The Noble Qur'an Encyclopedia
Towards providing reliable exegeses and translations of the meanings of the Noble Qur'an in the world languagesThe cloaked one [Al-Muddathir] - Kannada translation
Surah The cloaked one [Al-Muddathir] Ayah 56 Location Maccah Number 74
ಓ ಹೊದಿಕೆಯನ್ನು ಹೊದ್ದುಕೊಂಡವರೇ![1]
ಎದ್ದೇಳಿರಿ ಮತ್ತು ಎಚ್ಚರಿಕೆ ನೀಡಿರಿ.
ನಿಮ್ಮ ಪರಿಪಾಲಕನ (ಅಲ್ಲಾಹನ) ಮಹಾತ್ಮೆಯನ್ನು ಕೊಂಡಾಡಿರಿ.
ನಿಮ್ಮ ಬಟ್ಟೆಗಳನ್ನು ಶುದ್ಧವಾಗಿಡಿರಿ.
ಅಶುದ್ಧವನ್ನು ವರ್ಜಿಸಿರಿ.
ಉಪಕಾರ ಮಾಡಿ ಹೆಚ್ಚು ಗಳಿಸುವ ವ್ಯಾಮೋಹ ಬಿಟ್ಟುಬಿಡಿ.
ನಿಮ್ಮ ಪರಿಪಾಲಕನ (ಅಲ್ಲಾಹನ) ಮಾರ್ಗದಲ್ಲಿ ತಾಳ್ಮೆಯಿಂದಿರಿ.
ಕಹಳೆಯಲ್ಲಿ ಊದಲಾಗುವಾಗ.
ಆ ದಿನವು ಅತ್ಯಂತ ಕಠಿಣ ದಿನವಾಗಿರುವುದು.
ಅದು ಸತ್ಯನಿಷೇಧಿಗಳಿಗೆ ಸುಗಮವಾಗಿರುವುದಿಲ್ಲ.
ನನ್ನನ್ನು ಹಾಗೂ ನಾನು ಏಕಾಂಗಿಯಾಗಿ ಸೃಷ್ಟಿದವನನ್ನು ಬಿಟ್ಟುಬಿಡಿ.[1]
ನಾನು ಅವನಿಗೆ ಹೇರಳ ಐಶ್ವರ್ಯವನ್ನು ನೀಡಿದೆನು.
ಸನ್ನದ್ಧರಾಗಿರುವ ಗಂಡು ಮಕ್ಕಳನ್ನು ನೀಡಿದೆನು.
ನಾನು ಅವನಿಗೆ ಅನೇಕ ಅನುಕೂಲತೆಗಳನ್ನು ಮಾಡಿಕೊಟ್ಟೆನು.
ಆದರೂ ನಾನು ಅವನಿಗೆ ಇನ್ನೂ ಹೆಚ್ಚು ನೀಡಬೇಕೆಂದು ಅವನು ಹಾತೊರೆಯುತ್ತಾನೆ.
ಖಂಡಿತ ಇಲ್ಲ. ಅವನು ನಮ್ಮ ವಚನಗಳ ವಿರೋಧಿಯಾಗಿದ್ದಾನೆ.
ಸದ್ಯವೇ ನಾನು ಅವನನ್ನು ಒಂದು ಪ್ರಯಾಸಕರ ಏರುವಿಕೆಯನ್ನು ಏರುವಂತೆ ಮಾಡುವೆನು.[1]
ಅವನು ಯೋಚಿಸಿದನು ಮತ್ತು ನಿರ್ಣಯಿಸಿದನು.
ಅವನು ನಾಶವಾಗಲಿ! ಅವನು ಹೇಗೆ ನಿರ್ಣಯಿಸಿದನು?
ಪುನಃ ಅವನು ನಾಶವಾಗಲಿ! ಅವನು ಹೇಗೆ ನಿರ್ಣಯಿಸಿದನು?
ನಂತರ ಅವನು ನೋಡಿದನು.
ನಂತರ ಅವನು ಹುಬ್ಬುಗಂಟಿಕ್ಕಿದನು ಮತ್ತು ಮುಖವನ್ನು ಸಿಂಡರಿಸಿದನು.
ನಂತರ ಅವನು ಹಿಂದಡಿಯಿಟ್ಟನು ಮತ್ತು ಅಹಂಕಾರ ತೋರಿದನು.
