عربيEnglish

The Noble Qur'an Encyclopedia

Towards providing reliable exegeses and translations of the meanings of the Noble Qur'an in the world languages

The winnowing winds [Adh-Dhariyat] - Kannada translation

Surah The winnowing winds [Adh-Dhariyat] Ayah 60 Location Maccah Number 51

ಬಲವಾಗಿ ಧೂಳಿಯನ್ನು ಹರಡುವ (ಗಾಳಿಯ) ಮೇಲಾಣೆ!

ಭಾರವನ್ನು ಹೊರುವ (ಮೋಡಗಳ) ಮೇಲಾಣೆ!

ಸುಗಮವಾಗಿ ಸಂಚರಿಸುವ (ಹಡಗುಗಳ) ಮೇಲಾಣೆ!

ಕಾರ್ಯಗಳನ್ನು ವಿಂಗಡಿಸಿಕೊಡುವ (ದೇವದೂತರು‍ಗಳ) ಮೇಲಾಣೆ!

ನಿಶ್ಚಯವಾಗಿಯೂ ನಿಮಗೆ ಎಚ್ಚರಿಕೆ ನೀಡಲಾಗುವ ವಿಷಯವು ಸತ್ಯವಾಗಿದೆ.

ನಿಶ್ಚಯವಾಗಿಯೂ ವಿಚಾರಣೆಯು ಸಂಭವಿಸಿಯೇ ತೀರುತ್ತದೆ.

ಕಕ್ಷೆಗಳನ್ನು ಹೊಂದಿರುವ ಆಕಾಶದ ಮೇಲಾಣೆ!

ನಿಶ್ಚಯವಾಗಿಯೂ ನೀವು ವಿಭಿನ್ನ ಅಭಿಪ್ರಾಯಗಳಲ್ಲಿದ್ದೀರಿ.

(ಸತ್ಯದಿಂದ) ತಪ್ಪಿಸಲ್ಪಟ್ಟವನು ಅದರಿಂದ (ಕುರ್‌ಆನ್‍ನಿಂದ) ತಪ್ಪಿಸಲ್ಪಡುತ್ತಾನೆ.

ಆಧಾರರಹಿತ ಮಾತುಗಳನ್ನು ಹೇಳುವವರು ನಾಶವಾಗಿದ್ದಾರೆ.

ಅವರು ಅಜ್ಞಾನದಲ್ಲಿದ್ದಾರೆ ಮತ್ತು ಮರೆತುಬಿಟ್ಟಿದ್ದಾರೆ.

“ಪ್ರತಿಫಲದ ದಿನ ಯಾವಾಗ?” ಎಂದು ಅವರು ಕೇಳುತ್ತಾರೆ.

ಅವರನ್ನು ನರಕಾಗ್ನಿಯಲ್ಲಿ ಶಿಕ್ಷಿಸಲಾಗುವ ದಿನ.

(ಅವರೊಂದಿಗೆ ಹೇಳಲಾಗುವುದು): “ನಿಮ್ಮ ಶಿಕ್ಷೆಯ ರುಚಿಯನ್ನು ನೋಡಿರಿ. ಇದಕ್ಕೇ ನೀವು ತ್ವರೆ ಮಾಡುತ್ತಿದ್ದಿರಿ.”

ನಿಶ್ಚಯವಾಗಿಯೂ ದೇವಭಯವುಳ್ಳವರು ಸ್ವರ್ಗೋದ್ಯಾನಗಳಲ್ಲಿ ಮತ್ತು ತೊರೆಗಳಲ್ಲಿರುವರು.

ಅವರಿಗೆ ಅವರ ಪರಿಪಾಲಕನು (ಅಲ್ಲಾಹು) ನೀಡಿದ್ದನ್ನು ಅವರು ಪಡೆಯುವರು. ನಿಶ್ಚಯವಾಗಿಯೂ ಇದಕ್ಕಿಂತ ಮೊದಲು ಅವರು ನೀತಿವಂತರಾಗಿದ್ದರು.

