عربيEnglish

The Noble Qur'an Encyclopedia

Towards providing reliable exegeses and translations of the meanings of the Noble Qur'an in the world languages

The emissaries [Al-Mursalat] - Kannada translation

Surah The emissaries [Al-Mursalat] Ayah 50 Location Maccah Number 77

ಮನದಣಿಸುತ್ತಾ ಸಾಗುವ ಮಾರುತಗಳ ಮೇಲಾಣೆ!

ಬಲವಾಗಿ ಬೀಸುವ ಮಾರುತಗಳ ಮೇಲಾಣೆ!

(ಮೋಡಗಳನ್ನು) ಎತ್ತಿ ಹಬ್ಬಿಸುವ ಮಾರುತಗಳ ಮೇಲಾಣೆ!

ಸತ್ಯಾಸತ್ಯಗಳನ್ನು ಬೇರ್ಪಡಿಸುವ ದೇವದೂತರ ಮೇಲಾಣೆ!

ದೇವವಾಣಿಯನ್ನು ತರುವ ದೇವದೂತರ ಮೇಲಾಣೆ!

ಆರೋಪ ನಿವಾರಿಸಲು ಅಥವಾ ಎಚ್ಚರಿಕೆ ನೀಡಲು.

ನಿಶ್ಚಯವಾಗಿಯೂ ನಿಮಗೆ ವಾಗ್ದಾನ ಮಾಡಲಾಗುವ ವಿಷಯವು ಖಂಡಿತ ಸಂಭವಿಸುತ್ತದೆ.

ನಕ್ಷತ್ರಗಳನ್ನು ಪ್ರಕಾಶರಹಿತವಾಗಿ ಮಾಡಲಾಗುವಾಗ.

ಆಕಾಶವನ್ನು ಹರಿದು ತೆರೆಯಲಾಗುವಾಗ.

ಪರ್ವತಗಳನ್ನು ನುಚ್ಚುನೂರು ಮಾಡಿ ಹಾರಿಸಲಾಗುವಾಗ.

ಸಂದೇಶವಾಹಕರುಗಳನ್ನು ನಿಶ್ಚಿತ ಸಮಯಕ್ಕೆ ಕರೆತರಲಾಗುವಾಗ.[1]

ಅವರನ್ನು ಯಾವ ದಿನಕ್ಕಾಗಿ ಮಂದೂಡಲಾಗಿದೆ.

ತೀರ್ಪಿನ ದಿನಕ್ಕಾಗಿ.

ತೀರ್ಪಿನ ದಿನ ಏನೆಂದು ನಿಮಗೇನು ಗೊತ್ತು?

ಅಂದು ನಿಷೇಧಿಸಿದವರಿಗೆ ವಿನಾಶವಿದೆ.

ನಾವು ಹಿಂದಿನ ಕಾಲದವರನ್ನು ನಾಶ ಮಾಡಲಿಲ್ಲವೇ?

ನಂತರ ನಾವು ಅವರ ಬಳಿಕ ಅವರ ನಂತರದವರನ್ನು ತಂದೆವು.

ನಾವು ಅಪರಾಧಿಗಳೊಂದಿಗೆ ಈ ರೀತಿ ವರ್ತಿಸುವೆವು.

ಅಂದು ನಿಷೇಧಿಸಿದವರಿಗೆ ವಿನಾಶವಿದೆ.

ನಾವು ನಿಮ್ಮನ್ನು ತುಚ್ಛ ದ್ರವದಿಂದ ಸೃಷ್ಟಿಸಲಿಲ್ಲವೇ?

ನಂತರ ನಾವು ಅದನ್ನು ಸುರಕ್ಷಿತವಾದ ಭದ್ರ ಸ್ಥಳದಲ್ಲಿಟ್ಟೆವು.

ಒಂದು ನಿಶ್ಚಿತ ಅವಧಿಯವರೆಗೆ.

ನಂತರ ನಾವು ನಿರ್ಣಯಿಸಿದೆವು. ನಾವು ಎಷ್ಟು ಉತ್ತಮ ನಿರ್ಣಯಗಾರರು!

ಅಂದು ನಿಷೇಧಿಸಿದವರಿಗೆ ವಿನಾಶವಿದೆ.

ನಾವು ಭೂಮಿಯನ್ನು ಸಂಗ್ರಹಿಸುವ ಸ್ಥಳವಾಗಿ ಮಾಡಲಿಲ್ಲವೇ?

ಸತ್ತವರನ್ನು ಮತ್ತು ಬದುಕಿರುವವರನ್ನು.

ನಾವು ಅದರಲ್ಲಿ ಎತ್ತರೆತ್ತರದ ದೃಢ ಪರ್ವತಗಳನ್ನು ಸ್ಥಾಪಿಸಿದೆವು ಮತ್ತು ನಿಮಗೆ ಕುಡಿಯಲು ಸಿಹಿಯಾದ ನೀರನ್ನು ನೀಡಿದೆವು.

ಅಂದು ನಿಷೇಧಿಸಿದವರಿಗೆ ವಿನಾಶವಿದೆ.

