The Noble Qur'an Encyclopedia
Towards providing reliable exegeses and translations of the meanings of the Noble Qur'an in the world languagesThe Sovereignty [Al-Mulk] - Kannada translation
Surah The Sovereignty [Al-Mulk] Ayah 30 Location Maccah Number 67
ಸಾರ್ವಭೌಮತ್ವವು ಯಾರ ಕೈಯ್ಯಲ್ಲಿದೆಯೋ ಅವನು ಸಮೃದ್ಧಪೂರ್ಣನಾಗಿದ್ದಾನೆ. ಅವನು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
ಅವನೇ ಮರಣ ಮತ್ತು ಜೀವನವನ್ನು ಸೃಷ್ಟಿಸಿದವನು. ನಿಮ್ಮಲ್ಲಿ ಅತ್ಯುತ್ತಮ ಕರ್ಮವೆಸಗುವವರು ಯಾರೆಂದು ನಿಮ್ಮನ್ನು ಪರೀಕ್ಷಿಸುವುದಕ್ಕಾಗಿ. ಅವನು ಪ್ರಬಲನು ಮತ್ತು ಕ್ಷಮಿಸುವವನಾಗಿದ್ದಾನೆ.
ಅವನೇ ಏಳು ಆಕಾಶಗಳನ್ನು ಅಂತಸ್ತುಗಳಾಗಿ ಸೃಷ್ಟಿಸಿದವನು. ನೀವು ಪರಮ ದಯಾಮಯನ ಸೃಷ್ಟಿಯಲ್ಲಿ ಯಾವುದೇ ಕುಂದು-ಕೊರತೆಯನ್ನು ಕಾಣಲಾರಿರಿ. ಎರಡನೇ ಬಾರಿ ದೃಷ್ಟಿಯನ್ನು ಮರಳಿಸಿ ನೋಡಿ. ನೀವು ಯಾವುದಾದರೂ ಬಿರುಕುಗಳನ್ನು ಕಾಣುತ್ತೀರಾ?
ನಂತರ ಪುನಃ ಎರಡೆರಡು ಬಾರಿ ದೃಷ್ಟಿ ಹಾಯಿಸಿ ನೋಡಿ. ನಿಮ್ಮ ದೃಷ್ಟಿಯು ನಿಮ್ಮ ಬಳಿಗೆ ದಯನೀಯ ಸ್ಥಿತಿಯಲ್ಲಿ ಸುಸ್ತಾಗಿ ಮರಳಿ ಬರುವುದು.
ನಾವು ಇಹಲೋಕದ ಆಕಾಶವನ್ನು ದೀಪಗಳಿಂದ (ನಕ್ಷತ್ರಗಳಿಂದ) ಅಲಂಕರಿಸಿದ್ದೇವೆ. ಅವುಗಳನ್ನು ಶೈತಾನರಿಗೆ ಹೊಡೆದೋಡಿಸುವ ಸಾಧನವಾಗಿ ಮಾಡಿದ್ದೇವೆ. ನಾವು ಅವರಿಗೆ ಧಗಧಗಿಸುವ ನರಕ ಶಿಕ್ಷೆಯನ್ನು ಸಿದ್ಧಗೊಳಿಸಿದ್ದೇವೆ.
ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ನಿಷೇಧಿಸಿದವರಿಗೆ ನರಕ ಶಿಕ್ಷೆಯಿದೆ. ಆ ಗಮ್ಯಸ್ಥಾನವು ಅತಿ ನಿಕೃಷ್ಟವಾಗಿದೆ.
ಅವರನ್ನು ಅದಕ್ಕೆ ಎಸೆಯಲಾದಾಗ ಅವರು ಅದರ ದೊಡ್ಡ ಗರ್ಜನೆಯನ್ನು ಕೇಳುವರು.