ಅವರು ರಾತ್ರಿಯಲ್ಲಿ ಬಹಳ ಕಡಿಮೆ ನಿದ್ರಿಸುತ್ತಿದ್ದರು.

ಸಹರಿಯ ಸಮಯದಲ್ಲಿ ಅವರು (ಅಲ್ಲಾಹನಲ್ಲಿ) ಕ್ಷಮೆಯಾಚಿಸುತ್ತಿದ್ದರು.

ಅವರ ಧನದಲ್ಲಿ ಬೇಡುವವರಿಗೆ ಮತ್ತು (ಉಪಜೀವನ) ತಡೆಯಲ್ಪಟ್ಟವರಿಗೆ ಹಕ್ಕಿತ್ತು.

ದೃಢವಿಶ್ವಾಸವುಳ್ಳವರಿಗೆ ಭೂಮಿಯಲ್ಲಿ ಅನೇಕ ದೃಷ್ಟಾಂತಗಳಿವೆ.

ನಿಮ್ಮ ದೇಹಗಳಲ್ಲೂ ಕೂಡ. ಆದರೂ ನೀವು ನೋಡುವುದಿಲ್ಲವೇ?

ಆಕಾಶದಲ್ಲಿ ನಿಮ್ಮ ಉಪಜೀವನ ಮತ್ತು ನಿಮಗೆ ವಾಗ್ದಾನ ಮಾಡಲಾಗುವ ಎಲ್ಲವೂ ಇದೆ.

ಭೂಮ್ಯಾಕಾಶಗಳ ಪರಿಪಾಲಕನ (ಅಲ್ಲಾಹನ) ಮೇಲಾಣೆ! ನೀವು ಹೇಗೆ ಮಾತನಾಡುತ್ತಿರುವಿರೋ ಹಾಗೆಯೇ ಇವೆಲ್ಲವೂ ಸತ್ಯವಾಗಿದೆ.[1]

ಇಬ್ರಾಹೀಮರ ಸನ್ಮಾನ್ಯ ಅತಿಥಿಗಳ ಸಮಾಚಾರವು ನಿಮಗೆ ತಲುಪಿದೆಯೇ?

ಅವರು ಇಬ್ರಾಹೀಮರ ಬಳಿಗೆ ಬಂದು ಸಲಾಂ ಹೇಳಿದ ಸಂದರ್ಭ. ಇಬ್ರಾಹೀಮ್ ಸಲಾಂಗೆ ಉತ್ತರಿಸಿ ಹೇಳಿದರು: “ನೀವು ಅಪರಿಚಿತ ಜನರಂತೆ ಕಾಣುತ್ತೀರಿ.”

ನಂತರ ಅವರು ಆತುರದಿಂದ ತಮ್ಮ ಮನೆಯವರ ಕಡೆಗೆ ತೆರಳಿ ಒಂದು ಕೊಬ್ಬಿದ ಕರುವನ್ನು (ಬೇಯಿಸಿ) ತಂದರು.

ಅದನ್ನು ಅವರ ಮುಂದೆ ಇಟ್ಟರು. ನಂತರ ಕೇಳಿದರು: “ನೀವೇಕೆ ತಿನ್ನುವುದಿಲ್ಲ?”

ಇಬ್ರಾಹೀಮರಿಗೆ ಅವರ ಬಗ್ಗೆ ಮನಸ್ಸಿನಲ್ಲಿ ಗಾಬರಿ ಉಂಟಾಯಿತು. ಅವರು ಹೇಳಿದರು: “ಗಾಬರಿಯಾಗಬೇಡಿ.” ಅವರು ಇಬ್ರಾಹೀಮರಿಗೆ ಜ್ಞಾನವಂತ ಮಗುವಿನ (ಜನನದ ಬಗ್ಗೆ) ಸುವಾರ್ತೆ ತಿಳಿಸಿದರು.