(ಸತ್ಯನಿಷೇಧಿಗಳೊಡನೆ ಹೇಳಲಾಗುವುದು): “ನೀವು ನಿಷೇಧಿಸುತ್ತಿದ್ದ ಆ ನರಕಕ್ಕೆ ಹೋಗಿರಿ.”

ಮೂರು ಶಾಖೆಗಳಿರುವ ನೆರಳಿಗೆ ಹೋಗಿರಿ.

ಅದು ನೆರಳನ್ನು ನೀಡುವುದಿಲ್ಲ. ಅಗ್ನಿಜ್ವಾಲೆಯಿಂದ ರಕ್ಷಿಸುವುದೂ ಇಲ್ಲ.

ನಿಶ್ಚಯವಾಗಿಯೂ ಅದು (ನರಕ) ದೊಡ್ಡ ದೊಡ್ಡ ಅರಮನೆಗಳಂತಿರುವ ಕಿಡಿಗಳನ್ನು ಎಸೆಯುತ್ತದೆ.

ಅವು ಹಳದಿ ಬಣ್ಣದ ಒಂಟೆಗಳ ಹಿಂಡುಗಳೋ ಎಂಬಂತೆ (ಕಾಣುತ್ತವೆ).

ಅಂದು ನಿಷೇಧಿಸಿದವರಿಗೆ ವಿನಾಶವಿದೆ.

ಇದು ಅವರಿಗೆ ತುಟಿಬಿಚ್ಚಲು ಸಾಧ್ಯವಾಗದ ದಿನವಾಗಿದೆ.

ಅವರಿಗೆ ನೆಪಗಳನ್ನು ಹೇಳಲು ಅನುಮತಿ ನೀಡಲಾಗುವುದಿಲ್ಲ.

ಅಂದು ನಿಷೇಧಿಸಿದವರಿಗೆ ವಿನಾಶವಿದೆ.

(ಅವರೊಡನೆ ಹೇಳಲಾಗುವುದು): “ಇದೇ ತೀರ್ಪಿನ ದಿನ. ನಾವು ನಿಮ್ಮನ್ನು ಮತ್ತು ನಿಮ್ಮ ಪೂರ್ವಜರನ್ನು ಜಮಾವಣೆಗೊಳಿಸಿದ್ದೇವೆ.

ನಿಮಲ್ಲಿ ಏನಾದರೂ ತಂತ್ರಗಳಿದ್ದರೆ ಅದನ್ನು ನನ್ನ ವಿರುದ್ಧ ಪ್ರಯೋಗಿಸಿರಿ.”

ಅಂದು ನಿಷೇಧಿಸಿದವರಿಗೆ ವಿನಾಶವಿದೆ.

ನಿಶ್ಚಯವಾಗಿಯೂ ದೇವಭಯವುಳ್ಳವರು ನೆರಳುಗಳಲ್ಲಿ ಮತ್ತು ಚಿಲುಮೆಗಳಲ್ಲಿರುವರು.

ಅವರು ಹಾತೊರೆಯುವ ಹಣ್ಣು-ಹಂಪಲುಗಳಲ್ಲಿ.

(ಅವರೊಡನೆ ಹೇಳಲಾಗುವುದು): “ನೀವು ಮಾಡಿದ ಸತ್ಕರ್ಮಗಳ ಪ್ರತಿಫಲವಾಗಿ ಸಂತೋಷದಿಂದ ತಿನ್ನಿರಿ ಮತ್ತು ಕುಡಿಯಿರಿ.”

ನಿಶ್ಚಯವಾಗಿಯೂ ನಾವು ಒಳಿತು ಮಾಡಿದವರಿಗೆ ಈ ರೀತಿ ಪ್ರತಿಫಲವನ್ನು ನೀಡುವೆವು.

ಅಂದು ನಿಷೇಧಿಸಿದವರಿಗೆ ವಿನಾಶವಿದೆ.

(ಸತ್ಯನಿಷೇಧಿಗಳೇ) ನೀವು (ಇಹಲೋಕದಲ್ಲಿ) ಸ್ವಲ್ಪ ಸಮಯದವರೆಗೆ ತಿನ್ನಿರಿ ಮತ್ತು ಆನಂದಿಸಿರಿ. ನಿಶ್ಚಯವಾಗಿಯೂ ನೀವು ಅಪರಾಧಿಗಳಾಗಿದ್ದೀರಿ.

ಅಂದು ನಿಷೇಧಿಸಿದವರಿಗೆ ವಿನಾಶವಿದೆ.

ಅವರೊಡನೆ ತಲೆಬಾಗಿರಿ ಎಂದು ಹೇಳಲಾಗುವಾಗ ಅವರು ತಲೆಬಾಗುವುದಿಲ್ಲ.

ಅಂದು ನಿಷೇಧಿಸಿದವರಿಗೆ ವಿನಾಶವಿದೆ.

ಅವರು ಇದರ (ಈ ಕುರ್‌ಆನಿನ) ನಂತರ ಯಾವ ಮಾತಿನಲ್ಲಿ ವಿಶ್ವಾಸವಿಡುವರು?