ಅದು (ಕ್ರೋಧದಿಂದ) ಇನ್ನೇನು ಸ್ಫೋಟಿಸುವಂತಿರುವುದು. ಅದಕ್ಕೆ ಒಂದೊಂದು ಗುಂಪನ್ನು ಎಸೆಯುವಾಗಲೆಲ್ಲಾ ಅದರ ಕಾವಲುಗಾರರು ಕೇಳುವರು: “ನಿಮ್ಮ ಬಳಿಗೆ ಒಬ್ಬ ಮುನ್ನೆಚ್ಚರಿಕೆಗಾರನು ಬರಲಿಲ್ಲವೇ?”
ಅವರು ಉತ್ತರಿಸುವರು: “ಹೌದು, ನಮ್ಮ ಬಳಿಗೆ ಒಬ್ಬ ಮುನ್ನೆಚ್ಚರಿಕೆಗಾರ ಬಂದಿದ್ದರು. ಆದರೆ ನಾವು ಅವರನ್ನು ನಿಷೇಧಿಸಿದೆವು. ನಾವು ಹೇಳಿದೆವು: ಅಲ್ಲಾಹು ಏನನ್ನೂ ಅವತೀರ್ಣಗೊಳಿಸಿಲ್ಲ; ನೀವು ಬಹುದೊಡ್ಡ ದುರ್ಮಾರ್ಗದಲ್ಲಿದ್ದೀರಿ.”
ಅವರು (ಸತ್ಯನಿಷೇಧಿಗಳು) ಹೇಳುವರು: “ನಾವು ಕಿವಿಗೊಡುತ್ತಿದ್ದರೆ ಅಥವಾ ಅರ್ಥಮಾಡಿಕೊಳ್ಳುತ್ತಿದ್ದರೆ ನಾವು ನರಕವಾಸಿಗಳಲ್ಲಿ ಸೇರುತ್ತಿರಲಿಲ್ಲ.”
ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳುವರು. ಆ ನರಕವಾಸಿಗಳು (ಅಲ್ಲಾಹನ ದಯೆಯಿಂದ) ದೂರವಾಗಲಿ.
ನಿಶ್ಚಯವಾಗಿಯೂ ಅದೃಶ್ಯ ಸ್ಥಿತಿಯಲ್ಲಿ ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭಯಪಡುವವರು ಯಾರೋ ಅವರಿಗೆ ಕ್ಷಮೆ ಮತ್ತು ಮಹಾ ಪ್ರತಿಫಲವಿದೆ.
ನೀವು ನಿಮ್ಮ ಮಾತನ್ನು ರಹಸ್ಯವಾಗಿರಿಸಿರಿ ಅಥವಾ ಬಹಿರಂಗಪಡಿಸಿರಿ. ನಿಶ್ಚಯವಾಗಿಯೂ ಅವನು ಹೃದಯಗಳೊಳಲ್ಲಿರುವುದನ್ನು ತಿಳಿಯುತ್ತಾನೆ.
ಸೃಷ್ಟಿಸಿದವನಿಗೆ ಅದು ತಿಳಿದಿಲ್ಲವೇ? ಅವನು ಅತ್ಯಂತ ನವಿರು ಮತ್ತು ಸೂಕ್ಷ್ಮಜ್ಞಾನಿಯಾಗಿದ್ದಾನೆ.
ಅವನೇ ನಿಮಗೆ ಭೂಮಿಯನ್ನು ವಿಧೇಯಗೊಳಿಸಿಕೊಟ್ಟವನು. ನೀವು ಅದರ ರಸ್ತೆಗಳಲ್ಲಿ ಚಲಿಸುವುದಕ್ಕಾಗಿ. ಅವನು ಒದಗಿಸಿದ ಉಪಜೀವನದಿಂದ ತಿನ್ನಿರಿ. ಪುನರುತ್ಥಾನವು ಅವನ ಬಳಿಗೇ ಆಗಿದೆ.