ಅವರ ಪತ್ನಿ ಸದ್ದು ಮಾಡುತ್ತಾ ಮುಂದಕ್ಕೆ ಬಂದು ತನ್ನ ಮುಖಕ್ಕೆ ಬಡಿದು ಹೇಳಿದರು: “ನಾನೊಬ್ಬ ಮುದುಕಿ ಮತ್ತು ಬಂಜೆಯಾಗಿದ್ದೇನೆ.”

ದೇವದೂತರು‍ಗಳು ಹೇಳಿದರು: “ಈ ರೀತಿ ನಿಮ್ಮ ಪರಿಪಾಲಕನು (ಅಲ್ಲಾಹು) ಹೇಳಿದ್ದಾನೆ. ನಿಶ್ಚಯವಾಗಿಯೂ ಅವನು ವಿವೇಕಪೂರ್ಣನು ಮತ್ತು ಸರ್ವಜ್ಞನಾಗಿದ್ದಾನೆ.”

ಇಬ್ರಾಹೀಮ್ ಕೇಳಿದರು: “ಓ ದೂತರೇ! ಇಲ್ಲಿ ನಿಮಗೇನು ಕೆಲಸವಿದೆಯೆಂದು ಬಂದಿದ್ದೀರಿ?”

ಅವರು ಉತ್ತರಿಸಿದರು: “ನಮ್ಮನ್ನು ಅಪರಾಧಿಗಳಾದ ಜನರ ಬಳಿಗೆ ಕಳುಹಿಸಲಾಗಿದೆ.

ಅವರ ಮೇಲೆ ಜೇಡಿಮಣ್ಣಿನ ಕಲ್ಲುಗಳನ್ನು ಸುರಿಸುವುದಕ್ಕಾಗಿ.

ಅದು ಎಲ್ಲೆ ಮೀರಿದ ಜನರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಗುರುತು ಹಾಕಲಾದ ಕಲ್ಲುಗಳಾಗಿವೆ.”

ನಾವು ಅಲ್ಲಿದ್ದ ಎಲ್ಲಾ ಸತ್ಯವಿಶ್ವಾಸಿಗಳನ್ನು ಹೊರತೆಗೆದೆವು (ರಕ್ಷಿಸಿದೆವು).

ಆದರೆ ನಾವು ಅಲ್ಲಿ ಮುಸ್ಲಿಮರಿಗೆ ಸೇರಿದ ಒಂದೇ ಒಂದು ಮನೆಯನ್ನು ಮಾತ್ರ ಕಂಡೆವು.

ಯಾತನಾಮಯ ಶಿಕ್ಷೆಯನ್ನು ಭಯಪಡುವವರಿಗೆ ನಾವು ಅಲ್ಲಿ ಒಂದು ದೃಷ್ಟಾಂತವನ್ನು ಉಳಿಸಿದೆವು.

ಮೂಸಾರ ಸಮಾಚಾರದಲ್ಲೂ (ದೃಷ್ಟಾಂತಗಳಿವೆ). ನಾವು ಅವರನ್ನು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಫರೋಹ‍ನ ಬಳಿಗೆ ಕಳುಹಿಸಿದ ಸಂದರ್ಭ.

ಆದರೆ ಅವನು ತನ್ನ ಶಕ್ತಿಸಾಮರ್ಥ್ಯಕ್ಕೆ ಮರುಳಾಗಿ ಮುಖ ತಿರುಗಿಸುತ್ತಾ ಹೇಳಿದನು: “ಇವನೊಬ್ಬ ಮಾಟಗಾರ ಅಥವಾ ಮಾನಸಿಕ ಅಸ್ವಸ್ಥ.”

ಆದ್ದರಿಂದ ನಾವು ಅವನನ್ನು ಮತ್ತು ಅವನ ಸೈನ್ಯಗಳನ್ನು ಹಿಡಿದು ಸಮುದ್ರಕ್ಕೆ ಎಸೆದವು. ಅವನು ಆಕ್ಷೇಪಾರ್ಹನಾಗಿದ್ದನು.

