The Noble Qur'an Encyclopedia
Towards providing reliable exegeses and translations of the meanings of the Noble Qur'an in the world languagesThe moon [Al-Qamar] - Kannada translation
Surah The moon [Al-Qamar] Ayah 55 Location Maccah Number 54
ಅಂತ್ಯಸಮಯವು ಹತ್ತಿರವಾಗಿದೆ ಮತ್ತು ಚಂದ್ರ ಇಬ್ಭಾಗವಾಗಿದೆ.[1]
ಅವರು ಯಾವುದೇ ದೃಷ್ಟಾಂತವನ್ನು ನೋಡಿದರೂ ವಿಮುಖರಾಗುತ್ತಾರೆ ಮತ್ತು “ಇದು ಹಿಂದಿನಿಂದಲೇ ನಡೆದು ಬರುತ್ತಿರುವ ಮಾಟಗಾರಿಕೆ” ಎಂದು ಹೇಳುತ್ತಾರೆ.
ಅವರು ನಿಷೇಧಿಸಿದರು ಮತ್ತು ತಮ್ಮ ಸ್ವೇಚ್ಛೆಗಳನ್ನು ಹಿಂಬಾಲಿಸಿದರು. ಎಲ್ಲಾ ವಿಷಯಗಳಿಗೂ ಒಂದು ನಿಶ್ಚಿತ ಸಮಯವನ್ನು ನಿರ್ಣಯಿಸಲಾಗಿದೆ.
ನಿಶ್ಚಯವಾಗಿಯೂ ಅವರ ಬಳಿಗೆ ಗದರಿಕೆಯ (ಉಪದೇಶವಿರುವ) ಸಮಾಚಾರಗಳು ಬಂದಿವೆ.
ಪೂರ್ಣರೂಪದ ವಿವೇಕಯುಕ್ತ ಮಾತುಗಳು. ಆದರೂ ಆ ಮುನ್ನೆಚ್ಚರಿಕೆಗಳು ಪ್ರಯೋಜನ ನೀಡಲಿಲ್ಲ.
ಆದ್ದರಿಂದ (ಪ್ರವಾದಿಯವರೇ!) ನೀವು ಅವರಿಂದ ವಿಮುಖರಾಗಿ ಬಿಡಿ. ಕರೆ ನೀಡುವವನು ಅನಿಷ್ಟಕರ ವಿಷಯದ ಕಡೆಗೆ ಕರೆ ನೀಡುವ ದಿನ.
ಅವರ ಕಣ್ಣುಗಳು ವಿನಮ್ರವಾಗಿರುವುವು. ದಿಕ್ಕೆಟ್ಟು ಹಾರಾಡುವ ಮಿಡತೆಗಳಂತೆ ಅವರು ಸಮಾಧಿಗಳಿಂದ ಹೊರಬರುವರು.
ಅವರು ಕರೆ ನೀಡುವವನ ಕಡೆಗೆ ಆತುರದಿಂದ ಓಡುವರು. ಸತ್ಯನಿಷೇಧಿಗಳು ಹೇಳುವರು: “ಇದು ಕಠೋರ ದಿನವಾಗಿದೆ.”
ಅವರಿಗಿಂತ ಮೊದಲು ನೂಹರ ಜನರು ನಿಷೇಧಿಸಿದ್ದರು. ಅವರು ನಮ್ಮ ದಾಸನನ್ನು ನಿಷೇಧಿಸಿದರು. ಮಾನಸಿಕ ಅಸ್ವಸ್ಥ ಎಂದು ಜರೆಯುತ್ತಾ ಅವರನ್ನು ಗದರಿಸಿದರು.
ಆಗ ನೂಹ್ ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿದರು: “ನಾನು ಅಸಹಾಯಕನಾಗಿದ್ದೇನೆ. ನನಗೆ ಸಹಾಯ ಮಾಡು.”
ಆಗ ರಭಸವಾಗಿ ಸುರಿಯುವ ಮಳೆಗಾಗಿ ನಾವು ಆಕಾಶದ್ವಾರಗಳನ್ನು ತೆರೆದೆವು.
ನಾವು ಭೂಮಿಯಲ್ಲಿ ಒರತೆಗಳನ್ನು ಚಿಮ್ಮುವಂತೆ ಮಾಡಿದೆವು. ಈಗಾಗಲೇ ನಿರ್ಣಯಿಸಿದ ವಿಷಯಕ್ಕಾಗಿ (ಆಕಾಶ ಮತ್ತು ಭೂಮಿಯ) ನೀರು ಸಂಗಮವಾಯಿತು.
ನಾವು ಅವರನ್ನು ಹಲಗೆಗಳು ಮತ್ತು ಮೊಳೆಗಳಿಂದ (ನಿರ್ಮಿಸಿದ ಹಡಗಿನಲ್ಲಿ) ಒಯ್ದೆವು.
