عربيEnglish

The Noble Qur'an Encyclopedia

Towards providing reliable exegeses and translations of the meanings of the Noble Qur'an in the world languages

Nooh [Nooh] - Kannada translation

Surah Nooh [Nooh] Ayah 28 Location Maccah Number 71

ನಿಶ್ಚಯವಾಗಿಯೂ ನಾವು ನೂಹರನ್ನು ಅವರ ಜನರ ಬಳಿಗೆ ಕಳುಹಿಸಿದೆವು. ಅವರಿಗೆ ಯಾತನಾಮಯ ಶಿಕ್ಷೆ ಎರಗುವುದಕ್ಕೆ ಮೊದಲೇ ಅವರಿಗೆ ಎಚ್ಚರಿಕೆ ನೀಡಿರಿ ಎಂಬ ಸಂದೇಶದೊಂದಿಗೆ.

ನೂಹ್ ಹೇಳಿದರು: “ಓ ನನ್ನ ಜನರೇ! ನಿಶ್ಚಯವಾಗಿಯೂ ನಾನು ನಿಮಗೆ ಸ್ಪಷ್ಟ ಮುನ್ನೆಚ್ಚರಿಕೆಗಾರನಾಗಿದ್ದೇನೆ.

ನೀವು ಅಲ್ಲಾಹನನ್ನು ಆರಾಧಿಸಿರಿ, ಅವನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

ಅವನು ನಿಮ್ಮ ಪಾಪಗಳನ್ನು ಕ್ಷಮಿಸುವನು ಮತ್ತು ಒಂದು ನಿಶ್ಚಿತ ಅವಧಿಯವರೆಗೆ ನಿಮ್ಮನ್ನು ಬಿಟ್ಟುಬಿಡುವನು. ನಿಶ್ಚಯವಾಗಿಯೂ ಅಲ್ಲಾಹನ ಅವಧಿಯು ಬಂದರೆ ಅದನ್ನು ಮುಂದೂಡಲಾಗುವುದಿಲ್ಲ. ನೀವು ತಿಳಿದವರಾಗಿದ್ದರೆ!

ನೂಹ್ ಹೇಳಿದರು: “ನನ್ನ ಪರಿಪಾಲಕನೇ! ನಿಶ್ಚಯವಾಗಿಯೂ ನಾನು ನನ್ನ ಜನರನ್ನು ಹಗಲು-ರಾತ್ರಿ ನಿನ್ನ ಕಡೆಗೆ ಕರೆದಿದ್ದೇನೆ.

ಆದರೆ ನನ್ನ ಕರೆಯು ಅವರಿಗೆ ಪಲಾಯನವನ್ನೇ ವಿನಾ ಇನ್ನೇನನ್ನೂ ಹೆಚ್ಚಿಸಲಿಲ್ಲ.

ನಿಶ್ಚಯವಾಗಿಯೂ ನೀನು ಅವರನ್ನು ಕ್ಷಮಿಸಬೇಕೆಂದು ನಾನು ಅವರನ್ನು ನಿನ್ನ ಕಡೆಗೆ ಕರೆದಾಗಲೆಲ್ಲಾ ಅವರು ತಮ್ಮ ಬೆರಳುಗಳನ್ನು ಕಿವಿಗಳಲ್ಲಿಟ್ಟರು, ಬಟ್ಟೆಗಳಿಂದ ತಮ್ಮನ್ನು ಮುಚ್ಚಿಕೊಂಡರು, (ಸತ್ಯನಿಷೇಧದಲ್ಲಿ) ದೃಢವಾಗಿ ನಿಂತರು ಮತ್ತು ಮಹಾ ಅಹಂಕಾರವನ್ನು ತೋರಿದರು.

ನಂತರ ನಿಶ್ಚಯವಾಗಿಯೂ ನಾನು ಅವರನ್ನು ಉಚ್ಛ ಧ್ವನಿಯಲ್ಲಿ ಕರೆದೆ.