ಆದ್ ಗೋತ್ರದಲ್ಲೂ (ದೃಷ್ಟಾಂತವಿದೆ). ನಾವು ಅವರ ವಿರುದ್ಧ ಬರಡು ಗಾಳಿಯನ್ನು ಕಳುಹಿಸಿದ ಸಂದರ್ಭ.

ಅದು ಯಾವೆಲ್ಲಾ ವಸ್ತುಗಳ ಮೇಲೆ ಬೀಸುತ್ತಿತ್ತೋ ಅವೆಲ್ಲವನ್ನೂ ಕೊಳೆತ ತುಣುಕುಗಳಂತೆ (ಚೂರು ಚೂರು) ಮಾಡುತ್ತಿತ್ತು.

ಸಮೂದ್ ಗೋತ್ರದಲ್ಲೂ (ದೃಷ್ಟಾಂತವಿದೆ). “ಒಂದು ಅವಧಿಯವರೆಗೆ ಆನಂದಿಸಿರಿ” ಎಂದು ಅವರೊಡನೆ ಹೇಳಲಾದ ಸಂದರ್ಭ.

ಆದರೆ ಅವರು ತಮ್ಮ ಪರಿಪಾಲಕನ (ಅಲ್ಲಾಹನ) ಆಜ್ಞೆಯನ್ನು ಧಿಕ್ಕರಿಸಿದರು. ಆಗ ಅವರು ನೋಡುತ್ತಿದ್ದಂತೆಯೇ ಭಯಾನಕ ಶಬ್ದವು ಅವರನ್ನು ಹಿಡಿಯಿತು.

ಅವರಿಗೆ ಎದ್ದು ನಿಲ್ಲಲು ಕೂಡ ಸಾಧ್ಯವಾಗಲಿಲ್ಲ. ಅವರಿಗೆ ಸ್ವಯಂ ರಕ್ಷಿಸಿಕೊಳ್ಳಲೂ ಸಾಧ್ಯವಾಗಲಿಲ್ಲ.

ಅದಕ್ಕಿಂತ ಮೊದಲು ನೂಹರ ಜನರಿಗೂ (ಇದೇ ಸ್ಥಿತಿ ಉಂಟಾಗಿತ್ತು). ನಿಶ್ಚಯವಾಗಿಯೂ ಅವರು ದುಷ್ಕರ್ಮಿಗಳಾದ ಜನರಾಗಿದ್ದರು.

ನಾವು ಆಕಾಶವನ್ನು ಕೈಗಳಿಂದ ನಿರ್ಮಿಸಿದ್ದೇವೆ. ನಿಶ್ಚಯವಾಗಿಯೂ ನಾವು ವಿಸ್ತರಿಸುವವರಾಗಿದ್ದೇವೆ.

ನಾವು ಭೂಮಿಯನ್ನು ಹಾಸಿನಂತೆ ಹರಡಿದ್ದೇವೆ. ನಾವು ಅತ್ಯುತ್ತಮವಾಗಿ ಹಾಸುವವರಾಗಿದ್ದೇವೆ.

ನಾವು ಎಲ್ಲ ವಸ್ತುಗಳನ್ನೂ ಜೋಡಿಯಾಗಿ ಸೃಷ್ಟಿಸಿದ್ದೇವೆ. ನೀವು ಉಪದೇಶ ಸ್ವೀಕರಿಸುವುದಕ್ಕಾಗಿ.

ಆದ್ದರಿಂದ ನೀವು ಅಲ್ಲಾಹನ ಕಡೆಗೆ (ಪಶ್ಚಾತ್ತಾಪದೊಂದಿಗೆ) ಧಾವಿಸಿರಿ. ನಿಶ್ಚಯವಾಗಿಯೂ ನಾನು ನಿಮಗೆ ಅವನ ಕಡೆಯ ಸ್ಪಷ್ಟ ಮುನ್ನೆಚ್ಚರಿಕೆಗಾರನಾಗಿದ್ದೇನೆ.

