The Noble Qur'an Encyclopedia
Towards providing reliable exegeses and translations of the meanings of the Noble Qur'an in the world languagesThe Star [An-Najm] - Kannada translation
Surah The Star [An-Najm] Ayah 62 Location Maccah Number 53
ನಕ್ಷತ್ರದ ಮೇಲಾಣೆ! ಅದು ಮರೆಯಾಗುವಾಗ.
ನಿಮ್ಮ ಸಂಗಡಿಗನು (ಪ್ರವಾದಿ) ದಾರಿತಪ್ಪಿಲ್ಲ, ಅವರು ವಕ್ರ ದಾರಿಯಲ್ಲೂ ಇಲ್ಲ.
ಅವರು ಮನಬಂದಂತೆ ಮಾತನಾಡುವುದಿಲ್ಲ.
ಅದು ಅವರಿಗೆ ಅವತೀರ್ಣಗೊಳಿಸಲಾದ ದೇವವಾಣಿಯಾಗಿದೆ.
ಅವರಿಗೆ ಮಹಾ ಶಕ್ತಿಶಾಲಿಯಾದ ದೇವದೂತರು (ಜಿಬ್ರೀಲ್) ಕಲಿಸಿದ್ದಾರೆ.
ಅವರು ಅತ್ಯಂತ ಬಲಿಷ್ಠರು. ಅವರು (ತಮ್ಮ ನಿಜರೂಪದಲ್ಲಿ) ನೇರವಾಗಿ ನಿಂತರು.
ಅವರು ಅತ್ಯುನ್ನತ ದಿಗಂತದಲ್ಲಿದ್ದರು.
ನಂತರ ಅವರು ಹತ್ತಿರವಾದರು ಮತ್ತು ಇಳಿದು ಬಂದರು.
ಅವರು ಎರಡು ಬಿಲ್ಲುಗಳ ದೂರದಲ್ಲಿ ಅಥವಾ ಅದಕ್ಕಿಂತಲೂ ಹತ್ತಿರವಾದರು.
ಅವರು ಅಲ್ಲಾಹನ ದಾಸರಿಗೆ (ಪ್ರವಾದಿಗೆ) ದೇವವಾಣಿಯಾಗಿ ತಲುಪಿಸಬೇಕಾದುದನ್ನು ತಲುಪಿಸಿದರು.
ಅವರು (ಪ್ರವಾದಿ) ನೋಡಿದ ಆ ನೋಟವನ್ನು ಹೃದಯವು ನಿಷೇಧಿಸಲಿಲ್ಲ.
ಅವರು (ಪ್ರವಾದಿ) ನೋಡಿರುವುದರ ವಿಷಯದಲ್ಲಿ ನೀವು ಅವರೊಡನೆ ತರ್ಕಿಸುತ್ತೀರಾ?
ಅವರು ಇನ್ನೊಂದು ಬಾರಿಯೂ ಅವರನ್ನು (ಜಿಬ್ರೀಲರನ್ನು) ನೋಡಿದ್ದರು.
ಸಿದ್ರತುಲ್ ಮುಂತಹಾದ (ತುತ್ತುತುದಿಯ ಬೋರೆ ಮರದ) ಬಳಿಯಲ್ಲಿ.[1]
ಅದರ ಬಳಿಯಲ್ಲೇ ಜನ್ನತುಲ್ ಮಅವಾ ಇದೆ.[1]
ಆ ಬೋರೆ ಮರವನ್ನು ಆವರಿಸಬೇಕಾದುದೆಲ್ಲವೂ ಆವರಿಸಿದಾಗ.
(ಪ್ರವಾದಿಯ) ದೃಷ್ಟಿಯು ತಪ್ಪಿಹೋಗಲಿಲ್ಲ ಮತ್ತು ಎಲ್ಲೆ ಮೀರಲೂ ಇಲ್ಲ.[1]
ಅವರು ಅವರ ಪರಿಪಾಲಕನ (ಅಲ್ಲಾಹನ) ಮಹಾ ದೃಷ್ಟಾಂತಗಳಲ್ಲಿ ಕೆಲವನ್ನು ನೋಡಿದರು.
ನೀವು ಲಾತ್ ಮತ್ತು ಉಝ್ಝಾದ ಬಗ್ಗೆ ಆಲೋಚಿಸಿ ನೋಡಿದ್ದೀರಾ?
