The Noble Qur'an Encyclopedia
Towards providing reliable exegeses and translations of the meanings of the Noble Qur'an in the world languagesThe enshrouded one [Al-Muzzammil] - Kannada translation
Surah The enshrouded one [Al-Muzzammil] Ayah 20 Location Maccah Number 73
ಓ ಬಟ್ಟೆಯನ್ನು ಹೊದ್ದುಕೊಂಡವರೇ![1]
ರಾತ್ರಿಯಲ್ಲಿ ನಮಾಝ್ ನಿರ್ವಹಿಸಿರಿ. ಆದರೆ ಸ್ವಲ್ಪ ಭಾಗದ ಹೊರತು.
ರಾತ್ರಿಯ ಅರ್ಧ ಭಾಗ. ಅಥವಾ ಅದಕ್ಕಿಂತ ಸ್ವಲ್ಪ ಕಡಿಮೆ.
ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು.[1] ಕುರ್‌ಆನನ್ನು ನಿಧಾನವಾಗಿ ನಿಲ್ಲಿಸಿ ನಿಲ್ಲಿಸಿ ಪಠಿಸಿರಿ.
ನಿಶ್ಚಯವಾಗಿಯೂ ನಾವು ಸದ್ಯವೇ ನಿಮ್ಮ ಮೇಲೆ ಭಾರವಾದ ವಚನವನ್ನು ಅವತೀರ್ಣಗೊಳಿಸುವೆವು.
ನಿಶ್ಚಯವಾಗಿಯೂ ರಾತ್ರಿಯಲ್ಲಿ ಎದ್ದೇಳುವುದು ಮನೋದಾರ್ಢ್ಯಕ್ಕೆ ಹೆಚ್ಚು ಸೂಕ್ತವಾಗಿದೆ ಮತ್ತು ಮಾತನ್ನು ಅತ್ಯಂತ ಸರಿಯಾಗಿಸುತ್ತದೆ.
ನಿಶ್ಚಯವಾಗಿಯೂ ನಿಮಗೆ ಹಗಲಿನಲ್ಲಿ ದೀರ್ಘ ಕೆಲಸವಿದೆ.
ನೀವು ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರನ್ನು ಸ್ಮರಿಸಿರಿ. (ಇತರ ಎಲ್ಲಾ ವಿಷಯಗಳಿಂದ ದೂರವಾಗಿ) ನಿಮ್ಮನ್ನು ಸಂಪೂರ್ಣವಾಗಿ ಅವನಿಗೆ ಅರ್ಪಿಸಿಕೊಳ್ಳಿರಿ.
ಅವನು ಪೂರ್ವ ಮತ್ತು ಪಶ್ಚಿಮದ ಪರಿಪಾಲಕನು. ಅವನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ಅವನನ್ನು ನಿಮ್ಮ ಕಾರ್ಯನಿರ್ವಾಹಕನಾಗಿ ಮಾಡಿಕೊಳ್ಳಿ.
ಅವರು ಹೇಳುತ್ತಿರುವುದನ್ನು ತಾಳ್ಮೆಯಿಂದ ಸಹಿಸಿರಿ ಮತ್ತು ಅತ್ಯಂತ ಮನೋಹರವಾಗಿ ಅವರಿಂದ ದೂರವಾಗಿರಿ.
ನನ್ನನ್ನು ಮತ್ತು ಸುಖಾಡಂಬರಗಳ ಜನರಾದ ಆ ನಿಷೇಧಿಗಳನ್ನು ಬಿಟ್ಟು ಬಿಡಿ.[1] ಅವರಿಗೆ ಸ್ವಲ್ಪ ಕಾಲಾವಕಾಶ ನೀಡಿರಿ.
ನಿಶ್ಚಯವಾಗಿಯೂ ನಮ್ಮ ಬಳಿ ಬಲಿಷ್ಠ ಬೇಡಿಗಳು ಮತ್ತು ಜ್ವಲಿಸುವ ಅಗ್ನಿಯಿದೆ.
ಉಸಿರುಗಟ್ಟಿಸುವ ಆಹಾರ ಮತ್ತು ಯಾತನಾಮಯ ಶಿಕ್ಷೆಯಿದೆ.
ಭೂಮಿ ಮತ್ತು ಪರ್ವತಗಳು ರಭಸದಿಂದ ಅಲುಗಾಡುವ ದಿನ. ಪರ್ವತಗಳು ಹರಿಯುವ ಮರಳ ರಾಶಿಯಂತಾಗುವ ದಿನ.
ನಿಶ್ಚಯವಾಗಿಯೂ ನಾವು ನಿಮ್ಮ ಮೇಲೆ ಸಾಕ್ಷಿಯಾಗಿ ಒಬ್ಬ ಸಂದೇಶವಾಹಕರನ್ನು ಕಳುಹಿಸಿದ್ದೇವೆ. ಫರೋಹನ ಬಳಿಗೆ ಒಬ್ಬ ಸಂದೇಶವಾಹಕರನ್ನು ಕಳುಹಿಸಿದಂತೆ.
ಆದರೆ ಫರೋಹನು ಆ ಸಂದೇಶವಾಹಕರನ್ನು ಅನುಸರಿಸಲಿಲ್ಲ. ಆದ್ದರಿಂದ ನಾವು ಅವನನ್ನು ಬಲಿಷ್ಠ ಹಿಡಿತದೊಂದಿಗೆ ಹಿಡಿದೆವು.
