The Noble Qur'an Encyclopedia
Towards providing reliable exegeses and translations of the meanings of the Noble Qur'an in the world languagesThe Smoke [Ad-Dukhan] - Kannada translation
Surah The Smoke [Ad-Dukhan] Ayah 59 Location Maccah Number 44
ಹಾ-ಮೀಮ್.
ಸ್ಪಷ್ಟ ಗ್ರಂಥದ ಮೇಲಾಣೆ!
ನಿಶ್ಚಯವಾಗಿಯೂ ನಾವು ಇದನ್ನು ಒಂದು ಸಮೃದ್ಧ ರಾತ್ರಿಯಲ್ಲಿ ಅವತೀರ್ಣಗೊಳಿಸಿದ್ದೇನೆ. ನಿಶ್ಚಯವಾಗಿಯೂ ನಾವು ಮುನ್ನೆಚ್ಚರಿಕೆ ನೀಡುವವರಾಗಿದ್ದೇವೆ.
ಆ ರಾತ್ರಿಯಲ್ಲಿ ಎಲ್ಲಾ ಕಟ್ಟುನಿಟ್ಟಿನ ಕಾರ್ಯಗಳನ್ನು ನಿರ್ಣಯಿಸಲಾಗುವುದು.
ನಮ್ಮ ಕಡೆಯ ಆಜ್ಞೆಯಿಂದ! ನಿಶ್ಚಯವಾಗಿಯೂ ನಾವೇ (ಸಂದೇಶವಾಹಕರನ್ನು) ಕಳುಹಿಸುವವರು.
ನಿಮ್ಮ ಪರಿಪಾಲಕನ (ಅಲ್ಲಾಹನ) ದಯೆಯಿಂದ. ನಿಶ್ಚಯವಾಗಿಯೂ ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
ಅವನು ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಪರಿಪಾಲಕ. ನೀವು ದೃಢವಾಗಿ ವಿಶ್ವಾಸವಿಡುವವರಾಗಿದ್ದರೆ.
ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಅವನು ಜೀವ ಮತ್ತು ಮರಣವನ್ನು ನೀಡುತ್ತಾನೆ. ಅವನು ನಿಮ್ಮ ಮತ್ತು ನಿಮ್ಮ ಪೂರ್ವಜರ ಪರಿಪಾಲಕನಾಗಿದ್ದಾನೆ.
ಆದರೆ ಅವರು ಸಂಶಯದಲ್ಲಿ ಬಿದ್ದು ಆಡುತ್ತಿದ್ದಾರೆ.
ಆಕಾಶವು ಸ್ಪಷ್ಟವಾಗಿ ಕಾಣುವ ಹೊಗೆಯನ್ನು ತರುವ ದಿನವನ್ನು ನಿರೀಕ್ಷಿಸಿ.
ಅದು ಮನುಷ್ಯರನ್ನು ಆವರಿಸಿಕೊಳ್ಳುವುದು. ಇದು ಯಾತನಾಮಯ ಶಿಕ್ಷೆಯಾಗಿದೆ.
(ಅವರು ಹೇಳುವರು): “ನಮ್ಮ ಪರಿಪಾಲಕನೇ! ನಮ್ಮಿಂದ ಈ ಶಿಕ್ಷೆಯನ್ನು ನಿವಾರಿಸು. ನಿಶ್ಚಯವಾಗಿಯೂ ನಾವು ವಿಶ್ವಾಸವಿಡುತ್ತೇವೆ.”
ಅವರಿಗೆ ಉಪದೇಶವು ಪ್ರಯೋಜನಪಡುವುದು ಹೇಗೆ? (ವಿಷಯವನ್ನು) ಸ್ಪಷ್ಟವಾಗಿ ವಿವರಿಸುವ ಒಬ್ಬ ಸಂದೇಶವಾಹಕರು ಅವರ ಬಳಿಗೆ ಬಂದಿದ್ದರು.
ಆದರೂ ಅವರು ಆ ಸಂದೇಶವಾಹಕರಿಂದ ವಿಮುಖರಾದರು. ಅವರು ಹೇಳಿದರು: “ಇವನು ಕಲಿಸಿಕೊಡಲಾದ ಮಾನಸಿಕ ಅಸ್ವಸ್ಥ!”
