The Noble Qur'an Encyclopedia
Towards providing reliable exegeses and translations of the meanings of the Noble Qur'an in the world languagesDefrauding [Al-Mutaffifin] - Kannada translation
Surah Defrauding [Al-Mutaffifin] Ayah 36 Location Maccah Number 83
ಅಳತೆ ಮತ್ತು ತೂಕದಲ್ಲಿ ಕಡಿಮೆ ಮಾಡುವವರಿಗೆ ಮಹಾ ನಾಶವಿದೆ.
ಅವರು ಯಾರೆಂದರೆ ಜನರಿಂದ ಅಳತೆ ಮಾಡಿ ಪಡೆಯುವಾಗ ಪೂರ್ಣವಾಗಿ ಪಡೆಯುವವರು.
ಆದರೆ ಜನರಿಗೆ ಅಳತೆ ಮಾಡಿ ಕೊಡುವಾಗ ಅಥವಾ ತೂಕ ಮಾಡಿ ಕೊಡುವಾಗ ಕಡಿಮೆ ಮಾಡುವವರು.
ಮರಣಾನಂತರ ಅವರಿಗೆ ಪುನಃ ಜೀವ ನೀಡಿ ಎಬ್ಬಿಸಲಾಗುವುದೆಂಬ ಪ್ರಜ್ಞೆ ಅವರಿಗಿಲ್ಲವೇ?
ಆ ಮಹಾ ದಿನಕ್ಕಾಗಿ.
ಜನರೆಲ್ಲರೂ ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಮುಂದೆ ಎದ್ದು ನಿಲ್ಲುವ ದಿನ.
ನಿಶ್ಚಯವಾಗಿಯೂ ದುಷ್ಕರ್ಮಿಗಳ ಕರ್ಮದಾಖಲೆಯು ಸಿಜ್ಜೀನ್‍ನಲ್ಲಿದೆ.
ಸಿಜ್ಜೀನ್ ಏನೆಂದು ನಿಮಗೇನು ಗೊತ್ತು?
ಅದು ನಮೂದಿಸಲಾದ ಪುಸ್ತಕವಾಗಿದೆ.
ಅಂದು ನಿಷೇಧಿಸಿದವರಿಗೆ ಮಹಾ ನಾಶವಿದೆ.
ಅವರು ಯಾರೆಂದರೆ ಪ್ರತಿಫಲ ದಿನವನ್ನು ನಿಷೇಧಿಸುವವರು.
ಎಲ್ಲೆ ಮೀರಿ ನಡೆಯುವವರು ಮತ್ತು ಮಹಾಪಾಪಿಗಳ ಹೊರತು ಇನ್ನಾರೂ ಅದನ್ನು ನಿಷೇಧಿಸುವುದಿಲ್ಲ.
ಅವನಿಗೆ ನಮ್ಮ ವಚನಗಳನ್ನು ಓದಿಕೊಡಲಾದರೆ ಅದನ್ನು “ಪ್ರಾಚೀನ ಕಾಲದ ಜನರ ಪುರಾಣಗಳು” ಎನ್ನುತ್ತಾನೆ.
ಅಲ್ಲ, ಅವರು ಮಾಡುತ್ತಿದ್ದ ದುಷ್ಕರ್ಮಗಳ ಕಾರಣ ಕಪ್ಪುಕಲೆಗಳು ಅವರ ಹೃದಯಗಳನ್ನು ಆವರಿಸಿಕೊಂಡಿವೆ.
ಅಲ್ಲ, ಅಂದು ಅವರು ಅವರ ಪರಿಪಾಲಕನನ್ನು (ಅಲ್ಲಾಹನನ್ನು) ದರ್ಶಿಸದಂತೆ ಪರದೆಯಲ್ಲಿ ಹಾಕಲಾಗುವರು.[1]
ನಂತರ ನಿಶ್ಚಯವಾಗಿಯೂ ಅವರನ್ನು ಧಗಧಗಿಸುವ ನರಕಕ್ಕೆ ಎಸೆಯಲಾಗುವುದು.
ನಂತರ ಅವರೊಡನೆ ಹೇಳಲಾಗುವುದು: “ಇದೇ ನೀವು ನಿಷೇಧಿಸುತ್ತಿದ್ದ ನರಕ.”