ನೀವು ನಿಷೇಧಿಸುವುದಾದರೆ ಮಕ್ಕಳನ್ನು ನೆರೆತ ಕೂದಲಿನವರಾಗಿ ಮಾಡುವ[1] ಆ ದಿನ ನೀವು ಹೇಗೆ ತಾನೇ ರಕ್ಷಣೆ ಪಡೆಯುವಿರಿ?
ಆ ದಿನ ಆಕಾಶವು ಒಡೆಯುವುದು. ಅಲ್ಲಾಹನ ವಾಗ್ದಾನವು ನೆರವೇರಿಯೇ ತೀರುತ್ತದೆ.
ನಿಶ್ಚಯವಾಗಿಯೂ ಇದೊಂದು ಉಪದೇಶವಾಗಿದೆ. ಆದ್ದರಿಂದ ಇಷ್ಟವಿರುವವರು ತಮ್ಮ ಪರಿಪಾಲಕನ (ಅಲ್ಲಾಹನ) ಕಡೆಗೆ ಮಾರ್ಗವನ್ನು ಸ್ವೀಕರಿಸಿಕೊಳ್ಳಲಿ.
ನಿಶ್ತಯವಾಗಿಯೂ ನೀವು ಮತ್ತು ನಿಮ್ಮ ಜೊತೆಯಲ್ಲಿರುವ ಒಂದು ಗುಂಪು ಜನರು ಕೆಲವೊಮ್ಮೆ ರಾತ್ರಿಯ ಮೂರನೇ ಎರಡು ಭಾಗ, ಕೆಲವೊಮ್ಮೆ ರಾತ್ರಿಯ ಅರ್ಧ ಭಾಗ ಮತ್ತು ಕೆಲವೊಮ್ಮೆ ರಾತ್ರಿಯ ಮೂರನೇ ಒಂದು ಭಾಗದವರೆಗೆ ನಿಂತು ನಮಾಝ್ ಮಾಡುತ್ತೀರಿ ಎಂದು ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಬಹಳ ಚೆನ್ನಾಗಿ ತಿಳಿದಿದೆ. ಅಲ್ಲಾಹನೇ ರಾತ್ರಿ-ಹಗಲುಗಳ (ದೀರ್ಘವನ್ನು) ನಿರ್ಣಯಿಸುವವನು. ಅದನ್ನು ಪೂರ್ಣವಾಗಿ ನೆರವೇರಿಸಲು ನಿಮಗೆ ಸಾಧ್ಯವಿಲ್ಲವೆಂದು ಅವನಿಗೆ ತಿಳಿದಿದೆ. ಆದ್ದರಿಂದ ಅವನು ನಿಮ್ಮ ಮೇಲೆ ಅನುಕಂಪ ತೋರಿದ್ದಾನೆ. ಆದ್ದರಿಂದ ನಿಮಗೆ ಎಷ್ಟು ಕುರ್‌ಆನ್ ಪಠಿಸಲು ಸಾಧ್ಯವೋ ಅಷ್ಟು ಪಠಿಸಿರಿ. ನಿಮ್ಮಲ್ಲಿ ರೋಗಿಗಳಿದ್ದಾರೆ, ಅಲ್ಲಾಹನ ಔದಾರ್ಯವನ್ನು ಹುಡುಕುತ್ತಾ (ಉಪಜೀವನಕ್ಕಾಗಿ) ಭೂಮಿಯಲ್ಲಿ ಸಂಚರಿಸುವವರಿದ್ದಾರೆ ಮತ್ತು ಅಲ್ಲಾಹನ ಮಾರ್ಗದಲ್ಲಿ ಹೋರಾಡುವವರಿದ್ದಾರೆ ಎಂದು ಅವನಿಗೆ ಚೆನ್ನಾಗಿ ತಿಳಿದಿದೆ. ಆದ್ದರಿಂದ ನಿಮಗೆ ಎಷ್ಟು ಕುರ್‌ಆನ್ ಪಠಿಸಲು ಸಾಧ್ಯವೋ ಅಷ್ಟು ಪಠಿಸಿರಿ. ನಮಾಝ್ ಸಂಸ್ಥಾಪಿಸಿರಿ ಹಾಗೂ ಝಕಾತ್ ನೀಡಿರಿ. ಅಲ್ಲಾಹನಿಗೆ ಅತ್ಯುತ್ತಮವಾದ ಸಾಲವನ್ನು ನೀಡಿರಿ. ನೀವು ನಿಮಗಾಗಿ ಏನೆಲ್ಲಾ ಒಳಿತುಗಳನ್ನು ಮುಂದಕ್ಕೆ ಕಳುಹಿಸುತ್ತೀರೋ ಅದನ್ನು ನೀವು ಅಲ್ಲಾಹನ ಬಳಿ ಅತ್ಯುತ್ತಮವಾಗಿ ಮತ್ತು ಅತಿದೊಡ್ಡ ಪ್ರತಿಫಲವಿರುವುದಾಗಿ ಕಾಣುವಿರಿ. ಅಲ್ಲಾಹನಲ್ಲಿ ಕ್ಷಮೆಯಾಚಿಸಿರಿ. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.