ನಿಶ್ಚಯವಾಗಿಯೂ ನಾವು ಶಿಕ್ಷೆಯನ್ನು ಸ್ವಲ್ಪ ನಿವಾರಿಸುವೆವು. ಆದರೆ ನೀವು ನಿಶ್ಚಯವಾಗಿಯೂ (ಹಿಂದಿನ ಸ್ಥಿತಿಗೇ) ಮರಳುವಿರಿ!
ನಾವು ಅತ್ಯಂತ ಬಲಿಷ್ಠ ಹಿಡಿತದೊಂದಿಗೆ ಹಿಡಿಯುವ ದಿನ! ನಿಶ್ಚಯವಾಗಿಯೂ ನಾವು ಪ್ರತೀಕಾರ ಪಡೆಯುವೆವು.
ಅವರಿಗಿಂತ ಮೊದಲು ಫರೋಹನ ಜನರನ್ನು ನಾವು ಪರೀಕ್ಷಿಸಿದ್ದೆವು. ಒಬ್ಬ ಗೌರವಾನ್ವಿತ ಸಂದೇಶವಾಹಕರು (ಮೂಸಾ) ಅವರ ಬಳಿಗೆ ಬಂದಿದ್ದರು.
(ಅವರು ಹೇಳಿದರು): “ಅಲ್ಲಾಹನ ದಾಸರನ್ನು ನನಗೆ ಒಪ್ಪಿಸಿರಿ. ನಿಶ್ಚಯವಾಗಿಯೂ ನಾನು ನಿಮ್ಮ ಬಳಿಗೆ ಬಂದ ಒಬ್ಬ ವಿಶ್ವಾಸಾರ್ಹ ಸಂದೇಶವಾಹಕನಾಗಿದ್ದೇನೆ.
ನೀವು ಅಲ್ಲಾಹನ ಮುಂದೆ ದರ್ಪ ತೋರಬೇಡಿ. ನಿಶ್ಚಯವಾಗಿಯೂ ನಾನು ನಿಮ್ಮ ಬಳಿಗೆ ಸ್ಪಷ್ಟ ಸಾಕ್ಷ್ಯವನ್ನು ತರುವೆನು.
ನೀವು ನನಗೆ ಕಲ್ಲೆಸೆಯದಿರಲು ನಾನು ನನ್ನ ಮತ್ತು ನಿಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಅಭಯ ಯಾಚಿಸುತ್ತೇನೆ.
ನೀವು ನನ್ನಲ್ಲಿ ವಿಶ್ವಾಸವಿಡುವುದಿಲ್ಲ ಎಂದಾದರೆ ನನ್ನಿಂದ ಬೇರೆ ಹೋಗಿರಿ.”
ಇವರೆಲ್ಲರೂ ಅಪರಾಧಿಗಳಾದ ಜನರು ಎಂದು ಅವರು ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿದರು.
(ಅಲ್ಲಾಹು ಹೇಳಿದನು): “ನೀವು ರಾತ್ರಿ ವೇಳೆ ನನ್ನ ದಾಸರೊಡನೆ ಹೊರಡಿರಿ. ನಿಶ್ಚಯವಾಗಿಯೂ ವೈರಿಗಳು ನಿಮ್ಮನ್ನು ಹಿಂಬಾಲಿಸುವರು.
ನೀವು ಸಮುದ್ರವನ್ನು ಶಾಂತ ಸ್ಥಿತಿಯಲ್ಲಿ ಬಿಟ್ಟುಬಿಡಿ. ನಿಶ್ಚಯವಾಗಿಯೂ ಈ ಸೈನ್ಯವನ್ನು ಮುಳುಗಿಸಲಾಗುವುದು.
ಅವರು ಎಷ್ಟೊಂದು ತೋಟಗಳನ್ನು ಮತ್ತು ತೊರೆಗಳನ್ನು ಬಿಟ್ಟು ಹೋದರು!
ಎಷ್ಟೊಂದು ಕೃಷಿಗಳನ್ನು ಮತ್ತು ಗೌರವಾನ್ವಿತ ವಸತಿಗಳನ್ನು!
ಅವರು ಆನಂದದಿಂದ ಅನುಭವಿಸುತ್ತಿದ್ದ ಎಷ್ಟೊಂದು ಸವಲತ್ತುಗಳನ್ನು!
