The Noble Qur'an Encyclopedia
Towards providing reliable exegeses and translations of the meanings of the Noble Qur'an in the world languagesThe Jinn [Al-Jinn] - Kannada translation
Surah The Jinn [Al-Jinn] Ayah 28 Location Maccah Number 72
(ಪ್ರವಾದಿಯವರೇ) ಹೇಳಿರಿ: ನಿಶ್ಚಯವಾಗಿಯೂ ಜಿನ್ನ್‌ಗಳಲ್ಲಿ ಸೇರಿದ ಒಂದು ಗುಂಪು (ಕುರ್‌ಆನನ್ನು) ಕಿವಿಗೊಟ್ಟು ಕೇಳಿದರೆಂದು ನನಗೆ ದಿವ್ಯವಾಣಿ ನೀಡಲಾಗಿದೆ. ನಂತರ ಅವರು ಹೇಳಿದರು: “ನಿಶ್ಚಯವಾಗಿಯೂ ನಾವು ಅದ್ಭುತವಾದ ಕುರ್‌ಆನನ್ನು ಕೇಳಿದೆವು.
ಅದು ಸನ್ಮಾರ್ಗಕ್ಕೆ ದಾರಿ ತೋರಿಸುತ್ತದೆ. ಆದ್ದರಿಂದ ನಾವು ಅದರಲ್ಲಿ ವಿಶ್ವಾಸವಿಟ್ಟೆವು. ನಾವು ನಮ್ಮ ಪರಿಪಾಲಕನೊಂದಿಗೆ (ಅಲ್ಲಾಹನೊಂದಿಗೆ) ಯಾರನ್ನೂ ಎಂದಿಗೂ ಸಹಭಾಗಿಯಾಗಿ ಮಾಡುವುದಿಲ್ಲ.
ನಿಶ್ಚಯವಾಗಿಯೂ ನಮ್ಮ ಪರಿಪಾಲಕನ (ಅಲ್ಲಾಹನ) ಮಹಿಮೆಯು ಸರ್ವೋನ್ನತವಾಗಿದೆ. ಅವನು ಯಾರನ್ನೂ ತನ್ನ ಮಡದಿ-ಮಕ್ಕಳಾಗಿ ಮಾಡಿಕೊಂಡಿಲ್ಲ.
ನಮ್ಮಲ್ಲಿನ ಒಬ್ಬ ಅವಿವೇಕಿಯು (ಇಬ್ಲೀಸ್) ಅಲ್ಲಾಹನ ಬಗ್ಗೆ ಸತ್ಯಕ್ಕೆ ವಿರುದ್ಧವಾದ ಮಾತನ್ನು ಹೇಳುತ್ತಿದ್ದನು.
ಮನುಷ್ಯರು ಮತ್ತು ಜಿನ್ನ್‌ಗಳು ಅಲ್ಲಾಹನ ಬಗ್ಗೆ ಎಂದೂ ಸುಳ್ಳು ಹೇಳುವುದು ಸಾಧ್ಯವಿಲ್ಲವೆಂದು ನಾವು ಭಾವಿಸಿದ್ದೆವು.
وَأَنَّهُۥ كَانَ رِجَالٞ مِّنَ ٱلۡإِنسِ يَعُوذُونَ بِرِجَالٖ مِّنَ ٱلۡجِنِّ فَزَادُوهُمۡ رَهَقٗا [٦]
ಮನುಷ್ಯರಲ್ಲಿ ಕೆಲವರು ಕೆಲವು ಜಿನ್ನ್‌ಗಳೊಡನೆ ಅಭಯ ಕೋರುತ್ತಿದ್ದರು. ಇದರಿಂದ ಅವರು (ಜಿನ್ನ್‌ಗಳು) ತಮ್ಮ ಅತಿರೇಕವನ್ನು ಹೆಚ್ಚಿಸಿಕೊಂಡರು.