ಆಕಾಶದಲ್ಲಿರುವವನು (ಅಲ್ಲಾಹು) ನಿಮ್ಮನ್ನು ಭೂಮಿಯಲ್ಲಿ ಹುದುಗಿಸಲಾರನೆಂದು ನೀವು ನಿರ್ಭಯವಾಗಿದ್ದೀರಾ? ಆಗ ಅಗೋ ಭೂಮಿ ಓಲಾಡುತ್ತಿರುವುದು.
ಅಥವಾ ಆಕಾಶದಲ್ಲಿರುವವನು (ಅಲ್ಲಾಹು) ನಿಮ್ಮ ಮೇಲೆ ಕಲ್ಲಿನ ಮಳೆ ಸುರಿಸಲಾರನೆಂದು ನೀವು ನಿರ್ಭಯವಾಗಿದ್ದೀರಾ? ನಂತರ ನನ್ನ ಎಚ್ಚರಿಕೆ ಹೇಗಿತ್ತೆಂದು ನೀವು ಸದ್ಯವೇ ತಿಳಿದುಕೊಳ್ಳುವಿರಿ.
ಅವರಿಗಿಂತ ಮೊದಲಿನವರೂ ನಿಷೇಧಿಸಿದ್ದರು. ಆಗ ಅವರ ಮೇಲೆ ನನ್ನ ಶಿಕ್ಷೆ ಹೇಗಿತ್ತು?
ಅವರು ತಮ್ಮ ಮೇಲ್ಭಾಗದಲ್ಲಿ ರೆಕ್ಕೆಗಳನ್ನು ಚಾಚಿ ಹಾರಾಡುವ ಮತ್ತು ರೆಕ್ಕೆಗಳನ್ನು ಮಡಚುವ ಹಕ್ಕಿಗಳನ್ನು ನೋಡಿಲ್ಲವೇ? ಅವುಗಳನ್ನು ಪರಮ ದಯಾಳುವಾದ ಅಲ್ಲಾಹನಲ್ಲದೆ ಇನ್ನಾರೂ ಆಧರಿಸಿ ಹಿಡಿದಿಲ್ಲ. ನಿಶ್ಚಯವಾಗಿಯೂ ಅವನು ಎಲ್ಲವನ್ನೂ ನೋಡುತ್ತಿದ್ದಾನೆ.
ಪರಮ ದಯಾಳುವಾದ ಅಲ್ಲಾಹನ ಹೊರತು ನಿಮಗೆ ಸಹಾಯ ಮಾಡಬಹುದಾದ ಸೈನ್ಯವು ಯಾವುದು? ಸತ್ಯನಿಷೇಧಿಗಳು ಸಂಪೂರ್ಣ ವಂಚನೆಯಲ್ಲಿದ್ದಾರೆ.
ಅಲ್ಲಾಹು ನಿಮಗೆ ಉಪಜೀವನವನ್ನು ತಡೆಹಿಡಿದರೆ, ನಿಮಗೆ ಉಪಜೀವನ ನೀಡಲು ಯಾರಿಗೆ ಸಾಧ್ಯವಿದೆ? ಅಲ್ಲ, ವಾಸ್ತವವಾಗಿ (ಸತ್ಯನಿಷೇಧಿಗಳು) ಸೊಕ್ಕು ಮತ್ತು ವಿದ್ವೇಷದಲ್ಲೇ ನಿರತರಾಗಿದ್ದಾರೆ.
ಹಾಗಾದರೆ ಹೆಚ್ಚು ಸನ್ಮಾರ್ಗದಲ್ಲಿರುವವನು ತಲೆಕೆಳಗಾಗಿ ಮುಖದ ಮೇಲೆ ನಡೆಯುವವನೋ, ಅಥವಾ (ಕಾಲುಗಳ ಮೇಲೆ) ನೇರ ಮಾರ್ಗದಲ್ಲಿ ಸರಿಯಾಗಿ ನಡೆಯುವವನೋ?