ಈ ರೀತಿ ಅದು ಸಂಭವಿಸಿತು. ನಾವು ಅವೆಲ್ಲವನ್ನೂ ಬೇರೆ ಜನರಿಗೆ ಉತ್ತರಾಧಿಕಾರವಾಗಿ ನೀಡಿದೆವು.
ಆಕಾಶ ಅಥವಾ ಭೂಮಿ ಅವರಿಗಾಗಿ ಅಳಲಿಲ್ಲ. ಅವರಿಗೆ ಕಾಲಾವಕಾಶವೂ ದೊರೆಯಲಿಲ್ಲ.
ನಾವು ಇಸ್ರಾಯೇಲ್ ಮಕ್ಕಳನ್ನು ಅವಮಾನಕರ ಶಿಕ್ಷೆಯಿಂದ ಪಾರು ಮಾಡಿದೆವು.
ಫರೋಹನಿಂದ. ನಿಶ್ಚಯವಾಗಿಯೂ ಅವನು ಅಹಂಕಾರಿಯಾಗಿದ್ದು ಎಲ್ಲೆ ಮೀರಿದವರಲ್ಲಿ ಸೇರಿದ್ದನು.
ನಿಶ್ಚಯವಾಗಿಯೂ ನಾವು ತಿಳಿದೂ ಸಹ ಇಸ್ರಾಯೇಲ್ ಮಕ್ಕಳನ್ನು (ಸಮಕಾಲೀನ) ಜಗತ್ತಿನಲ್ಲಿ ಶ್ರೇಷ್ಠಗೊಳಿಸಿದೆವು.
ನಾವು ಅವರಿಗೆ ಸ್ಪಷ್ಟ ಪರೀಕ್ಷೆಯನ್ನು ಹೊಂದಿದ್ದ ದೃಷ್ಟಾಂತಗಳನ್ನು ನೀಡಿದೆವು.
ನಿಶ್ಚಯವಾಗಿಯೂ ಇವರು (ಸತ್ಯನಿಷೇಧಿಗಳು) ಹೇಳುತ್ತಾರೆ:
“ನಮ್ಮ ಮೊದಲ ಸಾವಲ್ಲದೆ ಬೇರೇನೂ ಇಲ್ಲ. ನಮ್ಮನ್ನು ಪುನಃ ಜೀವಂತಗೊಳಿಸಲಾಗುವುದೂ ಇಲ್ಲ.
ನೀವು ಸತ್ಯವಂತರಾಗಿದ್ದರೆ (ಸತ್ತು ಹೋದ) ನಮ್ಮ ಪೂರ್ವಜರನ್ನು ಕರೆದುಕೊಂಡು ಬನ್ನಿ.”
ಇವರು ಶ್ರೇಷ್ಠರೋ? ಅಥವಾ ತುಬ್ಬಅ್‌ನ ಜನರು[1] ಮತ್ತು ಅವರಿಗಿಂತ ಮೊದಲಿನವರೋ? ನಾವು ಅವರೆಲ್ಲರನ್ನು ನಾಶ ಮಾಡಿದೆವು. ನಿಶ್ಚಯವಾಗಿಯೂ ಅವರು ಅಪರಾಧಿಗಳಾಗಿದ್ದರು.
ನಾವು ಭೂಮ್ಯಾಕಾಶಗಳನ್ನು ಮತ್ತು ಅವುಗಳ ನಡುವೆಯಿರುವ ವಸ್ತುಗಳನ್ನು ಆಟಕ್ಕಾಗಿ ಸೃಷ್ಟಿಸಿಲ್ಲ.
ನಾವು ಅವುಗಳನ್ನು ಸರಿಯಾದ ಉದ್ದೇಶದಿಂದಲೇ ಸೃಷ್ಟಿಸಿದ್ದೇವೆ. ಆದರೆ ಅವರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.
ನಿಶ್ಚಯವಾಗಿಯೂ ತೀರ್ಪು ನೀಡುವ ದಿನವು ಅವರೆಲ್ಲರಿಗೂ ನಿಶ್ಚಯಿಸಲಾದ ದಿನವಾಗಿದೆ.
ಅಂದು ಒಬ್ಬ ಗೆಳೆಯ ಇನ್ನೊಬ್ಬ ಗೆಳೆಯನಿಗೆ ಯಾವುದೇ ಉಪಕಾರ ಮಾಡುವುದಿಲ್ಲ. ಅವರಿಗೆ ಸಹಾಯವೂ ದೊರೆಯುವುದಿಲ್ಲ.