ಅಲ್ಲಾಹು ಯಾರನ್ನೂ ಪುನಃ ಜೀವ ನೀಡಿ ಎಬ್ಬಿಸುವುದಿಲ್ಲವೆಂದು ನೀವು ಭಾವಿಸಿದಂತೆಯೇ ಮನುಷ್ಯರೂ ಭಾವಿಸಿದ್ದರು.
ನಾವು ಆಕಾಶವನ್ನು ಮುಟ್ಟಿದೆವು. ಆಗ ಅದು ಪ್ರಬಲ ಕಾವಲುಗಾರರು ಮತ್ತು ಅಗ್ನಿಜ್ವಾಲೆಗಳಿಂದ ತುಂಬಿದ್ದಾಗಿ ಕಂಡೆವು.
ನಾವು ಇದಕ್ಕಿಂತ ಮೊದಲು (ಆಕಾಶಲೋಕದ) ಮಾತುಗಳಿಗೆ ಕಿವಿಗೊಡಲು ಆಕಾಶದ ವಿವಿಧ ಸ್ಥಳಗಳಲ್ಲಿ ಕುಳಿತುಕೊಳ್ಳುತ್ತಿದ್ದೆವು. ಆದರೆ ಈಗ ಯಾರಾದರೂ ಕಿವಿಗೊಟ್ಟು ಕೇಳಿದರೆ, ಅವನಿಗೋಸ್ಕರ ಹೊಂಚು ಹಾಕುತ್ತಿರುವ ಒಂದು ಅಗ್ನಿಜ್ವಾಲೆಯನ್ನು ಕಾಣುವನು.
وَأَنَّا لَا نَدۡرِيٓ أَشَرٌّ أُرِيدَ بِمَن فِي ٱلۡأَرۡضِ أَمۡ أَرَادَ بِهِمۡ رَبُّهُمۡ رَشَدٗا [١٠]
ಭೂಮಿಯಲ್ಲಿರುವವರಿಗೆ ಕೆಡುಕನ್ನು ಉದ್ದೇಶಿಸಲಾಗಿದೆಯೋ, ಅಥವಾ ಅವರ ಪರಿಪಾಲಕನು (ಅಲ್ಲಾಹು) ಅವರಿಗೆ ಒಳಿತನ್ನು ಉದ್ದೇಶಿಸಿದ್ದಾನೋ ಎಂದು ನಮಗೆ ತಿಳಿದಿಲ್ಲ.
ನಮ್ಮಲ್ಲಿ ನೀತಿವಂತರಿದ್ದಾರೆ ಮತ್ತು ನಮ್ಮಲ್ಲಿ ಅದಕ್ಕೆ ಹೊರತಾದವರೂ ಇದ್ದಾರೆ. ನಾವು ಹಲವಾರು ಭಿನ್ನ ಮಾರ್ಗಗಳಲ್ಲಿ ಹಂಚಿ ಹೋಗಿದ್ದೇವೆ.
ಭೂಮಿಯಲ್ಲಿ ಎಂದಿಗೂ ಅಲ್ಲಾಹನನ್ನು ಅಸಮರ್ಥಗೊಳಿಸಲು ಸಾಧ್ಯವಿಲ್ಲ ಮತ್ತು ಪಲಾಯನ ಮಾಡುವ ಮೂಲಕವೂ ಅವನನ್ನು ಸೋಲಿಸಲು ಸಾಧ್ಯವಿಲ್ಲವೆಂದು ನಮಗೆ ಖಾತ್ರಿಯಾಗಿದೆ.
ನಾವು ಸನ್ಮಾರ್ಗವನ್ನು (ಕುರ್‌ಆನನ್ನು) ಆಲಿಸಿದಾಗ ಅದರಲ್ಲಿ ವಿಶ್ವಾಸವಿಟ್ಟೆವು. ಯಾರು ತನ್ನ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ವಿಶ್ವಾಸವಿಡುತ್ತಾನೋ ಅವನು ನಷ್ಟವನ್ನು ಅಥವಾ ಅನ್ಯಾಯವನ್ನು ಭಯಪಡಬೇಕಾಗಿಲ್ಲ.