ನಂತರ ನಾನು ಅವರಿಗೆ ಬಹಿರಂಗವಾಗಿ ತಿಳಿಸಿದೆ. ಅತ್ಯಂತ ರಹಸ್ಯವಾಗಿಯೂ ತಿಳಿಸಿದೆ.

ನಾನು ಹೇಳಿದೆ: “ನೀವು ನಿಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಕ್ಷಮೆಯಾಚಿಸಿರಿ. ನಿಶ್ಚಯವಾಗಿಯೂ ಅವನು ಅತ್ಯಧಿಕ ಕ್ಷಮಿಸುವವನು.

ಅವನು ಆಕಾಶದಿಂದ ನಿಮಗೆ ಧಾರಾಕಾರ ಮಳೆಯನ್ನು ಸುರಿಸುವನು.

ಅವನು ನಿಮಗೆ ಹೇರಳ ಆಸ್ತಿಪಾಸ್ತಿ ಮತ್ತು ಗಂಡುಮಕ್ಕಳನ್ನು ನೀಡಿ ನೆರವಾಗುವನು. ಅವನು ನಿಮಗೆ ತೋಟಗಳನ್ನು ಕೊಡುವನು ಮತ್ತು ಹೊಳೆಗಳನ್ನು ಹರಿಸುವನು.”

ಅಲ್ಲಾಹನ ಮಹಿಮೆಯಲ್ಲಿ ನಂಬಿಕೆಯಿಡದಿರಲು ನಿಮಗೇನಾಗಿದೆ?

ಅವನು ನಿಮ್ಮನ್ನು ಹಲವು ಘಟ್ಟಗಳ ಮೂಲಕ ಸೃಷ್ಟಿಸಿದ್ದಾನೆ.

ಅಲ್ಲಾಹು ಏಳು ಆಕಾಶಗಳನ್ನು ಹೇಗೆ ಅಂತಸ್ತುಗಳಾಗಿ ಸೃಷ್ಟಿಸಿದ್ದಾನೆಂದು ನೀವು ನೋಡಿಲ್ಲವೇ?

ಅವನು ಅವುಗಳಲ್ಲಿ ಚಂದ್ರನನ್ನು ಬೆಳಕಾಗಿ ಮತ್ತು ಸೂರ್ಯನನ್ನು (ಉರಿಯುವ) ದೀಪವಾಗಿ ಮಾಡಿದನು.

ಅಲ್ಲಾಹು ನಿಮ್ಮನ್ನು (ವಿಶೇಷ ಮುತುವರ್ಜಿ ನೀಡಿ) ಭೂಮಿಯಿಂದ ಬೆಳೆಸಿದನು.

ನಂತರ ಅವನು ನಿಮ್ಮನ್ನು ಅದಕ್ಕೆ ಮರಳಿಸುವನು ಮತ್ತು (ವಿಶೇಷ ರೀತಿಯಲ್ಲಿ) ನಿಮ್ಮನ್ನು ಹೊರತರುವನು.

ಅಲ್ಲಾಹು ನಿಮಗೆ ಭೂಮಿಯನ್ನು ಒಂದು ಹಾಸಿನಂತೆ ಮಾಡಿಕೊಟ್ಟನು.

ನೀವು ಅದರ ವಿಶಾಲವಾದ ದಾರಿಗಳಲ್ಲಿ ಸಾಗಲಿಕ್ಕಾಗಿ.

ನೂಹ್ ಹೇಳಿದರು: “ನನ್ನ ಪರಿಪಾಲಕನೇ! ನಿಶ್ಚಯವಾಗಿಯೂ ಅವರು ನನಗೆ ಅವಿಧೇಯತೆ ತೋರಿದ್ದಾರೆ. ಯಾರ ಆಸ್ತಿ ಹಾಗೂ ಮಕ್ಕಳು ಅವನಿಗೆ ನಷ್ಟವನ್ನಲ್ಲದೆ ಇನ್ನೇನನ್ನೂ ಹೆಚ್ಚಿಸುವುದಿಲ್ಲವೋ ಅಂತಹವನನ್ನು ಅವರು ಹಿಂಬಾಲಿಸಿದ್ದಾರೆ.