ಅಲ್ಲಾಹು ದಯೆ ತೋರಿದವರ ಹೊರತು. ನಿಶ್ಚಯವಾಗಿಯೂ ಅವನು ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.
ನಿಶ್ಚಯವಾಗಿಯೂ ಝಕ್ಕೂಮ್ ಮರವು,
ಪಾಪಿಗಳ ಆಹಾರವಾಗಿದೆ.
ಅದು ಕಾಯಿಸಿದ ಲೋಹದಂತಿದೆ. ಅದು ಹೊಟ್ಟೆಯಲ್ಲಿ ಕುದಿಯುತ್ತದೆ.
ಬಿಸಿ ನೀರು ಕುದಿಯುವಂತೆ.
“ಅವನನ್ನು ಹಿಡಿಯಿರಿ ಮತ್ತು ನರಕಾಗ್ನಿಯ ಮಧ್ಯಭಾಗಕ್ಕೆ ಎಳೆದೊಯ್ಯಿರಿ!
ನಂತರ ಅವನ ತಲೆಯ ಮೇಲೆ ಕುದಿಯುವ ನೀರಿನ ಶಿಕ್ಷೆಯನ್ನು ಸುರಿಯಿರಿ!”
(ಅವನೊಡನೆ ಹೇಳಲಾಗುವುದು): “ಇದರ ರುಚಿ ನೋಡು! ನಿಶ್ಚಯವಾಗಿಯೂ ನೀನು ಪ್ರಬಲನು ಮತ್ತು ಗೌರವಾನ್ವಿತನಾಗಿದ್ದೆ!
ನಿಶ್ಚಯವಾಗಿಯೂ ಇದು ನೀವು ಸಂಶಯಪಡುತ್ತಿದ್ದ ವಿಷಯವಾಗಿದೆ.”
ನಿಶ್ಚಯವಾಗಿಯೂ ದೇವಭಯವುಳ್ಳವರು ನಿರ್ಭಯ ಸ್ಥಳದಲ್ಲಿರುವರು.
ತೋಟಗಳಲ್ಲಿ ಮತ್ತು ತೊರೆಗಳಲ್ಲಿ.
ನಯ ಮತ್ತು ದಪ್ಪ ರೇಷ್ಮೆ ಉಡುಪುಗಳನ್ನು ಧರಿಸಿ, ಪರಸ್ಪರ ಎದುರು-ಬದುರು ಕುಳಿತಿರುವರು.
(ಅವರ ಸ್ಥಿತಿ) ಈ ರೀತಿಯಾಗಿದೆ. ನಾವು ಅರಳಿದ ಕಣ್ಣುಗಳ ಬೆಳ್ಳಗಿನ ಸ್ತ್ರೀಯರನ್ನು ಅವರಿಗೆ ವಿವಾಹ ಮಾಡಿಕೊಡುವೆವು.
ಅವರು ನಿರ್ಭಯ ಸ್ಥಿತಿಯಲ್ಲಿದ್ದು ಎಲ್ಲ ತರಹದ ಹಣ್ಣುಗಳನ್ನು ಬೇಡುವರು.
ಅವರು ಮೊದಲನೆಯ ಮರಣದ ಹೊರತು ಬೇರೊಂದು ಮರಣದ ರುಚಿಯನ್ನು ನೋಡುವುದಿಲ್ಲ. ಅವನು ಅವರನ್ನು ನರಕ ಶಿಕ್ಷೆಯಿಂದ ಪಾರು ಮಾಡುವನು.
ಇದು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಔದಾರ್ಯವಾಗಿದೆ. ಇದೇ ಮಹಾ ಯಶಸ್ಸು.
ಅವರು ಉಪದೇಶವನ್ನು ಪಡೆಯುವುದಕ್ಕಾಗಿ ನಾವು ಇದನ್ನು (ಕುರ್‌ಆನನ್ನು) ನಿಮ್ಮ ಭಾಷೆಯಲ್ಲಿ ಸರಳಗೊಳಿಸಿದ್ದೇವೆ.
ನೀವು ಕಾಯಿರಿ. ಅವರು ಕೂಡ ಕಾಯುತ್ತಿದ್ದಾರೆ.