ನಮ್ಮಲ್ಲಿ ಮುಸ್ಲಿಮರಿದ್ದಾರೆ ಮತ್ತು ನಮ್ಮಲ್ಲಿ ಅನ್ಯಾಯ ಮಾಡುವವರೂ ಇದ್ದಾರೆ. ಯಾರು ಮುಸ್ಲಿಮನಾದನೋ ಅವನು ಸನ್ಮಾರ್ಗವನ್ನು ಗುರಿಯಾಗಿಸಿಕೊಂಡನು.
ಆದರೆ ಅನ್ಯಾಯ ಮಾಡಿದವರು ಯಾರೋ ಅವರು ನರಕಕ್ಕೆ ಸೌದೆಯಾಗುವರು.
ಜನರು ನೇರಮಾರ್ಗದಲ್ಲಿ ದೃಢವಾಗಿ ನಿಂತರೆ, ನಾವು ಅವರಿಗೆ ಹೇರಳವಾಗಿ ನೀರನ್ನು ಕುಡಿಯಲು ಕೊಡುತ್ತಿದ್ದೆವು.
ಅದರ ಮೂಲಕ ಅವರನ್ನು ಪರೀಕ್ಷಿಸುವುದಕ್ಕಾಗಿ. ಯಾರು ತನ್ನ ಪರಿಪಾಲಕನ (ಅಲ್ಲಾಹನ) ಸ್ಮರಣೆಯಿಂದ ವಿಮುಖನಾಗುತ್ತಾನೋ ಅವನಿಗೆ ಅಲ್ಲಾಹು ಅತಿಕಠೋರ ಶಿಕ್ಷೆಯನ್ನು ನೀಡುವನು.
ಮಸೀದಿಗಳೆಲ್ಲವೂ ಅಲ್ಲಾಹನಿಗೆ ಸೇರಿದ್ದು. ಆದ್ದರಿಂದ ನೀವು ಅಲ್ಲಾಹನ ಜೊತೆಗೆ ಯಾರನ್ನೂ ಕರೆದು ಪ್ರಾರ್ಥಿಸಬೇಡಿ.
ಅಲ್ಲಾಹನ ದಾಸನು (ಪ್ರವಾದಿ) ಅಲ್ಲಾಹನೊಡನೆ ಪ್ರಾರ್ಥಿಸಲು ನಿಂತಾಗ ಅವರು (ಜಿನ್ನ್‌ಗಳು) ಇನ್ನೇನು ಗುಂಪು ಗುಂಪಾಗಿ ಅವರ ಮೇಲೆ ಮುಗಿಬೀಳುವಂತಿದ್ದರು.”
ಹೇಳಿರಿ: “ನಾನು ನನ್ನ ಪರಿಪಾಲಕನನ್ನು (ಅಲ್ಲಾಹನನ್ನು) ಮಾತ್ರ ಕರೆದು ಪ್ರಾರ್ಥಿಸುತ್ತೇನೆ. ನಾನು ಅವನೊಂದಿಗೆ ಯಾರನ್ನೂ ಸಹಭಾಗಿಯಾಗಿ ಮಾಡುವುದಿಲ್ಲ.”
ಹೇಳಿರಿ: “ನಿಮಗೆ ಯಾವುದೇ ತೊಂದರೆ ಅಥವಾ ಉಪಕಾರ ಮಾಡುವುದು ನನ್ನ ಅಧೀನದಲ್ಲಿಲ್ಲ.”
ಹೇಳಿರಿ: “ನಿಶ್ಚಯವಾಗಿಯೂ ನನ್ನನ್ನು ಯಾರೂ ಎಂದಿಗೂ ಅಲ್ಲಾಹನಿಂದ ರಕ್ಷಿಸಲಾರರು. ನಾನು ಅವನ ಹೊರತು ಎಲ್ಲಿಯೂ ಆಶ್ರಯವನ್ನು ಪಡೆಯಲಾರೆ.
