عربيEnglish

The Noble Qur'an Encyclopedia

Towards providing reliable exegeses and translations of the meanings of the Noble Qur'an in the world languages

The tidings [An-Naba] - Kannada translation

Surah The tidings [An-Naba] Ayah 40 Location Maccah Number 78

ಅವರು ಪರಸ್ಪರ ಯಾವುದರ ಬಗ್ಗೆ ವಿಚಾರಿಸುತ್ತಿದ್ದಾರೆ?

ಆ ಮಹಾ ಸಮಾಚಾರದ (ಪುನರುತ್ಥಾನದ) ಬಗ್ಗೆ.

ಅದು ಅವರು ಭಿನ್ನಮತ ತಳೆದಿರುವ ಸಮಾಚಾರವಾಗಿದೆ.

ಖಂಡಿತವಾಗಿಯೂ ಅವರು ಸದ್ಯವೇ ತಿಳಿಯುವರು.

ನಂತರ ಖಂಡಿತವಾಗಿಯೂ ಅವರಿಗೆ ಶೀಘ್ರವೇ ತಿಳಿದುಬರುವುದು.

ನಾವು ಭೂಮಿಯನ್ನು ಹಾಸನ್ನಾಗಿ ಮಾಡಲಿಲ್ಲವೇ?

ಪರ್ವತಗಳನ್ನು ಗೂಟಗಳನ್ನಾಗಿ ಮಾಡಲಿಲ್ಲವೇ?

ನಿಮ್ಮನ್ನು ನಾವು ಜೋಡಿಗಳಾಗಿ ಸೃಷ್ಟಿಸಿದೆವು.

ನಾವು ನಿಮ್ಮ ನಿದ್ದೆಯನ್ನು ವಿಶ್ರಾಂತಿಗೆ ಕಾರಣವಾಗಿ ಮಾಡಿದೆವು.

ನಾವು ರಾತ್ರಿಯನ್ನು ಪರದೆಯಾಗಿ ಮಾಡಿದೆವು.

ನಾವು ಹಗಲನ್ನು ಜೀವನೋಪಾಯದ ವೇಳೆಯಾಗಿ ಮಾಡಿದೆವು.

ನಾವು ನಿಮ್ಮ ಮೇಲ್ಭಾಗದಲ್ಲಿ ಏಳು ಬಲಿಷ್ಠ ಆಕಾಶಗಳನ್ನು ನಿರ್ಮಿಸಿದೆವು.

ನಾವು ಬೆಳಗುವ ಒಂದು ದೀಪವನ್ನು (ಸೂರ್ಯ) ಮಾಡಿದೆವು.

ನಾವು ಮೋಡಗಳಿಂದ ಧಾರಾಕಾರವಾಗಿ ಮಳೆಯನ್ನು ಸುರಿಸಿದೆವು.

ಅದರಿಂದ ಧಾನ್ಯ ಹಾಗೂ ತರಕಾರಿಯನ್ನು ಬೆಳೆಸುವುದಕ್ಕಾಗಿ.

ಮತ್ತು ದಟ್ಟವಾದ ತೋಟಗಳನ್ನು.

ನಿಶ್ಚಯವಾಗಿಯೂ ತೀರ್ಪು ನೀಡುವ ದಿನದ ಸಮಯವನ್ನು ನಿಶ್ಚಯಿಸಲಾಗಿದೆ.

ಕಹಳೆಯಲ್ಲಿ ಊದಲಾಗುವ ದಿನ. ಆಗ ನೀವು ಗುಂಪು ಗುಂಪಾಗಿ ಬರುವಿರಿ.

ಆಕಾಶವನ್ನು ತೆರೆಯಲಾಗುವುದು. ಆಗ ಅದು ಅಸಂಖ್ಯ ಬಾಗಿಲುಗಳಾಗಿ ಮಾರ್ಪಡುವುದು.

ಪರ್ವತಗಳನ್ನು ಚಲಿಸುವಂತೆ ಮಾಡಲಾಗುವುದು. ಆಗ ಅವು ಮರೀಚಿಕೆಯಂತಾಗುವುವು.

ನಿಶ್ಚಯವಾಗಿಯೂ ನರಕವು ನಿಗಾವಣೆಯ ಸ್ಥಳದಲ್ಲಿದೆ.

ಅದು ಎಲ್ಲೆ ಮೀರಿ ವರ್ತಿಸಿದವರ ವಾಸಸ್ಥಳವಾಗಿದೆ.

ಅವರು ಯುಗ ಯುಗಾಂತರ ಅದರಲ್ಲಿ ವಾಸಿಸುವರು.

ಅವರು ಅಲ್ಲಿ ತಂಪು ಅಥವಾ ಪಾನೀಯದ ರುಚಿಯನ್ನು ನೋಡುವುದೇ ಇಲ್ಲ.

ಕುದಿಯುವ ನೀರು ಮತ್ತು (ದುರ್ಗಂಧಪೂರಿತ) ಕೀವಿನ (ರುಚಿಯ) ಹೊರತು.