ನಂತರ ಅವನು ಹೇಳಿದನು: “ಇದು (ಕುರ್‌ಆನ್) ನಕಲು ಮಾಡಲಾದ ಮಾಟಗಾರಿಕೆಯಲ್ಲದೆ ಇನ್ನೇನೂ ಅಲ್ಲ.
ಇದು ಕೇವಲ ಒಬ್ಬ ಮನುಷ್ಯನ ಮಾತಾಗಿದೆ.”
ನಾನು ಸದ್ಯವೇ ಅವನನ್ನು ಸಖರ್‌ಗೆ (ನರಕಕ್ಕೆ) ಹಾಕುವೆನು.
ಸಖರ್ ಏನೆಂದು ನಿಮಗೇನು ಗೊತ್ತು?
ಅದು ಏನನ್ನೂ ಉಳಿಸುವುದಿಲ್ಲ ಮತ್ತು ಬಿಟ್ಟುಬಿಡುವುದಿಲ್ಲ.
ಅದು ಚರ್ಮವನ್ನು ಸುಟ್ಟು ಕರಕಲಾಗಿಸುತ್ತದೆ.
ಅದರ ಮೇಲೆ ಹತ್ತೊಂಬತ್ತು (ದೇವದೂತರುಗಳು) ಇದ್ದಾರೆ.
ನಾವು ನರಕದ ಕಾವಲುಗಾರರಾಗಿ ಕೇವಲ ದೇವದೂತರುಗಳನ್ನು ಮಾತ್ರ ನಿಶ್ಚಯಿಸಿದ್ದೇವೆ. ನಾವು ಅವರ ಸಂಖ್ಯೆಯನ್ನು ಸತ್ಯನಿಷೇಧಿಗಳಿಗೆ ಒಂದು ಪರೀಕ್ಷೆಯಾಗಿ ಮಾಡಿದ್ದೇವೆ.[1] ಇದೇಕೆಂದರೆ, ಗ್ರಂಥ ನೀಡಲಾದವರಿಗೆ ದೃಢವಿಶ್ವಾಸ ಉಂಟಾಗಲೆಂದು[2] ಮತ್ತು ಸತ್ಯವಿಶ್ವಾಸಿಗಳ ವಿಶ್ವಾಸವು ಇನ್ನಷ್ಟು ಹೆಚ್ಚಾಗಲೆಂದು. ಅದೇ ರೀತಿ ಗ್ರಂಥ ನೀಡಲಾದವರು ಹಾಗೂ ಸತ್ಯವಿಶ್ವಾಸಿಗಳು ಸಂಶಯ ಪಡದಿರಲೆಂದು ಮತ್ತು ಹೃದಯದಲ್ಲಿ ರೋಗವಿರುವವರು ಹಾಗೂ ಸತ್ಯನಿಷೇಧಿಗಳು, “ಈ ವಿವರಣೆಯಿಂದ ಅಲ್ಲಾಹು ಉದ್ದೇಶಿಸುವುದೇನು?” ಎಂದು ಕೇಳಲೆಂದು. ಈ ರೀತಿ ಅಲ್ಲಾಹು ಅವನು ಇಚ್ಛಿಸಿದವರನ್ನು ದಾರಿತಪ್ಪಿಸುತ್ತಾನೆ ಮತ್ತು ಅವನು ಇಚ್ಛಿಸಿದವರಿಗೆ ಸನ್ಮಾರ್ಗ ತೋರಿಸುತ್ತಾನೆ. ನಿಮ್ಮ ಪರಿಪಾಲಕನ (ಅಲ್ಲಾಹನ) ಸೈನ್ಯವನ್ನು ಅವನ ಹೊರತು ಯಾರೂ ತಿಳಿದಿಲ್ಲ. ಅದು (ನರಕ) ಮನುಷ್ಯರಿಗೆ ಒಂದು ಉಪದೇಶವಲ್ಲದೆ ಇನ್ನೇನೂ ಅಲ್ಲ.
ಇಲ್ಲ; ಚಂದ್ರನ ಮೇಲಾಣೆ!
ರಾತ್ರಿಯ ಮೇಲಾಣೆ! ಅದು ಹಿಂದಕ್ಕೆ ಸರಿಯುವಾಗ.
ಬೆಳಗ್ಗಿನ ಮೇಲಾಣೆ! ಅದು ಬೆಳಗುವಾಗ.
ನಿಶ್ಚಯವಾಗಿಯೂ ಅದು (ನರಕ) ಮಹಾ ವಿಷಯಗಳಲ್ಲಿ ಒಂದಾಗಿದೆ.