ಅಲ್ಲಾಹನ ವಚನಗಳು ಮತ್ತು ಅವನ ಸಂದೇಶಗಳನ್ನು (ಜನರಿಗೆ) ತಲುಪಿಸುವುದು ಮಾತ್ರ ನನ್ನ ಕರ್ತವ್ಯವಾಗಿದೆ.” ಯಾರು ಅಲ್ಲಾಹು ಮತ್ತು ಅವನ ಸಂದೇಶವಾಹಕರಿಗೆ ಅವಿಧೇಯತೆ ತೋರುತ್ತಾನೋ ನಿಶ್ಚಯವಾಗಿಯೂ ಅವನಿಗೆ ನರಕಾಗ್ನಿಯಿದೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
حَتَّىٰٓ إِذَا رَأَوۡاْ مَا يُوعَدُونَ فَسَيَعۡلَمُونَ مَنۡ أَضۡعَفُ نَاصِرٗا وَأَقَلُّ عَدَدٗا [٢٤]
ಎಲ್ಲಿಯವರೆಗೆಂದರೆ, ಅವರಿಗೆ ವಾಗ್ದಾನ ಮಾಡಲಾಗುವುದನ್ನು ಅವರು ಕಣ್ಣಾರೆ ನೋಡುವ ತನಕ (ಅವರ ಸತ್ಯವನ್ನು ಅಂಗೀಕರಿಸುವುದಿಲ್ಲ). ಆಗ ಅವರು ತಿಳಿದುಕೊಳ್ಳುವರು—ಯಾರ ಸಹಾಯಕ ಅತ್ಯಂತ ದುರ್ಬಲ ಮತ್ತು ಯಾರು ಅತಿ ಕಡಿಮೆ ಸಂಖ್ಯೆಯವರು ಎಂದು.
ಹೇಳಿರಿ: “ನಿಮಗೆ ವಾಗ್ದಾನ ಮಾಡಲಾಗುತ್ತಿರುವುದು ಹತ್ತಿರದಲ್ಲಿದೆಯೋ ಅಥವಾ ನನ್ನ ಪರಿಪಾಲಕನು (ಅಲ್ಲಾಹು) ಅದಕ್ಕೆ ದೂರದ ಒಂದು ಅವಧಿಯನ್ನು ನಿಶ್ಚಯಿಸುವನೋ ಎಂದು ನನಗೆ ತಿಳಿದಿಲ್ಲ.”
ಅವನು ಅದೃಶ್ಯವನ್ನು ತಿಳಿದವನು. ಅವನು ತನ್ನ ಅದೃಶ್ಯವನ್ನು ಯಾರಿಗೂ ಪ್ರಕಟಗೊಳಿಸುವುದಿಲ್ಲ.
ಅವನು ಇಷ್ಟಪಡುವ ಸಂದೇಶವಾಹಕರಿಗೆ ಹೊರತು. ಆಗಲೂ ಅವನು ಆ ಸಂದೇಶವಾಹಕರ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಪಹರೆಗಾರರನ್ನು ನಿಶ್ಚಯಿಸುವನು.
ಅವರು (ಸಂದೇಶವಾಹಕರು) ಅವರ ಪರಿಪಾಲಕನ (ಅಲ್ಲಾಹನ) ಸಂದೇಶಗಳನ್ನು ತಲುಪಿಸಿದ್ದಾರೆಂದು ಪ್ರವಾದಿಯವರು ತಿಳಿಯುವುದಕ್ಕಾಗಿ. ಅವನು ಅವರ ಬಳಿಯಿರುವುದನ್ನು ಆವರಿಸಿಕೊಂಡಿದ್ದಾನೆ ಮತ್ತು ಎಲ್ಲಾ ವಸ್ತುಗಳನ್ನು ಸರಿಯಾಗಿ ಎಣಿಸಿಟ್ಟಿದ್ದಾನೆ.