ಅದು ನಮ್ಮ ಕಣ್ಣುಗಳ ಮುಂಭಾಗದಲ್ಲಿ ಚಲಿಸುತ್ತಿತ್ತು. ಯಾರನ್ನು ನಿಷೇಧಿಸಲಾಯಿತೋ ಅವರಿಗೆ (ನೂಹರಿಗೆ) ಪ್ರತಿಫಲವಾಗಿ.
ನಿಶ್ಚಯವಾಗಿಯೂ ನಾವು ಆ ಘಟನೆಯನ್ನು ಒಂದು ದೃಷ್ಟಾಂತವಾಗಿ ಉಳಿಸಿದೆವು. ಉಪದೇಶ ಸ್ವೀಕರಿಸುವವರು ಯಾರಾದರೂ ಇದ್ದಾರೆಯೇ?
ನನ್ನ ಶಿಕ್ಷೆ ಮತ್ತು ಎಚ್ಚರಿಕೆಯ ಮಾತುಗಳು ಹೇಗಿದ್ದವು (ಎಂದು ಹೇಳಿರಿ).
ನಾವು ಕುರ್‌ಆನನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಸರಳಗೊಳಿಸಿದ್ದೇವೆ. ಉಪದೇಶ ಸ್ವೀಕರಿಸುವವರು ಯಾರಾದರೂ ಇದ್ದಾರೆಯೇ?
ಆದ್ ಗೋತ್ರದವರು ನಿಷೇಧಿಸಿದರು. ಆಗ ನನ್ನ ಶಿಕ್ಷೆ ಮತ್ತು ಎಚ್ಚರಿಕೆಯ ಮಾತುಗಳು ಹೇಗಿದ್ದವು?
ನಿಶ್ಚಯವಾಗಿಯೂ ನಾವು ನಿರಂತರವಾಗಿ ಬೀಸುವ ಭೀಕರ ಚಳಿಗಾಳಿಯನ್ನು ಅಶುಭ ದಿನಗಳಲ್ಲಿ ಅವರ ಕಡೆಗೆ ಕಳುಹಿಸಿದೆವು.
ಅದು ಮನುಷ್ಯರನ್ನು ಎತ್ತಿ ಎಸೆಯುತ್ತಿತ್ತು. ಅವರು ಬುಡಸಮೇತ ಕೀಳಲಾದ ಖರ್ಜೂರ ಮರದ ಕಾಂಡಗಳೋ ಎಂಬಂತೆ.
ಆಗ ನನ್ನ ಶಿಕ್ಷೆ ಮತ್ತು ಎಚ್ಚರಿಕೆಯ ಮಾತುಗಳು ಹೇಗಿದ್ದವು?
ನಾವು ಕುರ್‌ಆನನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಸರಳಗೊಳಿಸಿದ್ದೇವೆ. ಉಪದೇಶ ಸ್ವೀಕರಿಸುವವರು ಯಾರಾದರೂ ಇದ್ದಾರೆಯೇ?
ಸಮೂದ್ ಗೋತ್ರದವರು ಎಚ್ಚರಿಕೆಗಳನ್ನು ನಿಷೇಧಿಸಿದರು.
ಅವರು ಹೇಳಿದರು: “ನಮ್ಮವರಲ್ಲೇ ಸೇರಿದ ಒಬ್ಬನನ್ನು ನಾವು ಅನುಸರಿಸಬೇಕೇ? ಹಾಗೇನಾದರೂ ಆದರೆ ನಿಶ್ಚಯವಾಗಿಯೂ ನಾವು ಪ್ರಮಾದದಲ್ಲಿ ಬೀಳುವೆವು ಮತ್ತು ಮತಿಯಿಲ್ಲದವರಾಗಿ ಬಿಡುವೆವು.
ನಮ್ಮ ನಡುವೆ ಅವನಿಗೆ ಮಾತ್ರ ದೇವವಾಣಿ ನೀಡಲಾಗುತ್ತಿದೆಯೇ? ಅಲ್ಲ, ವಾಸ್ತವವಾಗಿ ಅವನು ಸುಳ್ಳುಗಾರ ಮತ್ತು ಅಹಂಭಾವಿಯಾಗಿದ್ದಾನೆ.”
ಸುಳ್ಳುಗಾರ ಮತ್ತು ಅಹಂಭಾವಿ ಯಾರೆಂದು ಅವರು ನಾಳೆ ತಿಳಿಯುವರು.
ನಿಶ್ಚಯವಾಗಿಯೂ ನಾವು ಅವರಿಗೆ ಪರೀಕ್ಷೆಯಾಗಿ ಒಂದು ಒಂಟೆಯನ್ನು ಕಳುಹಿಸುವೆವು. (ಓ ಸ್ವಾಲಿಹ್) ನೀವು ಅವರನ್ನು ಗಮನಿಸುತ್ತಿರಿ ಮತ್ತು ತಾಳ್ಮೆಯಿಂದಿರಿ.
