عربيEnglish

The Noble Qur'an Encyclopedia

Towards providing reliable exegeses and translations of the meanings of the Noble Qur'an in the world languages

The man [Al-Insan] - Kannada translation

Surah The man [Al-Insan] Ayah 31 Location Madanah Number 76

ಮನುಷ್ಯನು ಪ್ರಸ್ತಾಪಯೋಗ್ಯವೇ ಆಗಿರದಿದ್ದ ಒಂದು ಕಾಲವು ಅವನ ಮೇಲೆ ಕಳೆದುಹೋಗಿಲ್ಲವೇ?

ನಿಶ್ಚಯವಾಗಿಯೂ ನಾವು ಮನುಷ್ಯನನ್ನು ಸಮ್ಮಿಶ್ರ ವೀರ್ಯದಿಂದ ಸೃಷ್ಟಿಸಿದೆವು. ಅವನನ್ನು ಪರೀಕ್ಷಿಸುವುದಕ್ಕಾಗಿ. ನಾವು ಅವನನ್ನು ಕೇಳುವವನಾಗಿ ಮತ್ತು ನೋಡುವವನಾಗಿ ಮಾಡಿದೆವು.

ನಿಶ್ಚಯವಾಗಿಯೂ ನಾವು ಅವನಿಗೆ ಮಾರ್ಗವನ್ನು ತೋರಿಸಿದೆವು. ಅವನು ಒಂದೋ ಕೃತಜ್ಞನಾಗಲೆಂದು ಅಥವಾ ಕೃತಘ್ನನಾಗಲೆಂದು.

ನಿಶ್ಚಯವಾಗಿಯೂ ನಾವು ಸತ್ಯನಿಷೇಧಿಗಳಿಗೆ ಸಂಕೋಲೆಗಳನ್ನು, ಬೇಡಿಗಳನ್ನು ಮತ್ತು ಜ್ವಲಿಸುವ ನರಕವನ್ನು ಸಿದ್ಧಗೊಳಿಸಿದ್ದೇವೆ.

ನಿಶ್ಚಯವಾಗಿಯೂ ನೀತಿವಂತರು ಒಂದು ಲೋಟದಿಂದ ಕುಡಿಯುವರು. ಅದರ ಮಿಶ್ರಣವು ಕರ್ಪೂರವಾಗಿರುವುದು.

ಅದೊಂದು ಚಿಲುಮೆಯ ನೀರಾಗಿದೆ. ಅಲ್ಲಾಹನ ದಾಸರು ಅದರಿಂದ ಕುಡಿಯುವರು. ಅವರು (ಬಯಸಿದ ಸ್ಥಳದಲ್ಲಿ) ಅದನ್ನು ಚಿಮ್ಮಿ ಹರಿಯುವಂತೆ ಮಾಡುವರು.

ಅವರು (ಅಲ್ಲಾಹನ ದಾಸರು) ಯಾರೆಂದರೆ, ಹರಕೆಗಳನ್ನು ಈಡೇರಿಸುವವರು ಮತ್ತು ನಾಲ್ಕೂ ಕಡೆ ಕೆಡುಕು ಹರಡುವ ಒಂದು ದಿನವನ್ನು ಭಯಪಡುವವರು.

ಅವರು ಆಹಾರದ ಮೇಲೆ ಪ್ರೀತಿಯಿದ್ದೂ ಸಹ ಅದನ್ನು ಬಡವರಿಗೆ, ಅನಾಥರಿಗೆ ಮತ್ತು ಖೈದಿಗಳಿಗೆ ನೀಡುವವರು.

(ಅವರು ಹೇಳುತ್ತಾರೆ): “ನಾವು ನಿಮಗೆ ಆಹಾರ ನೀಡುವುದು ಅಲ್ಲಾಹನ ಸಂಪ್ರೀತಿಗಾಗಿ ಮಾತ್ರ. ನಾವು ನಿಮ್ಮಿಂದ ಯಾವುದೇ ಪ್ರತಿಫಲ ಅಥವಾ ಕೃತಜ್ಞತೆಯನ್ನು ಬಯಸುವುದಿಲ್ಲ.

