The Noble Qur'an Encyclopedia
Towards providing reliable exegeses and translations of the meanings of the Noble Qur'an in the world languagesHe Frowned [Abasa] - Kannada translation
Surah He Frowned [Abasa] Ayah 42 Location Maccah Number 80
ಅವರು (ಪ್ರವಾದಿ) ಮುಖ ಸಿಂಡರಿಸಿದರು ಮತ್ತು ವಿಮುಖರಾದರು.
ಒಬ್ಬ ಕುರುಡ ಅವರ ಬಳಿಗೆ ಬಂದರು ಎಂಬ ಕಾರಣದಿಂದ.[1]
(ಪ್ರವಾದಿಯವರೇ!) ನಿಮಗೇನು ಗೊತ್ತು? ಆ ಕುರುಡರು ಪರಿಶುದ್ಧತೆಯನ್ನು ಪಡೆಯಬಹುದು.
ಅಥವಾ ಉಪದೇಶಕ್ಕೆ ಕಿವಿಗೊಟ್ಟು, ಆ ಉಪದೇಶವು ಅವರಿಗೆ ಪ್ರಯೋಜನವಾಗಬಹುದು.
ಆದರೆ ಯಾರು ತನ್ನನ್ನು ತಾನೇ ಸ್ವಯಂ-ಪರ್ಯಾಪ್ತನೆಂದು ಪರಿಗಣಿಸುತ್ತಾನೋ,
ಅವನ ಕಡೆಗೆ ನೀವು ಪೂರ್ಣ ಗಮನ ಹರಿಸಿದಿರಿ.[1]
ಅವನು ಪರಿಶುದ್ಧತೆಯನ್ನು ಪಡೆಯದಿದ್ದರೆ ನಿಮಗೇನೂ ದೋಷವಿಲ್ಲ.
ಆದರೆ ಯಾರು ನಿಮ್ಮ ಬಳಿಗೆ ಓಡುತ್ತಾ ಬಂದರೋ,
ಅಲ್ಲಾಹನನ್ನು ಭಯಪಡುವ ಸ್ಥಿತಿಯಲ್ಲಿ,
ಅವರ ಬಗ್ಗೆ ನೀವು ಅಸಡ್ಡೆ ತೋರಿದಿರಿ.
ಅಲ್ಲ. ನಿಶ್ಚಯವಾಗಿಯೂ ಇದು (ಕುರ್‌ಆನ್) ಒಂದು ಉಪದೇಶವಾಗಿದೆ.
ಇಚ್ಛೆಯುಳ್ಳವರು ಅದರಿಂದ ಉಪದೇಶ ಪಡೆಯಲಿ.
ಅದು ಪ್ರತಿಷ್ಠಿತ ಗ್ರಂಥದಲ್ಲಿದೆ.
ಉನ್ನತವಾದ ಮತ್ತು ಪರಿಶುದ್ಧವಾದ (ಗ್ರಂಥದಲ್ಲಿ).
ಅದು ದೇವದೂತರುಗಳ ಕೈಗಳಲ್ಲಿವೆ.
ಗಣ್ಯರು ಮತ್ತು ನೀತಿವಂತರಾದ (ದೇವದೂತರುಗಳು).
ಮನುಷ್ಯನ ಮೇಲೆ ಅಲ್ಲಾಹನ ಶಾಪವಿರಲಿ! ಅವನು ಎಷ್ಟೊಂದು ಕೃತಜ್ಞತೆಯಿಲ್ಲದವನಾಗಿ ಬಿಟ್ಟಿದ್ದಾನೆ!
ಅಲ್ಲಾಹು ಅವನನ್ನು ಯಾವ ವಸ್ತುವಿನಿಂದ ಸೃಷ್ಟಿಸಿದನು?
ಅವನನ್ನು ವೀರ್ಯದಿಂದ ಸೃಷ್ಟಿಸಿದನು. ನಂತರ ಅವನನ್ನು ನಿರ್ಣಯಿಸಿದನು.