ನೀರನ್ನು ಅವರ ಮಧ್ಯೆ (ಅವರಿಗೆ ಮತ್ತು ಒಂಟೆಗೆ) ಪಾಲು ಮಾಡಲಾಗಿದೆಯೆಂದು ಅವರಿಗೆ ತಿಳಿಸಿರಿ. ಪ್ರತಿಯೊಬ್ಬರೂ ತಮ್ಮ ಸರದಿ ಬಂದಾಗ ಉಪಸ್ಥಿತರಾಗಲಿ.
ಆದರೆ ಅವರು ಅವರ ಗೆಳೆಯನನ್ನು ಕರೆದರು. ಅವನು ಆ ಒಂಟೆಯನ್ನು ಹಿಡಿದು ಅದರ ಕಾಲುಗಳನ್ನು ಕತ್ತರಿಸಿದನು.
ಆಗ ನನ್ನ ಶಿಕ್ಷೆ ಮತ್ತು ಎಚ್ಚರಿಕೆಯ ಮಾತುಗಳು ಹೇಗಿದ್ದವು?
ನಾವು ಅವರ ಮೇಲೆ ಒಂದೇ ಚೀತ್ಕಾರವನ್ನು ಕಳುಹಿಸಿದೆವು. ಆಗ ಅವರು ಹಟ್ಟಿ ನಿರ್ಮಿಸುವವನು ಎಸೆದ ಹುಲ್ಲಿನಂತಾಗಿ ಬಿಟ್ಟರು.
ನಾವು ಕುರ್‌ಆನನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಸರಳಗೊಳಿಸಿದ್ದೇವೆ. ಉಪದೇಶ ಸ್ವೀಕರಿಸುವವರು ಯಾರಾದರೂ ಇದ್ದಾರೆಯೇ?
ಲೂತರ ಜನರು ಎಚ್ಚರಿಕೆಗಳನ್ನು ನಿಷೇಧಿಸಿದರು.
ನಿಶ್ಚಯವಾಗಿಯೂ ನಾವು ಅವರ ಮೇಲೆ ಕಲ್ಲುಗಳ ಬಿರುಗಾಳಿಯನ್ನು ಕಳುಹಿಸಿದೆವು. ಲೂತರ ಕುಟುಂಬದ ಹೊರತು. ನಾವು ಅವರನ್ನು ಸಹರಿಯ ವೇಳೆಯಲ್ಲಿ (ರಾತ್ರಿಯ ಕೊನೆಯ ಸಮಯ) ರಕ್ಷಿಸಿದೆವು.
ನಮ್ಮ ಕಡೆಯ ಒಂದು ಉಪಕಾರವಾಗಿ. ಕೃತಜ್ಞರಾಗಿರುವವರಿಗೆ ನಾವು ಈ ರೀತಿ ಪ್ರತಿಫಲವನ್ನು ನೀಡುವೆವು.
ನಮ್ಮ ಹಿಡಿತದ ಬಗ್ಗೆ ಅವರು (ಲೂತ್) ಅವರಿಗೆ ಎಚ್ಚರಿಕೆ ನೀಡಿದ್ದರು. ಆದರೆ ಅವರು ಆ ಎಚ್ಚರಿಕೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
ಅವರು ಲೂತರನ್ನು ಅವರ ಅತಿಥಿಗಳ ವಿಷಯದಲ್ಲಿ ಪುಸಲಾಯಿಸಿದರು. ಆಗ ನಾವು ಅವರ ಕಣ್ಣುಗಳನ್ನು ಕುರುಡಾಗಿಸಿದೆವು. (ನಾವು ಹೇಳಿದೆವು): “ನನ್ನ ಶಿಕ್ಷೆ ಮತ್ತು ಎಚ್ಚರಿಕೆಗಳ ರುಚಿಯನ್ನು ನೋಡಿರಿ.”
ಮುಂಜಾನೆಯೇ ಅವರನ್ನು ಒಂದೇ ಸ್ಥಳದಲ್ಲಿ ಹಿಡಿದಿಡುವ ಶಿಕ್ಷೆಯು ಅವರ ಮೇಲೆರಗಿಬಿಟ್ಟಿತು.
(ನಾವು ಹೇಳಿದೆವು): “ನನ್ನ ಶಿಕ್ಷೆ ಮತ್ತು ಎಚ್ಚರಿಕೆಗಳ ರುಚಿಯನ್ನು ನೋಡಿರಿ.”
ನಾವು ಕುರ್‌ಆನನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಸರಳಗೊಳಿಸಿದ್ದೇವೆ. ಉಪದೇಶ ಸ್ವೀಕರಿಸುವವರು ಯಾರಾದರೂ ಇದ್ದಾರೆಯೇ?
