The Noble Qur'an Encyclopedia
Towards providing reliable exegeses and translations of the meanings of the Noble Qur'an in the world languagesThe rising of the dead [Al-Qiyama] - Kannada translation
Surah The rising of the dead [Al-Qiyama] Ayah 40 Location Maccah Number 75
ನಾನು ಪುನರುತ್ಥಾನದ ದಿನದ ಮೇಲೆ ಆಣೆ ಮಾಡುತ್ತೇನೆ.
ನಾನು ಆಕ್ಷೇಪಿಸುವ ಮನಸ್ಸಿನ ಮೇಲೆ ಆಣೆ ಮಾಡುತ್ತೇನೆ.
ಮನುಷ್ಯನು ಭಾವಿಸುತ್ತಿದ್ದಾನೆಯೇ ನಾವು ಅವನ ಮೂಳೆಗಳನ್ನು ಜೋಡಿಸಲಾರೆವು ಎಂದು?
ಹೌದು! ನಮಗೆ ಅವನ ಬೆರಳ ತುದಿಗಳನ್ನು ಕೂಡ ಸರಿಪಡಿಸುವ ಸಾಮರ್ಥ್ಯವಿದೆ.
ಆದರೆ ಮನುಷ್ಯನು ಮುಂದೆಯೂ ಕೂಡ ಅವಿಧೇಯನಾಗಿಯೇ ಇರಲು ಬಯಸುತ್ತಾನೆ.
ಅವನು ಕೇಳುತ್ತಾನೆ: “ಪುನರುತ್ಥಾನ ದಿನ ಯಾವಾಗ ಸಂಭವಿಸುತ್ತದೆ?”
ದೃಷ್ಟಿಯು ಕೋರೈಸುವಾಗ.
ಚಂದ್ರ ಪ್ರಕಾಶ ರಹಿತವಾಗುವಾಗ.
ಸೂರ್ಯ-ಚಂದ್ರರನ್ನು ಜೋಡಿಸಲಾಗುವಾಗ.[1]
ಅಂದು ಮನುಷ್ಯನು ಕೇಳುವನು: “ಪಲಾಯನ ಮಾಡಲು ಸ್ಥಳವೆಲ್ಲಿದೆ?”
ಇಲ್ಲ, ಯಾವುದೇ ರಕ್ಷಣೆಯೂ ಇಲ್ಲ.
ಅಂದು ನಿನ್ನ ವಾಸ್ತವ್ಯವು ನಿನ್ನ ಪರಿಪಾಲಕನ (ಅಲ್ಲಾಹನ) ಕಡೆಗೇ ಆಗಿದೆ.
ಅಂದು ಮನುಷ್ಯನಿಗೆ ಅವನು ಮುಂದಕ್ಕೆ ಕಳುಹಿಸಿರುವ ಮತ್ತು ಹಿಂದೆ ಬಿಟ್ಟಿರುವ ಕರ್ಮಗಳ ಬಗ್ಗೆ ತಿಳಿಸಲಾಗುವುದು.
ಅಲ್ಲ, ವಾಸ್ತವವಾಗಿ ಮನುಷ್ಯನು ಅವನ ವಿರುದ್ಧವೇ ಸಾಕ್ಷಿಯಾಗಿದ್ದಾನೆ.
ಅವನು ಎಷ್ಟೇ ನೆಪಗಳನ್ನು ಒಡ್ಡಿದರೂ ಸಹ.
(ಪ್ರವಾದಿಯವರೇ) ನೀವು ಕುರ್‌ಆನನ್ನು ಆತುರದಿಂದ ಕಂಠಪಾಠ ಮಾಡಲು ನಿಮ್ಮ ನಾಲಗೆಯನ್ನು ಅಲುಗಾಡಿಸಬೇಡಿ.
ನಿಶ್ಚಯವಾಗಿಯೂ ಅದನ್ನು ಕ್ರೋಢೀಕರಿಸುವುದು ಮತ್ತು ನೀವು ಅದನ್ನು ಪಠಿಸುವಂತೆ ಮಾಡುವುದು ನಮ್ಮ ಹೊಣೆಯಾಗಿದೆ.[1]
ನಾವು ಅದನ್ನು ಪಠಿಸಿದರೆ ನೀವು ಆ ಪಠಣವನ್ನು ಹಿಂಬಾಲಿಸಿರಿ.