ನಂತರ ಅವನಿಗೆ ಮಾರ್ಗವನ್ನು ಸುಗಮಗೊಳಿಸಿದನು.
ನಂತರ ಅವನಿಗೆ ಮರಣವನ್ನು ನೀಡಿ ಸಮಾಧಿಯಲ್ಲಿ ದಫನ ಮಾಡಿಸಿದನು.
ನಂತರ ಅವನು ಇಚ್ಛಿಸುವಾಗ ಅವನಿಗೆ ಪುನಃ ಜೀವ ನೀಡಿ ಎಬ್ಬಿಸುವನು.
ಇಲ್ಲವೇ ಇಲ್ಲ. ಅವನು ಇಲ್ಲಿಯ ತನಕ ಅಲ್ಲಾಹನ ಆಜ್ಞೆಗಳನ್ನು ಪಾಲಿಸಲಿಲ್ಲ.
ಮನುಷ್ಯನು ತನ್ನ ಆಹಾರವನ್ನು ನೋಡಲಿ.
ನಾವು ರಭಸವಾಗಿ ಮಳೆಯನ್ನು ಸುರಿಸಿದೆವು.
ನಂತರ ಭೂಮಿಯನ್ನು ಸರಿಯಾದ ರೀತಿಯಲ್ಲಿ ಸೀಳಿದೆವು.
ನಂತರ ಅದರಲ್ಲಿ ಧಾನ್ಯವನ್ನು ಬೆಳೆಸಿದೆವು.
ದ್ರಾಕ್ಷಿ ಮತ್ತು ತರಕಾರಿಗಳನ್ನು,
ಆಲಿವ್ ಮತ್ತು ಖರ್ಜೂರ ಮರಗಳನ್ನು,
ದಟ್ಟವಾದ ತೋಟಗಳನ್ನು.
ಹಣ್ಣು-ಹಂಪಲುಗಳನ್ನು ಮತ್ತು ಹುಲ್ಲುಗಾವಲುಗಳನ್ನು.
ನಿಮ್ಮ ಮತ್ತು ನಿಮ್ಮ ಜಾನುವಾರುಗಳ ಉಪಯೋಗಕ್ಕಾಗಿ.
ಕಿವಿಯನ್ನು ಕಿವುಡುಗೊಳಿಸುವ ಆ ಸದ್ದು (ಪುನರುತ್ಥಾನ) ಬಂದಾಗ.
ಅಂದು ಮನುಷ್ಯನು ತನ್ನ ಸಹೋದರನಿಂದ ದೂರ ಓಡುವನು.
ತನ್ನ ತಂದೆ-ತಾಯಿಗಳಿಂದ.
ತನ್ನ ಮಡದಿ-ಮಕ್ಕಳಿಂದ.
ಅಂದು ಅವರಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಇತರರ ಕಡೆಗೆ ಗಮನಕೊಡಲಾಗದಷ್ಟು ತನ್ನದೇ ಆದ ಆಲೋಚನೆಗಳಿರುವುವು.
ಅಂದು ಬಹಳಷ್ಟು ಮುಖಗಳು ಪ್ರಸನ್ನವಾಗಿರುವುವು.
ಅವು ಕಿಲಕಿಲ ನಗುತ್ತಿರುವುವು ಮತ್ತು ಸಂತೋಷದಿಂದಿರುವುವು.
ಅಂದು ಬಹಳಷ್ಟು ಮುಖಗಳಿಗೆ ಧೂಳು ಮೆತ್ತಿಕೊಂಡಿರುವುದು.
ಅವುಗಳನ್ನು ಕಾರ್ಗತ್ತಲೆಯು ಕವಿದಿರುವುದು.
ಅವರೇ ಸತ್ಯನಿಷೇಧಿಗಳು ಮತ್ತು ದುಷ್ಕರ್ಮಿಗಳು.