ಫರೋಹನ ಜನರಿಗೂ ಎಚ್ಚರಿಕೆಗಳು ಬಂದಿದ್ದವು.
ಅವರು ನಮ್ಮ ದೃಷ್ಟಾಂತಗಳೆಲ್ಲವನ್ನೂ ನಿಷೇಧಿಸಿದರು. ಆಗ ನಾವು ಮಹಾ ಪ್ರಬಲನು ಮತ್ತು ಶಕ್ತಿವಂತನು ಹಿಡಿಯುವಂತೆ ಅವರನ್ನು ಹಿಡಿದೆವು.
(ಓ ಕುರೈಶರೇ) ನಿಮ್ಮ ಸತ್ಯನಿಷೇಧಿಗಳು ಇವರಿಗಿಂತ ಒಳ್ಳೆಯವರೇ? ಅಥವಾ ನಿಮಗೆ ಪೂರ್ವ ಗ್ರಂಥಗಳಲ್ಲಿ ವಿನಾಯಿತಿ ನಿಶ್ಚಯಿಸಲಾಗಿದೆಯೇ?
ಅಥವಾ, “ನಾವು ಗೆಲ್ಲುವ ಸಂಘವಾಗಿದ್ದೇವೆ” ಎಂದು ಅವರು ಹೇಳುತ್ತಿದ್ದಾರೆಯೇ?
ಅವರ ಸಂಘವು ಸದ್ಯವೇ ಪರಾಭವಗೊಳ್ಳಲಿದೆ ಮತ್ತು ಅವರು ಬೆನ್ನು ತೋರಿಸಿ ಓಡಲಿದ್ದಾರೆ.
ಅಲ್ಲ, ಅಂತ್ಯಸಮಯವು (ಪುನರುತ್ಥಾನ ದಿನವು) ಅವರಿಗೆ ವಾಗ್ದಾನ ಮಾಡಲಾದ ಸಮಯವಾಗಿದೆ. ಅಂತ್ಯಸಮಯವು ಅತ್ಯಂತ ಕಠೋರ ಮತ್ತು ಅತ್ಯಂತ ಕಹಿಯಾಗಿದೆ.
ನಿಶ್ಚಯವಾಗಿಯೂ ಅಪರಾಧಿಗಳು ದುರ್ಮಾರ್ಗದಲ್ಲಿ ಮತ್ತು ಶಿಕ್ಷೆಯಲ್ಲಿದ್ದಾರೆ.
ಅವರನ್ನು ಅವರ ಮುಖದ ಮೇಲೆ ನರಕಾಗ್ನಿಯಲ್ಲಿ ಎಳೆದೊಯ್ಯಲಾಗುವ ದಿನ! (ಅವರೊಡನೆ ಹೇಳಲಾಗುವುದು): “ನೀವು ನರಕ ಸ್ಪರ್ಶದ ರುಚಿಯನ್ನು ನೋಡಿರಿ.”
ನಿಶ್ಚಯವಾಗಿಯೂ ನಾವು ಎಲ್ಲಾ ವಸ್ತುಗಳನ್ನು ಒಂದು (ನಿಶ್ಚಿತ) ನಿರ್ಣಯದಂತೆ ಸೃಷ್ಟಿಸಿದ್ದೇವೆ.
ನಮ್ಮ ಆಜ್ಞೆಯು ಕಣ್ಣೆವೆಯಿಕ್ಕುವಂತೆ ಒಂದು ಮಾತು ಮಾತ್ರವಾಗಿದೆ.
ನಾವು ನಿಮ್ಮಂತಹ ಅನೇಕರನ್ನು ನಾಶ ಮಾಡಿದ್ದೇವೆ. ಉಪದೇಶ ಸ್ವೀಕರಿಸುವವರು ಯಾರಾದರೂ ಇದ್ದಾರೆಯೇ?
ಅವರು ಮಾಡಿದ ಕರ್ಮಗಳೆಲ್ಲವೂ ಕರ್ಮಪುಸ್ತಕಗಳಲ್ಲಿವೆ.
ಚಿಕ್ಕ ಮತ್ತು ದೊಡ್ಡದಾದ ಎಲ್ಲವನ್ನೂ ನಮೂದಿಸಲಾಗಿದೆ.
ನಿಶ್ಚಯವಾಗಿಯೂ ದೇವಭಯವುಳ್ಳವರು ಸ್ವರ್ಗೋದ್ಯಾನಗಳಲ್ಲಿ ಮತ್ತು ನದಿಗಳಲ್ಲಿರುವರು.
ಗೌರವದ ಆಸನದಲ್ಲಿ, ಬಲಿಷ್ಠ ಸಾಮ್ರಾಟನ ಬಳಿಯಲ್ಲಿ.