ಅವರಿಗೆ ಪೂರ್ಣ ಪ್ರತಿಫಲ ನೀಡಲಾಗುವುದು.

ನಿಶ್ಚಯವಾಗಿಯೂ ಅವರು ವಿಚಾರಣೆಯನ್ನು ನಿರೀಕ್ಷಿಸುತ್ತಿರಲಿಲ್ಲ.

ಅವರು ಸೊಕ್ಕಿನಿಂದ ನಮ್ಮ ವಚನಗಳನ್ನು ನಿಷೇಧಿಸಿದ್ದರು.

ನಾವು ಎಲ್ಲ ವಿಷಯಗಳನ್ನೂ ಲಿಖಿತಗೊಳಿಸಿ ಎಣಿಸಿಟ್ಟಿದ್ದೇವೆ.

ಆದ್ದರಿಂದ ನೀವು (ನಿಮ್ಮ ದುಷ್ಕರ್ಮಗಳ) ರುಚಿಯನ್ನು ನೋಡಿರಿ. ನಾವು ನಿಮಗೆ ಶಿಕ್ಷೆಯಲ್ಲದೆ ಬೇರೇನನ್ನೂ ಅಧಿಕಗೊಳಿಸುವುದಿಲ್ಲ.

ನಿಶ್ಚಯವಾಗಿಯೂ ದೇವಭಯವುಳ್ಳವರಿಗೆ ವಿಜಯವಿದೆ.

ತೋಟಗಳು ಮತ್ತು ದ್ರಾಕ್ಷಿಗಳಿವೆ.

ಸಮಪ್ರಾಯದ ಯುವ ತರುಣಿಯರಿದ್ದಾರೆ.

ತುಂಬಿ ತುಳುಕುವ ಲೋಟಗಳಿವೆ.

ಅವರು ಅಲ್ಲಿ ಅನಗತ್ಯ ಮಾತುಗಳನ್ನು ಅಥವಾ ಸುಳ್ಳು ವಾರ್ತೆಗಳನ್ನು ಕೇಳುವುದಿಲ್ಲ.

ಇವೆಲ್ಲವೂ ಅವರಿಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ದೊರೆಯುವ ಪರ್ಯಾಪ್ತ ಪ್ರತಿಫಲವಾಗಿದೆ.

ಅವನು ಯಾರೆಂದರೆ ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಪರಿಪಾಲಕ. ಅವನು ಪರಮ ದಯಾಳುವಾಗಿದ್ದಾನೆ. ಅವನೊಡನೆ ಮಾತನಾಡುವ ಅಧಿಕಾರ ಯಾರಿಗೂ ಇಲ್ಲ.

ರೂಹ್ (ಜಿಬ್ರೀಲ್) ಮತ್ತು ದೇವದೂತರು‍ಗಳು ಸಾಲು ಸಾಲಾಗಿ ನಿಲ್ಲುವ ದಿನ. (ಅಂದು) ಪರಮ ದಯಾಳುವಾದ ಅಲ್ಲಾಹು ಯಾರಿಗೆ ಅನುಮತಿ ನೀಡುತ್ತಾನೋ ಮತ್ತು ಯಾರು ಸರಿಯಾದ ಮಾತನ್ನೇ ಆಡುತ್ತಾರೋ ಅವರ ಹೊರತು ಬೇರೆ ಯಾರಿಗೂ ತುಟಿ ಬಿಚ್ಚಲಾಗುವುದಿಲ್ಲ.

ಆ ದಿನವು ಸತ್ಯವಾಗಿದೆ. ಆದ್ದರಿಂದ ಇಚ್ಛೆಯುಳ್ಳವನು (ಸತ್ಕರ್ಮಗಳನ್ನು ಮಾಡಿ) ತನ್ನ ಪರಿಪಾಲಕನ (ಅಲ್ಲಾಹನ) ಬಳಿ ವಾಸಸ್ಥಳವನ್ನು ಸ್ವೀಕರಿಸಿಕೊಳ್ಳಲಿ.

ನಾವು ನಿಮಗೆ ಶೀಘ್ರದಲ್ಲೇ ಬರುವ ಒಂದು ಶಿಕ್ಷೆಯ ಬಗ್ಗೆ ನಿಶ್ಚಯವಾಗಿಯೂ ಮುನ್ನೆಚ್ಚರಿಕೆ ನೀಡಿದ್ದೇವೆ. ಅಂದು ಮನುಷ್ಯನು ತನ್ನ ಕೈಗಳು ಮುಂದಕ್ಕೆ ಕಳುಹಿಸಿದ ಕರ್ಮಗಳನ್ನು ನೋಡುವನು ಮತ್ತು ಸತ್ಯನಿಷೇಧಿಯು ಹೇಳುವನು: “ಅಯ್ಯೋ! ನಾನು ಮಣ್ಣಾಗಿ ಬಿಟ್ಟಿದ್ದರೆ ಎಷ್ಟು ಚೆನ್ನಾಗಿತ್ತು!”