The Noble Qur'an Encyclopedia
Towards providing reliable exegeses and translations of the meanings of the Noble Qur'an in the world languagesThose who drag forth [An-Naziat] - Kannada translation
Surah Those who drag forth [An-Naziat] Ayah 46 Location Maccah Number 79
(ದೇಹದೊಳಗೆ) ಧುಮುಕಿ (ಸತ್ಯನಿಷೇಧಿಗಳ ಆತ್ಮಗಳನ್ನು) ಕಠೋರವಾಗಿ ಎಳೆಯುವ ದೇವದೂತರ ಮೇಲಾಣೆ!
(ಸತ್ಯವಿಶ್ವಾಸಿಗಳ ಆತ್ಮಗಳನ್ನು) ಸೌಮ್ಯವಾಗಿ ಎಳೆಯುವ ದೇವದೂತರ ಮೇಲಾಣೆ!
ಈಜುತ್ತಾ ಚಲಿಸುವ ದೇವದೂತರ ಮೇಲಾಣೆ!
ನಂತರ ದೌಡಾಯಿಸುತ್ತಾ ಮುಂದಕ್ಕೆ ಸಾಗುವ ದೇವದೂತರ ಮೇಲಾಣೆ!
ಕಾರ್ಯಗಳನ್ನು ನಿಯಂತ್ರಿಸುವ ದೇವದೂತರ ಮೇಲಾಣೆ!
ನಡುಗಿಸುವಂತದ್ದು (ಪ್ರಥಮ ಊದುವಿಕೆ) ನಡುಗಿಸುವ ದಿನ!
ಹಿಂಬಾಲಿಸಿ ಬರುವಂತದ್ದು (ಎರಡನೇ ಊದುವಿಕೆ) ಅದರ ಹಿಂದೆಯೇ ಬರುವುದು.
ಅಂದು ಬಹಳಷ್ಟು ಹೃದಯಗಳು ಢವಗುಡುತ್ತಿರುವುವು.
ಅವರ ಕಣ್ಣುಗಳು ಕೆಳಭಾಗಕ್ಕೆ ತಗ್ಗಿರುವುವು.
ಅವರು ಕೇಳುವರು: “ನಮ್ಮನ್ನು ನಮ್ಮ ಪೂರ್ವಸ್ಥಿತಿಗೆ ಮರಳಿಸಲಾಗುವುದೇ?
ನಾವು ಕೊಳೆತ ಮೂಳೆಗಳಾಗಿ ಬಿಟ್ಟ ಬಳಿಕ!”
ಅವರು ಹೇಳುವರು: “ಹಾಗಿದ್ದರೆ ಅದು ನಷ್ಟಭರಿತ ಮರಳುವಿಕೆಯಾಗಿದೆ.”
ಅದು ಕೇವಲ ಒಂದು (ಭಯಾನಕ) ಗದರಿಕೆಯಾಗಿದೆ.
ಆಗ ಅಗೋ ಅವರು ಒಂದು ಮೈದಾನದಲ್ಲಿ ಒಟ್ಟುಗೂಡುವರು!
ಮೂಸಾರ ಸಮಾಚಾರವು ನಿಮಗೆ ತಲುಪಿದೆಯೇ?
ಪವಿತ್ರ ತುವಾ ಕಣಿವೆಯಲ್ಲಿ ಅವರ ಪರಿಪಾಲಕನು (ಅಲ್ಲಾಹು) ಅವರನ್ನು ಕರೆದು ಹೇಳಿದ ಸಂದರ್ಭ:
“ಫರೋಹನ ಬಳಿಗೆ ಹೋಗಿರಿ. ನಿಶ್ಚಯವಾಗಿಯೂ ಅವನು ಎಲ್ಲೆ ಮೀರಿ ವರ್ತಿಸಿದ್ದಾನೆ.
ಅವನೊಡನೆ ಕೇಳಿರಿ: ನೀನು ಸ್ವಯಂ ಸಂಸ್ಕರಿಸಲು ಬಯಸುವೆಯಾ?
ನಾನು ನಿನಗೆ ನಿನ್ನ ಪರಿಪಾಲಕನ (ಅಲ್ಲಾಹನ) ಮಾರ್ಗವನ್ನು ತೋರಿಸಿಕೊಡುವೆನು. ಅದರಿಂದ ನೀನು ದೇವಭಯವುಳ್ಳವನಾಗಬಹುದು.”
ಮೂಸಾ ಅವನಿಗೆ ಮಹಾ ದೃಷ್ಟಾಂತವನ್ನು ತೋರಿಸಿದರು.
ಆದರೆ ಅವನು ನಿಷೇಧಿಸಿದನು ಮತ್ತು ಅವಿಧೇಯತೆ ತೋರಿದನು.
ನಂತರ ಅವನು (ತಂತ್ರಗಾರಿಕೆ ಮಾಡಲು) ಪರಿಶ್ರಮಿಸುತ್ತಾ ಹಿಂದಿರುಗಿ ಹೋದನು.
ನಂತರ ಎಲ್ಲರನ್ನೂ ಜಮಾವಣೆಗೊಳಿಸಿ ಘೋಷಿಸಿದನು.
