عربيEnglish

The Noble Qur'an Encyclopedia

Towards providing reliable exegeses and translations of the meanings of the Noble Qur'an in the world languages

The congregation, Friday [Al-Jumua] - Kannada translation

Surah The congregation, Friday [Al-Jumua] Ayah 11 Location Madanah Number 62

ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನ ಪರಿಶುದ್ಧಿಯನ್ನು ಕೊಂಡಾಡುತ್ತಿವೆ. ಅವನು ಸಾಮ್ರಾಟನು, ಪರಮ ಪವಿತ್ರನು, ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.

ಅವನೇ ಅನಕ್ಷರಸ್ಥ ಜನರಿಗೆ ಅವರಿಂದಲೇ ಒಬ್ಬ ಸಂದೇಶವಾಹಕರನ್ನು ಕಳುಹಿಸಿದವನು. ಆ ಸಂದೇಶವಾಹಕರು ಅವರಿಗೆ ಅಲ್ಲಾಹನ ವಚನಗಳನ್ನು ಓದಿಕೊಡುತ್ತಾರೆ, ಅವರನ್ನು ಶುದ್ಧೀಕರಿಸುತ್ತಾರೆ ಮತ್ತು ಅವರಿಗೆ ಗ್ರಂಥ ಹಾಗೂ ವಿವೇಕವನ್ನು ಕಲಿಸಿಕೊಡುತ್ತಾರೆ. ಇದಕ್ಕಿಂತ ಮೊದಲು ಅವರು ಸ್ಪಷ್ಟ ದುರ್ಮಾರ್ಗದಲ್ಲಿದ್ದರು.

ಅವರಲ್ಲಿ ಇನ್ನೂ ಅವರೊಡನೆ ಸೇರಿಕೊಳ್ಳದ ಜನರಿಗೂ ಕೂಡ (ಅವರು ಸಂದೇಶವಾಹಕರಾಗಿದ್ದಾರೆ). ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.

ಅದು ಅಲ್ಲಾಹನ ಔದಾರ್ಯವಾಗಿದ್ದು ಅವನು ಇಚ್ಛಿಸುವವರಿಗೆ ಅದನ್ನು ದಯಪಾಲಿಸುತ್ತಾನೆ. ಅಲ್ಲಾಹು ಮಹಾ ಔದಾರ್ಯವಂತನಾಗಿದ್ದಾನೆ.

ತೌರಾತ್‌ನಲ್ಲಿರುವಂತೆ ನಡೆದುಕೊಳ್ಳಲು ಆದೇಶಿಸಲಾಗಿಯೂ ಸಹ ಅದರಂತೆ ನಡೆದುಕೊಳ್ಳದವರು ಯಾರೋ ಅವರ ಉದಾಹರಣೆಯು ಗ್ರಂಥಗಳನ್ನು ಹೊರುವ ಕತ್ತೆಯಂತೆ. ಅಲ್ಲಾಹನ ದೃಷ್ಟಾಂತಗಳನ್ನು ನಿಷೇಧಿಸುವ ಜನರ ಉದಾಹರಣೆಯು ಬಹಳ ನಿಕೃಷ್ಟವಾಗಿದೆ. ಅಕ್ರಮಿಗಳಾದ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.

ಹೇಳಿರಿ: “ಓ ಯಹೂದಿಗಳೇ! ಇತರ ಜನರ ಹೊರತಾಗಿ ನೀವು ಮಾತ್ರ ಅಲ್ಲಾಹನ ಮಿತ್ರರು ಎಂಬ ನಿಮ್ಮ ದಾವೆಯು ಸತ್ಯವಾಗಿದ್ದರೆ ನೀವು ಸಾವನ್ನು ಬಯಸಿರಿ. ನೀವು ಸತ್ಯವಂತರಾಗಿದ್ದರೆ.”