ಮನುಷ್ಯರಿಗೆ ಒಂದು ಮುನ್ನೆಚ್ಚರಿಕೆಯಾಗಿದೆ.
ಅಂದರೆ ನಿಮ್ಮಲ್ಲಿ ಮುಂದಕ್ಕೆ ಬರಲು ಅಥವಾ ಹಿಂದೆಯೇ ಉಳಿಯಲು ಇಚ್ಛಿಸುವವರಿಗೆ.
ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಕರ್ಮಗಳಿಗೆ ಅಡಮಾನವಾಗಿದ್ದಾನೆ.[1]
ಬಲಭಾಗದ ಜನರ ಹೊರತು.
ಅವರು ಸ್ವರ್ಗೋದ್ಯಾನಗಳಲ್ಲಿ (ಕುಳಿತು) ಪರಸ್ಪರ ವಿಚಾರಿಸುವರು.
ಅಪರಾಧಿಗಳ ಕುರಿತು.
ನಿಮ್ಮನ್ನು ನರಕದಲ್ಲಿ ಬೀಳಿಸಿದ್ದೇನು?
ಅವರು ಹೇಳುವರು: “ನಾವು ನಮಾಝ್ ಮಾಡುವವರಾಗಿರಲಿಲ್ಲ.
ನಾವು ಬಡವರಿಗೆ ಆಹಾರ ನೀಡುತ್ತಿರಲಿಲ್ಲ.
ನಾವು ಅನಗತ್ಯ ಮಾತುಕತೆ ನಡೆಸುವವರ (ಸತ್ಯನಿಷೇಧಿಗಳ) ಜೊತೆಗೆ ಅನಗತ್ಯ ಮಾತುಗಳಲ್ಲಿ ತಲ್ಲೀನರಾಗಿದ್ದೆವು.
ನಾವು ಪ್ರತಿಫಲದ ದಿನವನ್ನು ನಿಷೇಧಿಸುತ್ತಿದ್ದೆವು.
ಎಲ್ಲಿಯವರೆಗೆಂದರೆ ನಮಗೆ ಸಾವು ಬರುವ ತನಕ.”
ಅವರಿಗೆ ಶಿಫಾರಸುಗಾರರ ಶಿಫಾರಸು ಪ್ರಯೋಜನಪಡುವುದಿಲ್ಲ.
ಅವರಿಗೇನಾಗಿದೆ? ಅವರೇಕೆ ಉಪದೇಶದಿಂದ ವಿಮುಖರಾಗುತ್ತಿದ್ದಾರೆ?
ಅವರು ಗಾಬರಿಗೊಂಡ ಕತ್ತೆಗಳೋ ಎಂಬಂತೆ.
ಸಿಂಹವನ್ನು ಕಂಡು ಪಲಾಯನ ಮಾಡಿದ.
ಅಲ್ಲ, ವಾಸ್ತವವಾಗಿ ಅವರಲ್ಲಿ ಪ್ರತಿಯೊಬ್ಬನೂ ತನಗೆ ತೆರೆದಿಟ್ಟ ಧರ್ಮಗ್ರಂಥಗಳು ಸಿಗಬೇಕೆಂದು ಬಯಸುತ್ತಾನೆ.
ಇಲ್ಲ; ವಾಸ್ತವವಾಗಿ ಅವರು ಪರಲೋಕವನ್ನು ಭಯಪಡುವುದಿಲ್ಲ.
ಖಂಡಿತ ಇಲ್ಲ. ನಿಶ್ಚಯವಾಗಿಯೂ ಇದು (ಕುರ್‌ಆನ್) ಉಪದೇಶವಾಗಿದೆ.
ಇಷ್ಟವಿರುವವರು ಅದರಿಂದ ಉಪದೇಶವನ್ನು ಪಡೆದುಕೊಳ್ಳಲಿ.
ಆದರೆ ಅಲ್ಲಾಹು ಇಚ್ಛಿಸಿದ ಹೊರತು ಅವರು ಅದರಿಂದ ಉಪದೇಶ ಪಡೆಯುವುದಿಲ್ಲ. ಅವನು ಭಯಪಡಲು ಅರ್ಹನಾಗಿದ್ದಾನೆ ಮತ್ತು ಕ್ಷಮಿಸಲು ಅರ್ಹನಾಗಿದ್ದಾನೆ.