ಅವನು ಹೇಳಿದನು: “ನಾನು ನಿಮ್ಮ ಪರಮೋಚ್ಛ ದೇವನಾಗಿದ್ದೇನೆ.”
ಆಗ ಅಲ್ಲಾಹು ಅವನನ್ನು ಪರಲೋಕ ಮತ್ತು ಇಹಲೋಕದ ಶಿಕ್ಷೆಗಾಗಿ ಹಿಡಿದನು.
ನಿಶ್ಚಯವಾಗಿಯೂ ಭಯಪಡುವವರಿಗೆ ಅದರಲ್ಲಿ ನೀತಿಪಾಠವಿದೆ.
ನಿಮ್ಮನ್ನು ಸೃಷ್ಟಿಸುವುದು ಕಷ್ಟವೋ ಅಥವಾ ಆಕಾಶವನ್ನೋ? ಅವನು ಆಕಾಶವನ್ನು ನಿರ್ಮಿಸಿದನು.
ಅದರ ಛಾವಣಿಯನ್ನು ಎತ್ತರಿಸಿದನು ಮತ್ತು ಅದನ್ನು ಸರಿಪಡಿಸಿದನು.
ಅದರ ರಾತ್ರಿಯನ್ನು ಕತ್ತಲೆಯಾಗಿ ಮಾಡಿದನು ಮತ್ತು ಅದರ ಹಗಲನ್ನು ಪ್ರತ್ಯಕ್ಷಗೊಳಿಸಿದನು.
ಅದರ ನಂತರ ಅವನು ಭೂಮಿಯನ್ನು ವಿಸ್ತರಿಸಿದನು.
ಅದರಿಂದ ನೀರನ್ನು ಮತ್ತು ಹುಲ್ಲುಗಾವಲುಗಳನ್ನು ಹೊರತೆಗೆದನು.
ಪರ್ವತಗಳನ್ನು ದೃಢವಾಗಿ ನಿಲ್ಲಿಸಿದನು.
ಇವೆಲ್ಲವೂ ನಿಮ್ಮ ಮತ್ತು ನಿಮ್ಮ ಜಾನುವಾರುಗಳ ಉಪಯೋಗಕ್ಕಾಗಿ.
ಆ ಮಹಾ ವಿಪತ್ತು (ಪುನರುತ್ಥಾನ ದಿನ) ಬರುವ ಸಂದರ್ಭ.
ಅಂದು ಮನುಷ್ಯನು ತಾನು ಮಾಡಿಟ್ಟ ಕರ್ಮಗಳನ್ನು ಸ್ಮರಿಸುವನು.
ನೋಡುಗರೆಲ್ಲರ ಮುಂದೆ ನರಕವನ್ನು ಪ್ರದರ್ಶಿಸಲಾಗುವುದು.
ಆದ್ದರಿಂದ ಯಾರು ಎಲ್ಲೆ ಮೀರಿದವನೋ,
ಮತ್ತು ಇಹಲೋಕಕ್ಕೆ ಪ್ರಾಶಸ್ತ್ಯ ನೀಡಿದವನೋ,
ನಿಶ್ಚಯವಾಗಿಯೂ ನರಕವೇ ಅವನ ವಾಸಸ್ಥಳ.
ಯಾರು ತನ್ನ ಪರಿಪಾಲಕನ (ಅಲ್ಲಾಹನ) ಮುಂದೆ ನಿಲ್ಲುವುದನ್ನು ಭಯಪಟ್ಟನೋ ಮತ್ತು ತನ್ನ ದೇಹವನ್ನು ಸ್ವೇಚ್ಛೆಗಳಿಂದ ದೂರವಿಟ್ಟವನೋ,
ನಿಶ್ಚಯವಾಗಿಯೂ ಸ್ವರ್ಗವೇ ಅವನ ವಾಸಸ್ಥಳ.
ಅಂತ್ಯಸಮಯವು—ಅದು ಯಾವಾಗ ಸಂಭವಿಸುತ್ತದೆಯೆಂದು ಅವರು ನಿಮ್ಮಲ್ಲಿ ಕೇಳುತ್ತಾರೆ.
ನಿಮಗೆ ಅದರ ಬಗ್ಗೆ ಏನು ಜ್ಞಾನವಿದೆ?
ಅದರ ಆತ್ಯಂತಿಕ ಜ್ಞಾನವಿರುವುದು ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಮಾತ್ರ.
ನೀವಂತೂ ಅದನ್ನು ಭಯಪಡುವವರಿಗೆ ಮುನ್ನೆಚ್ಚರಿಕೆ ನೀಡುವವರಾಗಿದ್ದೀರಿ.
ಅವರು ಅದನ್ನು ನೋಡುವ ದಿನದಂದು, ದಿನದ ಕೊನೆಯ ಭಾಗ ಅಥವಾ ದಿನದ ಮೊದಲ ಭಾಗ ಮಾತ್ರ ಅವರು (ಭೂಮಿಯಲ್ಲಿ) ವಾಸವಾಗಿದ್ದರು ಎಂದು ಅವರಿಗೆ ಭಾಸವಾಗುವುದು.