ಇಲ್ಲವೇ ಇಲ್ಲ. ನಿಶ್ಚಯವಾಗಿಯೂ ಸಜ್ಜನರ ಕರ್ಮದಾಖಲೆಯು ಇಲ್ಲಿಯ್ಯೂನ್‍ನಲ್ಲಿದೆ.
ಇಲ್ಲಿಯ್ಯೂನ್ ಏನೆಂದು ನಿಮಗೇನು ಗೊತ್ತು?
ಅದು ನಮೂದಿಸಲಾದ ಪುಸ್ತಕವಾಗಿದೆ.
ಸಾಮೀಪ್ಯ ಪಡೆದವರು (ದೇವದೂತರು) ಅದರ ಬಳಿ ಉಪಸ್ಥಿತರಾಗುವರು.
ನಿಶ್ಚಯವಾಗಿಯೂ ಸಜ್ಜನರು ಸುಖಾಡಂಬರಗಳಲ್ಲಿರುವರು.
ಸುಖಾಸನಗಳಲ್ಲಿ ಕುಳಿತು ನೋಡುತ್ತಿರುವರು.
ನೀವು ಅವರ ಮುಖಗಳಲ್ಲಿ ಆ ಸುಖಗಳ ಹೊಳಪನ್ನು ಗುರುತಿಸುವಿರಿ.
ಅವರಿಗೆ ಮೊಹರು ಹಾಕಲಾದ ಶುದ್ಧ ಮದ್ಯವನ್ನು ಕುಡಿಯಲು ನೀಡಲಾಗುವುದು.
ಅದರ ಮೊಹರು ಕಸ್ತೂರಿಯಾಗಿದೆ. ಪೈಪೋಟಿ ನಡೆಸುವವರು ಇದಕ್ಕಾಗಿ ಪೈಪೋಟಿ ನಡೆಸಲಿ.
ಅದರ ಮಿಶ್ರಣವು ತಸ್ನೀಮ್[1] ಆಗಿದೆ.
ಅಂದರೆ ಸಾಮೀಪ್ಯ ಪಡೆದವರು ಕುಡಿಯುವ ಚಿಲುಮೆಯ ನೀರು.
ನಿಶ್ಚಯವಾಗಿಯೂ (ಇಹಲೋಕದಲ್ಲಿ) ಅಪರಾಧಿಗಳು ಸತ್ಯವಿಶ್ವಾಸಿಗಳನ್ನು ತಮಾಷೆ ಮಾಡಿ ನಗುತ್ತಿದ್ದರು.
ಅವರು ಸತ್ಯವಿಶ್ವಾಸಿಗಳ ಬಳಿಯಿಂದ ಹೋಗುವಾಗ ಒಬ್ಬರು ಇನ್ನೊಬ್ಬರಿಗೆ ಕಣ್ಣಿನಿಂದ ಸನ್ನೆ ಮಾಡುತ್ತಿದ್ದರು.
ಅವರ ತಮ್ಮ ಮನೆಯವರ ಬಳಿಗೆ ಮರಳುವಾಗ ಮೋಜು ಮಾಡುತ್ತಾ ಮರಳುತ್ತಿದ್ದರು.
ಸತ್ಯವಿಶ್ವಾಸಿಗಳನ್ನು ಕಂಡರೆ, “ನಿಶ್ಚಯವಾಗಿಯೂ ಇವರೆಲ್ಲರೂ ದಾರಿತಪ್ಪಿದವರು” ಎನ್ನುತ್ತಿದ್ದರು.
ಇವರನ್ನು ಅವರ (ಸತ್ಯವಿಶ್ವಾಸಿಗಳ) ಕಾವಲುಗಾರರಾಗಿ ಮಾಡಿ ಕಳುಹಿಸಲಾಗಿಲ್ಲ.
ಆದರೆ ಇಂದು ಸತ್ಯವಿಶ್ವಾಸಿಗಳು ಸತ್ಯನಿಷೇಧಿಗಳನ್ನು ನೋಡಿ ನಗುವರು.
ಅವರು ಸುಖಾಸನಗಳಲ್ಲಿ ಕುಳಿತು ನೋಡುತ್ತಿರುವರು.
ಆ ಸತ್ಯನಿಷೇಧಿಗಳಿಗೆ ಅವರು ಮಾಡಿದ ದುಷ್ಕರ್ಮಗಳ ಪ್ರತಿಫಲವನ್ನು ಪೂರ್ಣವಾಗಿ ನೀಡಲಾಗಿದೆಯೋ ಎಂದು.