ಅವರು ಬಹುದೊಡ್ಡ ಸಂಚು ರೂಪಿಸಿದ್ದಾರೆ.

“(ಜನರೇ) ನೀವು ನಿಮ್ಮ ದೇವರುಗಳನ್ನು ಯಾವುದೇ ಕಾರಣಕ್ಕೂ ತೊರೆಯಬೇಡಿ. ವದ್ದ್, ಸುವಾಅ್, ಯಗೂಸ್, ಯಊಕ್ ಮತ್ತು ನಸ್ರ್‌ರನ್ನು ಯಾವುದೇ ಕಾರಣಕ್ಕೂ ತೊರೆಯಬೇಡಿ” ಎಂದು ಅವರು ಹೇಳುತ್ತಾರೆ.

ಅವರು ಈಗಾಗಲೇ ಬಹಳಷ್ಟು ಜನರನ್ನು ದಾರಿ ತಪ್ಪಿಸಿದ್ದಾರೆ. ನೀನು ಆ ಅಕ್ರಮಿಗಳಿಗೆ ಅವರ ದುರ್ಮಾರ್ಗವನ್ನು ಇನ್ನಷ್ಟು ಹೆಚ್ಚಿಸಿಕೊಡು.”

ಅವರ ಪಾಪಗಳ ಕಾರಣದಿಂದ ಅವರನ್ನು ಮುಳುಗಿಸಲಾಯಿತು. ನಂತರ ನರಕಾಗ್ನಿಗೆ ಪ್ರವೇಶ ಮಾಡಿಸಲಾಯಿತು. ಅವರು ಅಲ್ಲಾಹನ ಹೊರತು ಬೇರೆ ಯಾವುದೇ ಸಹಾಯಕರನ್ನು ಕಾಣಲಿಲ್ಲ.

ನೂಹ್ ಹೇಳಿದರು: “ನನ್ನ ಪರಿಪಾಲಕನೇ! ನೀನು ಭೂಮಿಯ ಮೇಲೆ ಸತ್ಯನಿಷೇಧಿಗಳಲ್ಲಿ ಯಾರನ್ನೂ ವಾಸಿಸಲು ಬಿಡಬೇಡ.

ನೀನೇನಾದರೂ ಅವರನ್ನು ಬಿಟ್ಟುಬಿಟ್ಟರೆ ಅವರು ನಿನ್ನ ದಾಸರನ್ನು ದಾರಿತಪ್ಪಿಸುವರು. ಅವರು ದುಷ್ಕರ್ಮಿಗಳು ಮತ್ತು ಸತ್ಯನಿಷೇಧಿಗಳಿಗೆ ಮಾತ್ರ ಜನ್ಮ ನೀಡುವರು.

ನನ್ನ ಪರಿಪಾಲಕನೇ! ನನಗೆ, ನನ್ನ ಮಾತಾಪಿತರಿಗೆ ಮತ್ತು ಸತ್ಯವಿಶ್ವಾಸಿಯಾಗಿ ನನ್ನ ಮನೆಯನ್ನು ಪ್ರವೇಶಿಸಿದವನಿಗೆ ಕ್ಷಮಿಸು. ಸತ್ಯವಿಶ್ವಾಸಿ ಪುರುಷರಿಗೆ ಮತ್ತು ಸ್ತ್ರೀಯರಿಗೆ ಕ್ಷಮಿಸು. ಅಕ್ರಮಿಗಳಿಗೆ ಸರ್ವನಾಶವಲ್ಲದೆ ಇನ್ನೇನೂ ಹೆಚ್ಚಿಸಬೇಡ.”