ನಾವು ನಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಆ ಕಠೋರ ಮತ್ತು ಆತಂಕಕಾರಿ ದಿನವನ್ನು ಭಯಪಡುತ್ತೇವೆ.”

ಆದ್ದರಿಂದ ಅಲ್ಲಾಹು ಅವರನ್ನು ಆ ದಿನದ ಕೆಡುಕಿನಿಂದ ಕಾಪಾಡುವನು ಮತ್ತು ಅವರಿಗೆ ತಾಜಾತನ ಹಾಗೂ ಸಂತೋಷವನ್ನು ದಯಪಾಲಿಸುವನು.

ಅವರು ತಾಳ್ಮೆ ವಹಿಸಿದ್ದಕ್ಕೆ ಪ್ರತಿಫಲವಾಗಿ ಅವರಿಗೆ ಸ್ವರ್ಗವನ್ನು ಮತ್ತು ರೇಷ್ಮೆ ಉಡುಪುಗಳನ್ನು ನೀಡುವನು.

ಅವರು ಅಲ್ಲಿ ಸುಖಾಸನಗಳಲ್ಲಿ ಒರಗಿ ಕುಳಿತಿರುವರು. ಅವರು ಅಲ್ಲಿ ಬಿಸಿಲಿನ ಬೇಗೆಯನ್ನು ಅಥವಾ ಚಳಿಯ ಕಠೋರತೆಯನ್ನು ನೋಡಲಾರರು.

ಆ ಸ್ವರ್ಗಗಳ ನೆರಳು ಅವರ ಮೇಲೆ ಚಾಚಿಕೊಂಡಿರುವುದು. ಅದರ ಹಣ್ಣುಗಳು ಮತ್ತು ಗೊಂಚಲುಗಳು ಬಾಗಿಕೊಂಡಿರುವುವು.

ಅವರ ಸುತ್ತಲೂ ಬೆಳ್ಳಿಯ ಪಾತ್ರೆಗಳು ಮತ್ತು ಸ್ಫಟಿಕದ ಲೋಟಗಳೊಂದಿಗೆ (ಪರಿಚಾರಕರು) ಸುತ್ತುತ್ತಿರುವರು.

ಅವು ಬೆಳ್ಳಿಯ ಸ್ಫಟಿಕಗಳಾಗಿವೆ. ಅವರು ಅದನ್ನು ಸರಿಯಾದ ಅಳತೆಯಿಂದ ನಿರ್ಣಯಿಸುವರು.

ಅಲ್ಲಿ ಅವರಿಗೆ ಒಂದು ಲೋಟವನ್ನು ಕುಡಿಯಲು ನೀಡಲಾಗುವುದು. ಅದರ ಮಿಶ್ರಣವು ಶುಂಠಿಯದ್ದಾಗಿರುವುದು.

ಸ್ವರ್ಗದ ಸಲ್ಸಬೀಲ್ ಎಂಬ ಹೆಸರಿನ ಒಂದು ಚಿಲುಮೆಯಿಂದ.

ಅವರ ಸುತ್ತಲೂ ಚಿರಂಜೀವಿಗಳಾದ ಹುಡುಗರು ಸುತ್ತುತ್ತಿರುವರು. ನೀವು ಅವರನ್ನು ನೋಡಿದರೆ ಅವರನ್ನು ಚದುರಿದ ಮುತ್ತುಗಳೆಂದು ಭಾವಿಸುವಿರಿ.

ನೀವು ಅಲ್ಲಿ ಯಾವ ಕಡೆಗೆ ದೃಷ್ಟಿ ಹರಿಸಿದರೂ ಅಲ್ಲಿ ಐಶ್ವರ್ಯಗಳನ್ನು ಮತ್ತು ಮಹಾ ಸಾಮ್ರಾಜ್ಯವನ್ನು ಕಾಣುವಿರಿ.

ಅವರ ಮೇಲೆ ಹಸಿರು ಬಣ್ಣದ ನಯವಾದ ಮತ್ತು ದಪ್ಪಗಿನ ರೇಷ್ಮೆ ಉಡುಪುಗಳಿರುವುವು. ಅವರಿಗೆ ಬೆಳ್ಳಿಯ ಕಡಗಗಳನ್ನು ತೊಡಿಸಲಾಗುವುದು. ಅವರ ಪರಿಪಾಲಕನು (ಅಲ್ಲಾಹು) ಅವರಿಗೆ ಶುದ್ಧವಾದ ಪಾನೀಯವನ್ನು ಕುಡಿಸುವನು.