ನೀವು ಅಲ್ಲಾಹನೊಂದಿಗೆ ಬೇರೆ ದೇವರುಗಳನ್ನು ಮಾಡಿಕೊಳ್ಳಬೇಡಿ. ನಿಶ್ಚಯವಾಗಿಯೂ ನಾನು ನಿಮಗೆ ಅವನ ಕಡೆಯ ಸ್ಪಷ್ಟ ಮುನ್ನೆಚ್ಚರಿಕೆಗಾರನಾಗಿದ್ದೇನೆ.

ಈ ರೀತಿ ಇವರಿಗಿಂತ ಮೊದಲಿನವರ ಬಳಿಗೆ ಸಂದೇಶವಾಹಕರು ಬಂದಾಗಲೆಲ್ಲಾ ಅವರು ಅವರನ್ನು ಮಾಟಗಾರ ಅಥವಾ ಮಾನಸಿಕ ಅಸ್ವಸ್ಥ ಎಂದೇ ಹೇಳುತ್ತಿದ್ದರು.

ಇವರು ಈ ಮಾತನ್ನು ಪರಸ್ಪರ ಉಪದೇಶ ಮಾಡಿದ್ದಾರೆಯೇ? ಅಲ್ಲ, ವಾಸ್ತವವಾಗಿ ಅವರು ಅತಿರೇಕಿಗಳಾದ ಜನರಾಗಿದ್ದಾರೆ.

ಆದ್ದರಿಂದ ನೀವು ಅವರನ್ನು ಬಿಟ್ಟು ವಿಮುಖರಾಗಿರಿ. ನಿಮ್ಮ ಮೇಲೆ ಯಾವುದೇ ಆಕ್ಷೇಪವಿಲ್ಲ.

ನೀವು ಉಪದೇಶ ಮಾಡಿರಿ. ನಿಶ್ಚಯವಾಗಿಯೂ ಉಪದೇಶವು ಸತ್ಯವಿಶ್ವಾಸಿಗಳಿಗೆ ಪ್ರಯೋಜನ ನೀಡುತ್ತದೆ.

ನಾನು ಜಿನ್ನ್‌ಗಳನ್ನು ಮತ್ತು ಮನುಷ್ಯರನ್ನು ಸೃಷ್ಟಿಸಿದ್ದು ನನ್ನನ್ನು ಆರಾಧಿಸುವುದಕ್ಕಾಗಿ ಮಾತ್ರ.

ನಾನು ಅವರಿಂದ ಯಾವುದೇ ಉಪಜೀವನವನ್ನು ಬಯಸುವುದಿಲ್ಲ. ಅವರು ನನಗೆ ಆಹಾರ ನೀಡಬೇಕೆಂದೂ ನಾನು ಬಯಸುವುದಿಲ್ಲ.

ನಿಶ್ಚಯವಾಗಿಯೂ ಅಲ್ಲಾಹನೇ ಎಲ್ಲರಿಗೂ ಉಪಜೀವನ ನೀಡುವವನು. ಅವನು ಮಹಾಶಕ್ತಿಶಾಲಿ ಮತ್ತು ಬಲಿಷ್ಠನಾಗಿದ್ದಾನೆ.

ಅಕ್ರಮವೆಸಗಿದವರಿಗೆ ಅವರ ಸಂಗಡಿಗರಿಗೆ ದೊರೆತ (ಶಿಕ್ಷೆಯ) ಪಾಲಿನಂತೆಯೇ ಒಂದು ಪಾಲು ದೊರೆಯಲಿದೆ. ಆದ್ದರಿಂದ ಅವರು ನನ್ನೊಡನೆ ತ್ವರೆ ಮಾಡದಿರಲಿ.

ಅವರಿಗೆ ವಾಗ್ದಾನ ಮಾಡಲಾದ ಆ ದಿನದ ಕಾರಣದಿಂದ ಸತ್ಯನಿಷೇಧಿಗಳಿಗೆ ವಿನಾಶವಿದೆ.