಡಗುತ್ತದೆ. ಅದಕ್ಕೆ ಜೀವ ನೀಡಿದವನು ಖಂಡಿತವಾಗಿಯೂ ಮರಣಹೊಂದಿದವರಿಗೆ ಜೀವ ನೀಡುತ್ತಾನೆ. ನಿಶ್ಚಯವಾಗಿಯೂ ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.

ನಿಶ್ಚಯವಾಗಿಯೂ ನಮ್ಮ ದೃಷ್ಟಾಂತಗಳಲ್ಲಿ ವಿಚಲತೆಯನ್ನು ಉಂಟುಮಾಡುವವರು[1] ಯಾರೋ ಅವರು ನಮ್ಮಿಂದ (ಸ್ವಲ್ಪವೂ) ಮರೆಯಾಗಿಲ್ಲ. ಹಾಗಾದರೆ ನರಕಕ್ಕೆ ಹಾಕಲಾಗುವವನು ಶ್ರೇಷ್ಠನೋ? ಅಥವಾ ಪುನರುತ್ಥಾನ ದಿನದಂದು ನಿರ್ಭಯವಾಗಿ ಬರುವವನೋ? ನೀವು ಬಯಸುವುದನ್ನು ಮಾಡಿರಿ. ನಿಶ್ಚಯವಾಗಿಯೂ ನೀವು ಮಾಡುವುದನ್ನು ಅವನು ವೀಕ್ಷಿಸುತ್ತಿದ್ದಾನೆ.

ನಿಶ್ಚಯವಾಗಿಯೂ ಈ ಉಪದೇಶವು ಅವರ ಬಳಿಗೆ ಬಂದಾಗ ಅದನ್ನು ನಿಷೇಧಿಸಿದವರು (ನಷ್ಟ ಹೊಂದಿದರು). ನಿಶ್ಚಯವಾಗಿಯೂ ಇದೊಂದು ಪ್ರಬಲ ಗ್ರಂಥವಾಗಿದೆ.

ಅದರ ಮುಂದಿನಿಂದ ಅಥವಾ ಹಿಂದಿನಿಂದ ಮಿಥ್ಯವು ಅದರಲ್ಲಿ ಸೇರಿಕೊಳ್ಳುವುದಿಲ್ಲ. ಅದು ವಿವೇಕಪೂರ್ಣನು ಮತ್ತು ಸ್ತುತ್ಯರ್ಹನಾದ ಅಲ್ಲಾಹನಿಂದ ಅವತೀರ್ಣವಾಗಿದೆ.

ನಿಮಗಿಂತ ಮೊದಲಿನ ಸಂದೇಶವಾಹಕರುಗಳೊಡನೆ ಹೇಳಲಾಗಿರುವುದನ್ನೇ ನಿಮ್ಮೊಡನೆಯೂ ಹೇಳಲಾಗಿದೆ. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಕ್ಷಮಿಸುವವನು ಮತ್ತು ಯಾತನಾಮಯ ಶಿಕ್ಷೆ ನೀಡುವವನಾಗಿದ್ದಾನೆ.

ನಾವು ಇದನ್ನು ಅರಬ್ಬೇತರ ಭಾಷೆಯ ಕುರ್‌ಆನ್ ಆಗಿ ಮಾಡಿರುತ್ತಿದ್ದರೆ ಅವರು ಕೇಳುತ್ತಿದ್ದರು: “ಇದರ ವಚನಗಳನ್ನೇಕೆ ವಿವರಿಸಲಾಗಿಲ್ಲ? ಅರಬೇತರ (ಗ್ರಂಥ) ಮತ್ತು ಅರಬಿ(ಪ್ರವಾದಿ)ಯೇ?” ಹೇಳಿರಿ: “ಇದು (ಕುರ್‌ಆನ್) ಸತ್ಯವಿಶ್ವಾಸಿಗಳಿಗೆ ಸನ್ಮಾರ್ಗ ಮತ್ತು ಉಪಶಮನವಾಗಿದೆ. ಅದರಲ್ಲಿ ವಿಶ್ವಾಸವಿಡದವರು ಯಾರೋ ಅವರ ಕಿವಿಗಳಲ್ಲಿ ಕಿವುಡುತನವಿದೆ. ಅದು (ಕುರ್‌ಆನ್) ಅವರಿಗೆ ಕುರುಡುತನವಾಗಿದೆ. ಈ ಜನರು ವಿದೂರ ಸ್ಥಳದಿಂದ ಕೂಗಿ ಕರೆಯಲಾಗುವವರಾಗಿದ್ದಾರೆ.”[1]