(ಅವರೊಡನೆ ಹೇಳಲಾಗುವುದು): “ಇವೆಲ್ಲವೂ ನಿಮಗಿರುವ ಪ್ರತಿಫಲವಾಗಿವೆ. ನಿಮ್ಮ ಪರಿಶ್ರಮಗಳು ಶ್ಲಾಘನಾರ್ಹವಾಗಿವೆ.”

ನಿಶ್ಚಯವಾಗಿಯೂ ನಾವು ನಿಮಗೆ ಈ ಕುರ್‌ಆನನ್ನು ಹಂತ ಹಂತವಾಗಿ ಅವತೀರ್ಣಗೊಳಿಸಿದ್ದೇವೆ.

ಆದ್ದರಿಂದ ನೀವು ನಿಮ್ಮ ಪರಿಪಾಲಕನ (ಅಲ್ಲಾಹನ) ತೀರ್ಪನ್ನು ತಾಳ್ಮೆಯಿಂದ ಕಾಯುತ್ತಿರಿ. ಅವರಲ್ಲಿ ಯಾವುದೇ ಪಾಪಿಯನ್ನು ಅಥವಾ ಕೃತಜ್ಞತೆಯಿಲ್ಲದವನನ್ನು ಅನುಸರಿಸಬೇಡಿ.

ಮುಂಜಾನೆ ಮತ್ತು ಸಂಜೆ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರನ್ನು ಸ್ಮರಿಸಿರಿ.

ರಾತ್ರಿಯಲ್ಲಿ ಅವನಿಗೆ ಸಾಷ್ಟಾಂಗ ಮಾಡಿರಿ ಮತ್ತು ದೀರ್ಘ ರಾತ್ರಿಯ ತನಕ ಅವನ ಪರಿಶುದ್ಧತೆಯನ್ನು ಕೊಂಡಾಡಿರಿ.

ನಿಶ್ಚಯವಾಗಿಯೂ ಇವರು ಇಹಲೋಕವನ್ನು ಇಷ್ಟಪಡುತ್ತಾರೆ ಮತ್ತು ಭಾರವಾದ ಒಂದು ದಿನವನ್ನು ತಮ್ಮ ಬೆನ್ನ ಹಿಂದೆ ತೊರೆಯುತ್ತಾರೆ.

ನಾವು ಅವರನ್ನು ಸೃಷ್ಟಿಸಿದ್ದೇವೆ ಮತ್ತು ಅವರ ದೇಹ ರಚನೆಯನ್ನು ಸದೃಢಗೊಳಿಸಿದ್ದೇವೆ. ನಾವು ಇಚ್ಛಿಸಿದರೆ ಅವರ ಬದಲಿಗೆ ಅವರಂತಿರುವವರನ್ನು ತರುತ್ತೇವೆ.

ನಿಶ್ಚಯವಾಗಿಯೂ ಇದೊಂದು ಉಪದೇಶವಾಗಿದೆ. ಆದ್ದರಿಂದ ಇಚ್ಛೆಯುಳ್ಳವನು ತನ್ನ ಪರಿಪಾಲಕನ (ಅಲ್ಲಾಹನ) ಕಡೆಗಿರುವ ಮಾರ್ಗವನ್ನು ಸ್ವೀಕರಿಸಲಿ.

ಅಲ್ಲಾಹು ಇಚ್ಛಿಸದೆ ನೀವು ಇಚ್ಛಿಸುವುದಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.

ಅವನು ಇಚ್ಛಿಸುವವರನ್ನು ಅವನ ದಯೆಯಲ್ಲಿ ಸೇರಿಸುತ್ತಾನೆ. ಅಕ್ರಮಿಗಳಿಗೆ ಅವನು ಯಾತನಾಮಯ ಶಿಕ್ಷೆಯನ್ನು ಸಿದ್ಧಗೊಳಿಸಿದ್ದಾನೆ.