ಹೇಳಿರಿ: “ಅವನೇ ನಿಮ್ಮನ್ನು ಸೃಷ್ಟಿಸಿದವನು ಮತ್ತು ನಿಮಗೆ ಶ್ರವಣ, ದೃಷ್ಟಿ ಹಾಗೂ ಹೃದಯವನ್ನು ನೀಡಿದವನು. ನೀವು ಸ್ವಲ್ಪ ಮಾತ್ರ ಕೃತಜ್ಞರಾಗುತ್ತೀರಿ.”
ಹೇಳಿರಿ: “ಅವನೇ ನಿಮ್ಮನ್ನು ಭೂಮಿಯಲ್ಲಿ ಸೃಷ್ಟಿಸಿದವನು. ನಿಮ್ಮನ್ನು ಅವನ ಬಳಿಯಲ್ಲೇ ಒಟ್ಟುಗೂಡಿಸಲಾಗುವುದು.”
ಅವರು ಕೇಳುತ್ತಾರೆ: “ಈ ವಾಗ್ದಾನವು ಸತ್ಯವಾಗುವುದು ಯಾವಾಗ? ನೀವು ಸತ್ಯವಂತರಾಗಿದ್ದರೆ (ಹೇಳಿರಿ).”
ಹೇಳಿರಿ: “ಆ ಜ್ಞಾನವಿರುವುದು ಅಲ್ಲಾಹನಿಗೆ ಮಾತ್ರ. ನಿಶ್ಚಯವಾಗಿಯೂ ನಾನೊಬ್ಬ ಸ್ಪಷ್ಟ ಮುನ್ನೆಚ್ಚರಿಕೆಗಾರ ಮಾತ್ರವಾಗಿದ್ದೇನೆ.”
ಅವರು ಆ ವಾಗ್ದಾನವು ಸಮೀಪದಲ್ಲಿರುವುದನ್ನು ಕಾಣುವಾಗ, ಸತ್ಯನಿಷೇಧಿಗಳ ಮುಖಗಳು ಬಿಳಿಚಿಕೊಳ್ಳುವುದು. (ಅವರೊಡನೆ ಹೇಳಲಾಗುವುದು): “ಇದೇ ನೀವು ಬೇಡುತ್ತಿದ್ದ ಆ ಶಿಕ್ಷೆ.”
ಹೇಳಿರಿ: “ನೀವು ಆಲೋಚಿಸಿ ನೋಡಿದ್ದೀರಾ! ಅಲ್ಲಾಹು ನನ್ನನ್ನು ಮತ್ತು ನನ್ನ ಅನುಯಾಯಿಗಳನ್ನು ನಾಶ ಮಾಡಿದರೆ, ಅಥವಾ ನಮಗೆ ದಯೆ ತೋರಿದರೆ, ಸತ್ಯನಿಷೇಧಿಗಳನ್ನು ಯಾತನಾಮಯ ಶಿಕ್ಷೆಯಿಂದ ಪಾರು ಮಾಡುವವರು ಯಾರು?”
ಹೇಳಿರಿ: “ಅವನು ಪರಮ ದಯಾಳು. ನಾವು ಅವನಲ್ಲಿ ವಿಶ್ವಾಸವಿಟ್ಟಿದ್ದೇವೆ ಮತ್ತು ಅವನಲ್ಲಿ ಭರವಸೆಯಿಟ್ಟಿದ್ದೇವೆ. ಸ್ಪಷ್ಟ ದುರ್ಮಾರ್ಗದಲ್ಲಿರುವುದು ಯಾರೆಂದು ನೀವು ಸದ್ಯವೇ ತಿಳಿಯುವಿರಿ.”
ಹೇಳಿರಿ: “ನೀವು ಆಲೋಚಿಸಿ ನೋಡಿದ್ದೀರಾ! ನಿಮ್ಮ ನೀರು ಭೂಮಿಯಲ್ಲಿ ಆಳಕ್ಕೆ ಇಂಗಿದರೆ, ನಿಮಗೆ ಹರಿಯುವ ನೀರನ್ನು ತಂದುಕೊಡುವವನು ಯಾರು?”