ನಾವು ಮೂಸಾರಿಗೆ ಗ್ರಂಥವನ್ನು ನೀಡಿದೆವು. ಆದರೆ ಅವರು ಅದರಲ್ಲಿ ಭಿನ್ನಮತ ತಳೆದರು. ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಒಂದು ವಚನವು ಮೊದಲೇ ಇಲ್ಲದಿರುತ್ತಿದ್ದರೆ ಅವರ ನಡುವೆ ಈಗಾಗಲೇ ತೀರ್ಪು ನೀಡಲಾಗುತ್ತಿತ್ತು. ನಿಶ್ಚಯವಾಗಿಯೂ ಅವರು ಅದರ ಬಗ್ಗೆ ಗೊಂದಲಪೂರ್ಣ ಸಂಶಯದಲ್ಲಿದ್ದಾರೆ.

ಯಾರು ಸತ್ಕರ್ಮವೆಸಗುತ್ತಾನೋ ಅದು ಅವನ ಒಳಿತಿಗೇ ಆಗಿದೆ. ಯಾರು ದುಷ್ಕರ್ಮವೆಸಗುತ್ತಾನೋ ಅದರ ದೋಷವು ಅವನಿಗೇ ಆಗಿದೆ. ನಿಮ್ಮ ಪರಿಪಾಲಕ (ಅಲ್ಲಾಹು) ತನ್ನ ದಾಸರಿಗೆ ಅನ್ಯಾಯವೆಸಗುವವನೇ ಅಲ್ಲ.

ಅಂತ್ಯಸಮಯದ ಕುರಿತಾದ ಜ್ಞಾನವನ್ನು ಅಲ್ಲಾಹನಿಗೆ ಮರಳಿಸಲಾಗುತ್ತದೆ. ಅವನ ತಿಳುವಳಿಕೆಯಿಲ್ಲದೆ ಯಾವುದೇ ಹಣ್ಣು ಅದರ ತೊಗಲಿನಿಂದ ಹೊರಹೊಮ್ಮುವುದಿಲ್ಲ. (ಅವನ ತಿಳುವಳಿಕೆಯಿಲ್ಲದೆ) ಯಾವುದೇ ಸ್ತ್ರೀ ಗರ್ಭ ಧರಿಸುವುದೋ ಹಡೆಯುವುದೋ ಇಲ್ಲ. “ನನ್ನ ಸಹಭಾಗಿಗಳು ಎಲ್ಲಿ?” ಎಂದು ಅವನು ಅವರನ್ನು ಕರೆದು ಕೇಳುವ ದಿನ! ಅವರು ಉತ್ತರಿಸುವರು: “ನಮ್ಮಲ್ಲಿ ಯಾರೂ ಅದಕ್ಕೆ ಸಾಕ್ಷಿಗಳಲ್ಲ ಎಂದು ನಾವು ನಿನಗೆ ತಿಳಿಸುತ್ತಿದ್ದೇವೆ.”

ಇದಕ್ಕೆ ಮೊದಲು ಅವರು ಕರೆದು ಪ್ರಾರ್ಥಿಸುತ್ತಿದ್ದವರೆಲ್ಲರೂ (ದೇವರುಗಳೆಲ್ಲರೂ) ಅವರನ್ನು ಬಿಟ್ಟು ಹೋಗುವರು. ಈಗ ಅವರನ್ನು ಪಾರು ಮಾಡುವವರು ಯಾರೂ ಇಲ್ಲವೆಂದು ಅವರಿಗೆ ಮನವರಿಕೆಯಾಗುವುದು.

ಒಳಿತನ್ನು ಬೇಡಲು ಮನುಷ್ಯನಿಗೆ ಆಯಾಸವಾಗುವುದಿಲ್ಲ. ಆದರೆ ಅವನಿಗೆ ತೊಂದರೆಯುಂಟಾದರೆ ಅವನು ಹತಾಶ ಮತ್ತು ನಿರಾಶನಾಗುತ್ತಾನೆ.