ಆದರೆ ಅವರ ಕೈಗಳು ಈಗಾಗಲೇ ಮಾಡಿಟ್ಟಿರುವ ದುಷ್ಕರ್ಮಗಳಿಂದಾಗಿ ಅವರೆಂದೂ ಸಾವನ್ನು ಬಯಸುವುದಿಲ್ಲ. ಅಲ್ಲಾಹು ಅಕ್ರಮಿಗಳ ಬಗ್ಗೆ ಬಹಳ ಚೆನ್ನಾಗಿ ತಿಳಿದಿದ್ದಾನೆ.

ಹೇಳಿರಿ: “ಯಾವ ಸಾವನ್ನು ಹೆದರಿ ನೀವು ಓಡಿ ಹೋಗುತ್ತಿದ್ದೀರೋ ಅದು ನಿಮ್ಮನ್ನು ಖಂಡಿತ ಭೇಟಿಯಾಗಲಿದೆ. ನಂತರ ನಿಮ್ಮನ್ನು ದೃಶ್ಯ-ಅದೃಶ್ಯಗಳನ್ನು ತಿಳಿದ ಅಲ್ಲಾಹನ ಬಳಿಗೆ ಮರಳಿಸಲಾಗುವುದು. ಆಗ ನೀವು ಮಾಡುತ್ತಿದ್ದ ಕರ್ಮಗಳ ಬಗ್ಗೆ ಅವನು ನಿಮಗೆ ತಿಳಿಸಿಕೊಡುವನು.”

ಓ ಸತ್ಯವಿಶ್ವಾಸಿಗಳೇ! ಶುಕ್ರವಾರ ನಮಾಝ್‍ಗಾಗಿ ಕರೆಯಲಾದರೆ (ಅಝಾನ್ ನೀಡಲಾದರೆ) ಅಲ್ಲಾಹನ ಸ್ಮರಣೆಯ ಕಡೆಗೆ ಧಾವಿಸಿರಿ ಮತ್ತು ವ್ಯಾಪಾರ-ವ್ಯವಹಾರಗಳನ್ನು ಬಿಟ್ಟುಬಿಡಿ. ಅದು ನಿಮಗೆ ಅತ್ಯುತ್ತಮವಾಗಿದೆ. ನೀವು ತಿಳಿದವರಾಗಿದ್ದರೆ.

ನಮಾಝ್ ಮುಗಿದ ನಂತರ ನೀವು ಭೂಮಿಯಲ್ಲಿ ಚದುರಿ ಹೋಗಿರಿ ಮತ್ತು ಅಲ್ಲಾಹನ ಔದಾರ್ಯವನ್ನು ಹುಡುಕಿರಿ. ಅಲ್ಲಾಹನನ್ನು ಅತ್ಯಧಿಕವಾಗಿ ಸ್ಮರಿಸಿರಿ. ನೀವು ಯಶಸ್ವಿಯಾಗುವುದಕ್ಕಾಗಿ.

ಅವರು ವ್ಯಾಪಾರದ ಸರಕು ಮಾರಾಟವಾಗುವುದನ್ನು ಕಂಡರೆ ಅಥವಾ ಮನೋರಂಜನೆಯನ್ನು ಕಂಡರೆ ಅದರ ಕಡೆಗೆ ಓಡುತ್ತಾರೆ ಮತ್ತು ನಿಮ್ಮನ್ನು ನಿಂತ ಸ್ಥಿತಿಯಲ್ಲೇ ಬಿಟ್ಟುಬಿಡುತ್ತಾರೆ.[1] ಹೇಳಿರಿ: “ಅಲ್ಲಾಹನ ಬಳಿ ಏನಿದೆಯೋ ಅದು ವ್ಯಾಪಾರ ಮತ್ತು ಮನೋರಂಜನೆಗಿಂತಲೂ ಶ್ರೇಷ್ಠವಾಗಿದೆ. ಅಲ್ಲಾಹು ಉಪಜೀವನ ನೀಡುವುದರಲ್ಲಿ ಅತ್ಯುತ್ತಮನಾಗಿದ್ದಾನೆ.”