ಇನ್ನೊಂದು ಮೂರನೆಯ (ದೇವರಾದ) ಮನಾತ್ ಬಗ್ಗೆ.[1]
ನಿಮಗೆ ಗಂಡು ಮಕ್ಕಳು ಮತ್ತು ಅಲ್ಲಾಹನಿಗೆ ಹೆಣ್ಣು ಮಕ್ಕಳೇ?
ಇದು ಬಹುದೊಡ್ಡ ಅನ್ಯಾಯದ ಹಂಚಿಕೆಯಾಗಿದೆ!
ಇವೆಲ್ಲವೂ ನೀವು ಮತ್ತು ನಿಮ್ಮ ಪೂರ್ವಜರು ನಾಮಕರಣ ಮಾಡಿದ ಕೆಲವು (ವಿಗ್ರಹಗಳ) ಹೆಸರುಗಳಲ್ಲದೆ ಇನ್ನೇನೂ ಅಲ್ಲ. ಅವುಗಳ ಬಗ್ಗೆ ಅಲ್ಲಾಹು ಯಾವುದೇ ಸಾಕ್ಷ್ಯಾಧಾರವನ್ನು ಇಳಿಸಿಕೊಟ್ಟಿಲ್ಲ. ಅವರು ಕೇವಲ ಊಹೆಯನ್ನು ಮತ್ತು ಅವರ ಮನಸ್ಸು ಬಯಸುವುದನ್ನು ಮಾತ್ರ ಹಿಂಬಾಲಿಸುತ್ತಿದ್ದಾರೆ. ಅವರ ಬಳಿಗೆ ಅವರ ಪರಿಪಾಲಕನ (ಅಲ್ಲಾಹನ) ಕಡೆಯಿಂದ ಸನ್ಮಾರ್ಗವು ಬಂದುಬಿಟ್ಟಿದೆ.
ಮನುಷ್ಯನಿಗೆ ಅವನು ಬಯಸುವುದೆಲ್ಲವೂ ಸಿಗುವುದೇ?[1]
ಪರಲೋಕ ಮತ್ತು ಇಹಲೋಕವು ಅಲ್ಲಾಹನ ವಶದಲ್ಲಿವೆ.
ಆಕಾಶಗಳಲ್ಲಿ ಎಷ್ಟು ದೇವದೂತರುಗಳಿದ್ದಾರೆ. ಅಲ್ಲಾಹು ಅವನು ಇಚ್ಛಿಸುವವರಿಗೆ ಮತ್ತು ಅವನ ಪ್ರೀತಿಗೆ ಪಾತ್ರರಾದವರಿಗೆ ಶಿಫಾರಸು ಮಾಡಲು ಅನುಮತಿ ನೀಡಿದವರ ಹೊರತು ಇತರರು ಮಾಡುವ ಶಿಫಾರಸಿನಿಂದ ಯಾವುದೇ ಪ್ರಯೋಜನವಿಲ್ಲ.
ನಿಶ್ಚಯವಾಗಿಯೂ ಪರಲೋಕದಲ್ಲಿ ವಿಶ್ವಾಸವಿಡದವರು ಯಾರೋ—ಅವರು ದೇವದೂತರುಗಳಿಗೆ ಸ್ತ್ರೀಯರ ಹೆಸರನ್ನಿಡುತ್ತಾರೆ.[1]
ಅವರಿಗೆ ಅದರ ಬಗ್ಗೆ ಯಾವುದೇ ಜ್ಞಾನವಿಲ್ಲ. ಅವರು ಕೇವಲ ಊಹೆಯನ್ನು ಮಾತ್ರ ಹಿಂಬಾಲಿಸುತ್ತಾರೆ. ನಿಶ್ಚಯವಾಗಿಯೂ ಸತ್ಯದೆದುರು ಊಹೆಯು ಯಾವುದೇ ಉಪಕಾರ ಮಾಡುವುದಿಲ್ಲ.
ನಮ್ಮ ಸ್ಮರಣೆಯಿಂದ ವಿಮುಖರಾದವರು ಮತ್ತು ಇಹಲೋಕವನ್ನು ಮಾತ್ರ ಬಯಸುವವರು ಯಾರೋ—ಅವರಿಂದ ನೀವು ವಿಮುಖರಾಗಿರಿ.
ಅದೇ ಅವರ ಜ್ಞಾನದ ಪರಾಕಾಷ್ಠೆ. ತನ್ನ ಮಾರ್ಗದಿಂದ ತಪ್ಪಿಹೋದವರ ಬಗ್ಗೆ ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಬಹಳ ಚೆನ್ನಾಗಿ ತಿಳಿದಿದ್ದಾನೆ. ಸನ್ಮಾರ್ಗ ಪಡೆದವರ ಬಗ್ಗೆಯೂ ಅವನು ಬಹಳ ಚೆನ್ನಾಗಿ ತಿಳಿದಿದ್ದಾನೆ.
ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನಿಗೆ ಸೇರಿದ್ದು. ದುಷ್ಕರ್ಮಿಗಳಿಗೆ ಅವರು ಮಾಡಿದ ದುಷ್ಕರ್ಮದ ಪ್ರತಿಫಲವನ್ನು ನೀಡಲು ಮತ್ತು ಸತ್ಕರ್ಮಿಗಳಿಗೆ ಅತ್ಯುತ್ತಮವಾದ ಪ್ರತಿಫಲವನ್ನು ನೀಡಲು.
ಅವರು (ಸತ್ಕರ್ಮಿಗಳು) ಯಾರೆಂದರೆ, ಮಹಾಪಾಪಗಳಿಂದ ಮತ್ತು ಅಶ್ಲೀಲಕೃತ್ಯಗಳಿಂದ ದೂರವಿರುವವರು. ಕೆಲವು ಚಿಕ್ಕಪುಟ್ಟ ಪಾಪಗಳ ಹೊರತು. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ವಿಶಾಲವಾಗಿ ಕ್ಷಮಿಸುವವನಾಗಿದ್ದಾನೆ. ಅವನು ನಿಮ್ಮನ್ನು ಭೂಮಿಯಿಂದ ಸೃಷ್ಟಿಸಿದಾಗ ಮತ್ತು ನೀವು ನಿಮ್ಮ ತಾಯಂದಿರ ಉದರಗಳಲ್ಲಿ ಭ್ರೂಣಗಳಾಗಿದ್ದಾಗ ಅವನಿಗೆ ನಿಮ್ಮ ಬಗ್ಗೆ ಬಹಳ ಚೆನ್ನಾಗಿ ತಿಳಿದಿದೆ. ಆದ್ದರಿಂದ ನೀವು ನಿಮ್ಮನ್ನು ಪರಿಶುದ್ಧರೆಂದು ಘೋಷಿಸಬೇಡಿ. ದೇವಭಯವುಳ್ಳವರ ಬಗ್ಗೆ ಅವನಿಗೆ ಬಹಳ ಚೆನ್ನಾಗಿ ತಿಳಿದಿದೆ.
ಮುಖ ತಿರುಗಿಸಿ ಹೋದವನನ್ನು ನೀವು ನೋಡಿದ್ದೀರಾ?
ಅವನು ಬಹಳ ಕಡಿಮೆ ಕೊಟ್ಟನು ಮತ್ತು ನಿಲ್ಲಿಸಿದನು.
ಅವನ ಬಳಿ ಅದೃಶ್ಯ ಜ್ಞಾನವಿದ್ದು ಅವನು ಅದರ ಮೂಲಕ (ಎಲ್ಲವನ್ನು) ನೋಡುತ್ತಿದ್ದಾನೆಯೇ?
ಮೂಸಾರ ಗ್ರಂಥಗಳಲ್ಲಿರುವುದರ ಬಗ್ಗೆ ಅವನಿಗೆ ತಿಳಿಸಲಾಗಿಲ್ಲವೇ?
(ಕರ್ತವ್ಯಗಳನ್ನು) ನೆರವೇರಿಸಿದ ಇಬ್ರಾಹೀಮರ ಗ್ರಂಥಗಳಲ್ಲಿರುವುದನ್ನು.
ಪಾಪಭಾರವನ್ನು ಹೊರುವ ಯಾರೂ ಇನ್ನೊಬ್ಬರ ಪಾಪಭಾರವನ್ನು ಹೊರುವುದಿಲ್ಲವೆಂದು,
ಮನುಷ್ಯನಿಗೆ ಅವನು ಮಾಡುವ ಪರಿಶ್ರಮಗಳಲ್ಲದೆ ಬೇರೇನೂ ಇಲ್ಲವೆಂದು,
ಅವನ ಪರಿಶ್ರಮವನ್ನು ಸದ್ಯವೇ ಅವನಿಗೆ ತೋರಿಸಲಾಗುವುದೆಂದು,
ನಂತರ ಅವನಿಗೆ ಪೂರ್ಣರೂಪದಲ್ಲಿ ಪ್ರತಿಫಲ ನೀಡಲಾಗುವುದೆಂದು,
ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೇ ತಲುಪಬೇಕೆಂದು,
ಅವನೇ ನಗುವಂತೆ ಮತ್ತು ಅಳುವಂತೆ ಮಾಡುವವನೆಂದು,
ಅವನೇ ಮರಣ ಮತ್ತು ಜೀವನವನ್ನು ನೀಡುವವನೆಂದು,
ಅವನೇ ಗಂಡು-ಹೆಣ್ಣುಗಳೆಂಬ ಜೋಡಿಯನ್ನು ಸೃಷ್ಟಿಸಿದವನೆಂದು,
ವೀರ್ಯದಿಂದ—ಅದನ್ನು ಸೃವಿಸಲಾದಾಗ.