ಮನುಷ್ಯನಿಗೆ ವಿಪತ್ತು ಬಾಧಿಸಿದ ಬಳಿಕ ನಾವು ಅವನಿಗೆ ನಮ್ಮ ಕಡೆಯ ದಯೆಯ ರುಚಿಯನ್ನು ತೋರಿಸಿದರೆ, ನಿಶ್ಚಯವಾಗಿಯೂ ಅವನು ಹೇಳುವನು: “ಇದಕ್ಕೆ ನಾನು ಹಕ್ಕುಳ್ಳವನಾಗಿದ್ದೇನೆ. ಅಂತ್ಯಸಮಯವು ಸಂಭವಿಸುವುದೆಂದು ನಾನು ಭಾವಿಸುವುದಿಲ್ಲ. ಇನ್ನು ನನ್ನನ್ನು ನನ್ನ ಪರಿಪಾಲಕನ (ಅಲ್ಲಾಹನ) ಕಡೆಗೆ ಮರಳಿಸಲಾದರೂ ಸಹ ಅವನ ಬಳಿ ನನಗೆ ಒಳಿತು ಮಾತ್ರವೇ ಇರುತ್ತದೆ.” ಆ ಸತ್ಯನಿಷೇಧಿಗಳಿಗೆ ಅವರು ಮಾಡಿದ ಕರ್ಮಗಳ ಬಗ್ಗೆ ನಾವು ಖಂಡಿತ ತಿಳಿಸಿಕೊಡುವೆವು ಮತ್ತು ಅವರಿಗೆ ಕಠೋರ ಶಿಕ್ಷೆಯ ರುಚಿಯನ್ನು ಖಂಡಿತ ತೋರಿಸುವೆವು.

ನಾವು ಮನುಷ್ಯನಿಗೆ ಅನುಗ್ರಹವನ್ನು ದಯಪಾಲಿಸಿದರೆ ಅವನು ಮುಖ ತಿರುಗಿಸಿ ನಡೆಯುತ್ತಾನೆ ಮತ್ತು ತನ್ನಷ್ಟಕ್ಕೆ ದೂರ ಸರಿಯುತ್ತಾನೆ. ಆದರೆ ಅವನಿಗೆ ಆಪತ್ತು ಸಂಭವಿಸಿದರೆ ಅವನು ದೀರ್ಘ ಪ್ರಾರ್ಥನೆಗಳಲ್ಲಿ ತೊಡಗುತ್ತಾನೆ.

ಹೇಳಿರಿ: “ನೀವು ಆಲೋಚಿಸಿ ನೋಡಿದ್ದೀರಾ? ಇದು (ಕುರ್‌ಆನ್) ಅಲ್ಲಾಹನ ಕಡೆಯಿಂದಾಗಿದ್ದು, ನಂತರ ನೀವು ಅದನ್ನು ನಿಷೇಧಿಸುವುದಾದರೆ, (ಸತ್ಯದಿಂದ) ವಿದೂರವಾದ ಕಡು ವಿರೋಧದಲ್ಲಿರುವವನಿಗಿಂತಲೂ ಹೆಚ್ಚು ದಾರಿತಪ್ಪಿದವನು ಯಾರು?”

ನಾವು ಸದ್ಯವೇ ಅವರಿಗೆ ದಿಗಂತಗಳಲ್ಲಿ ಮತ್ತು ಸ್ವತಃ ಅವರಲ್ಲೇ ನಮ್ಮ ದೃಷ್ಟಾಂತಗಳನ್ನು ತೋರಿಸಿಕೊಡುವೆವು. ಇದು (ಕುರ್‌ಆನ್) ಸತ್ಯವೆಂದು ಅವರಿಗೆ ಸ್ಪಷ್ಟವಾಗುವ ತನಕ. ನಿಮ್ಮ ಪರಿಪಾಲಕನು (ಅಲ್ಲಾಹು) ಎಲ್ಲಾ ವಿಷಯಗಳಿಗೂ ಸಾಕ್ಷಿಯಾಗಿರುವುದು ನಿಮಗೆ ಸಾಕಾಗುವುದಿಲ್ಲವೇ?

ತಿಳಿಯಿರಿ! ನಿಶ್ಚಯವಾಗಿಯೂ ಅವರು ಅವರ ಪರಿಪಾಲಕನನ್ನು (ಅಲ್ಲಾಹನನ್ನು) ಭೇಟಿಯಾಗುವ ವಿಷಯದಲ್ಲಿ ಸಂದೇಹದಲ್ಲಿದ್ದಾರೆ. ತಿಳಿಯಿರಿ! ನಿಶ್ಚಯವಾಗಿಯೂ ಅವನು ಎಲ್ಲಾ ವಸ್ತುಗಳನ್ನು ಆವರಿಸಿಕೊಂಡಿದ್ದಾನೆ.