ನಂತರ ಅದನ್ನು ವಿವರಿಸಿಕೊಡುವುದು ನಮ್ಮ ಹೊಣೆಯಾಗಿದೆ.
ಇಲ್ಲ, ನೀವು ಇಹಲೋಕವನ್ನು ಪ್ರೀತಿಸುತ್ತೀರಿ.
ಪರಲೋಕವನ್ನು ತೊರೆಯುತ್ತೀರಿ.
ಅಂದು ಬಹಳಷ್ಟು ಮುಖಗಳು ಪ್ರಸನ್ನವಾಗಿರುವುವು.
ಅದರ ಪರಿಪಾಲಕನ (ಅಲ್ಲಾಹನ) ಕಡೆಗೆ ನೋಡುತ್ತಿರುವುವು.
ಅಂದು ಬಹಳಷ್ಟು ಮುಖಗಳು ವಿಷಣ್ಣವಾಗಿರುವುವು.
ಅವರೊಡನೆ ಬೆನ್ನು ತುಂಡಾಗಿಸುವ ರೀತಿಯಲ್ಲಿ ವ್ಯವಹರಿಸಲಾಗುವುದೆಂದು ಅವರು ಭಾವಿಸುವರು.
ಇಲ್ಲ, ಆತ್ಮವು ಕೊರಳ ಮೂಳೆಗೆ ತಲುಪಿದಾಗ.
“ಮಂತ್ರಿಸುವವರು ಯಾರಾದರೂ ಇದ್ದಾರೆಯೇ?” ಎಂದು ಕೇಳಲಾಗುವಾಗ.
ಅದು ಅಗಲಿಕೆಯ ಸಮಯವೆಂದು ಅವನಿಗೆ ಖಾತ್ರಿಯಾದಾಗ.
ಕಣಕಾಲು ಕಣಕಾಲಿನೊಂದಿಗೆ ಸುತ್ತುವಾಗ.
ಅಂದು (ಅವನನ್ನು) ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಸಾಗಿಸಲಾಗುವುದು.
ಅವನು ವಿಶ್ವಾಸವಿಡಲಿಲ್ಲ, ನಮಾಝ್ ಕೂಡ ಮಾಡಲಿಲ್ಲ.
ಆದರೆ ಅವನು ನಿಷೇಧಿಸಿದನು ಮತ್ತು ಮುಖ ತಿರುಗಿಸಿ ನಡೆದನು.
ನಂತರ ಎದೆಯುಬ್ಬಿಸಿ ತನ್ನ ಮನೆಯವರ ಕಡೆಗೆ ಹೊರಟನು.
ನಿನಗೆ ವಿನಾಶ ಕಾದಿದೆ. ನಿನಗೆ ವಿನಾಶ ಕಾದಿದೆ.
ಪುನಃ ನಿನಗೆ ವಿನಾಶ ಕಾದಿದೆ. ನಿನಗೆ ವಿನಾಶ ಕಾದಿದೆ.
ಮನುಷ್ಯನು ಭಾವಿಸುತ್ತಾನೆಯೇ ಅವನನ್ನು ಸುಮ್ಮನೆ ಬಿಟ್ಟುಬಿಡಲಾಗುವುದೆಂದು?
ಅವನು ಸ್ರವಿಸಲಾದ ವೀರ್ಯದ ಒಂದು ಬಿಂದುವಾಗಿರಲಿಲ್ಲವೇ?
ನಂತರ ಅವನು ರಕ್ತಪಿಂಡವಾದನು. ನಂತರ ಅಲ್ಲಾಹು ಅವನನ್ನು ಸೃಷ್ಟಿಸಿದನು ಮತ್ತು ಸರಿಪಡಿಸಿದನು.
ನಂತರ ಅವನಿಂದ ಗಂಡು ಮತ್ತು ಹೆಣ್ಣು ಎಂಬ ಜೋಡಿಯನ್ನು ಮಾಡಿದನು.
ಅಂತಹವನು ಸತ್ತವರಿಗೆ ಜೀವ ನೀಡುವ ಸಾಮರ್ಥ್ಯವನ್ನು ಹೊಂದಿಲ್ಲವೇ?