ಎರಡನೆಯ ಬಾರಿ ಜೀವ ನೀಡುವುದು ಅವನ ಹೊಣೆಗಾರಿಕೆಯೆಂದು,
ಅವನೇ ಐಶ್ವರ್ಯ ಮತ್ತು ಸಂತೃಪ್ತತೆಯನ್ನು ನೀಡುವವನೆಂದು,
ಅವನೇ ಶಿಅರಾ[1] ನಕ್ಷತ್ರದ ಒಡೆಯನೆಂದು,
ಅವನೇ ಪ್ರಾಚೀನ ಆದ್ ಗೋತ್ರವನ್ನು ನಾಶ ಮಾಡಿದವನೆಂದು,
ಮತ್ತು ಸಮೂದ್ ಗೋತ್ರವನ್ನು. ಅವನು ಅವರಲ್ಲಿ ಒಬ್ಬನನ್ನೂ ಬಾಕಿಯುಳಿಸಲಿಲ್ಲ.
ಅದಕ್ಕಿಂತ ಮೊದಲು ನೂಹರ ಜನರನ್ನು. ನಿಶ್ಚಯವಾಗಿಯೂ ಅವರು ಮಹಾ ಅಕ್ರಮಿಗಳು ಮತ್ತು ಅತಿರೇಕಿಗಳಾಗಿದ್ದರು.
ಮತ್ತು ಬುಡಮೇಲಾದ ದೇಶವನ್ನು.[1] ಅವನು ಅದನ್ನು ಬುಡಮೇಲುಗೊಳಿಸಿದನು.
ನಂತರ ಅದನ್ನು ಆವರಿಸಬೇಕಾದುದೆಲ್ಲವೂ ಆವರಿಸುವಂತೆ ಮಾಡಿದನು.
ಆದ್ದರಿಂದ (ಓ ಮಾನವನೇ), ನೀನು ನಿನ್ನ ಪರಿಪಾಲಕನ (ಅಲ್ಲಾಹನ) ಅನುಗ್ರಹಗಳಲ್ಲಿ ಯಾವುದರ ಬಗ್ಗೆ ಸಂಶಯಪಡುವೆ?
ಇವರು (ಪ್ರವಾದಿ) ಪೂರ್ವಿಕ ಮುನ್ನೆಚ್ಚರಿಕೆಗಾರರಲ್ಲಿ (ಪ್ರವಾದಿಗಳಲ್ಲಿ) ಸೇರಿದ ಒಬ್ಬ ಮುನ್ನೆಚ್ಚರಿಕೆಗಾರರಾಗಿದ್ದಾರೆ.
ಹತ್ತಿರವಾಗುವ ಆ ಸಮಯವು (ಪುನರುತ್ಥಾನ ದಿನ) ಹತ್ತಿರವಾಗಿದೆ.
ಅದನ್ನು (ಅದರ ನಿಶ್ಚಿತ ಸಮಯದಲ್ಲಿ) ಅಲ್ಲಾಹನ ಹೊರತು ಯಾರೂ ತೋರಿಸುವವರಿಲ್ಲ.
ಹಾಗಾದರೆ ಈ ಸಮಾಚಾರದಿಂದ ನಿಮಗೆ ಅಚ್ಚರಿಯಾಗುತ್ತಿದೆಯೇ?
ನೀವು ನಗುತ್ತಿದ್ದೀರಿ. ನೀವು ಅಳುತ್ತಿಲ್ಲ.
ನೀವು ಆಟವಾಡುತ್ತಿದ್ದೀರಿ.
ನೀವು ಅಲ್ಲಾಹನಿಗೆ ಸಾಷ್ಟಾಂಗ ಮಾಡಿರಿ ಮತ್ತು ಅವನನ್ನು ಆರಾಧಿಸಿರಿ.