عربيEnglish

The Noble Qur'an Encyclopedia

Towards providing reliable exegeses and translations of the meanings of the Noble Qur'an in the world languages

The Mansions of the stars [Al-Burooj] - Kannada translation

Surah The Mansions of the stars [Al-Burooj] Ayah 22 Location Maccah Number 85

ನಕ್ಷತ್ರ ಪುಂಜಗಳಿರುವ ಆಕಾಶದ ಮೇಲಾಣೆ!

ವಾಗ್ದಾನ ಮಾಡಲಾದ ದಿನದ ಮೇಲಾಣೆ!

ಸಾಕ್ಷಿಯಾಗುವುದರ ಮತ್ತು ಸಾಕ್ಷಿ ವಹಿಸಲಾಗುವುದರ ಮೇಲಾಣೆ!

ಹೊಂಡದವರು ನಾಶವಾದರು.

ಅದು (ಹೊಂಡ) ಇಂಧನ ತುಂಬಲಾದ ಬೆಂಕಿಯನ್ನು ಹೊಂದಿತ್ತು.

ಅವರು ಅದರ ಸುತ್ತಲೂ ಕುಳಿತಿದ್ದ ಸಂದರ್ಭ.

ಸತ್ಯವಿಶ್ವಾಸಿಗಳೊಂದಿಗೆ ಏನು ಮಾಡಲಾಗುತ್ತಿತ್ತೋ ಅದಕ್ಕೆ ಅವರು ಪ್ರತ್ಯಕ್ಷದರ್ಶಿಗಳಾಗಿದ್ದರು.

ಅವರು ಪ್ರಬಲನು ಮತ್ತು ಸ್ತುತ್ಯರ್ಹನಾದ ಅಲ್ಲಾಹನಲ್ಲಿ ವಿಶ್ವಾಸವಿಟ್ಟಿದ್ದರು ಎಂಬುದು ಹೊರತು ಅವರಿಂದ ಪ್ರತೀಕಾರ ಪಡೆಯಲು ಇವರಿಗೆ ಬೇರೆ ಯಾವುದೇ ಕಾರಣವಿರಲಿಲ್ಲ.[1]

ಅವನು (ಅಲ್ಲಾಹು) ಯಾರೆಂದರೆ ಭೂಮ್ಯಾಕಾಶಗಳ ಸಾರ್ವಭೌಮತ್ವವು ಯಾರಿಗೆ ಸೇರಿದ್ದೋ ಅವನು. ಅಲ್ಲಾಹು ಎಲ್ಲ ವಿಷಯಗಳಿಗೂ ಸಾಕ್ಷಿಯಾಗಿದ್ದಾನೆ.

ಸತ್ಯವಿಶ್ವಾಸಿ ಪುರುಷರಿಗೆ ಮತ್ತು ಸತ್ಯವಿಶ್ವಾಸಿ ಮಹಿಳೆಯರಿಗೆ ಹಿಂಸೆ ನೀಡುವವರು ಮತ್ತು ಆ ಬಳಿಕ ಪಶ್ಚಾತ್ತಾಪ ಪಡದವರು ಯಾರೋ—ಅವರಿಗೆ ನರಕದ ಶಿಕ್ಷೆಯಿದೆ. ಅವರಿಗೆ ಸುಟ್ಟು ಕರಕಲಾಗುವ ಶಿಕ್ಷೆಯಿದೆ.

ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರಿಗೆ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿವೆ. ಅದೇ ಅತಿದೊಡ್ಡ ವಿಜಯ.

ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನ (ಅಲ್ಲಾಹನ) ಹಿಡಿತವು ಬಹಳ ಕಠೋರವಾಗಿದೆ.

ಅವನೇ ಪ್ರಥಮ ಬಾರಿ ಸೃಷ್ಟಿಸುವವನು ಮತ್ತು ಎರಡನೇ ಬಾರಿ ಸೃಷ್ಟಿಸುವವನು.

ಅವನು ಕ್ಷಮಿಸುವವನು ಮತ್ತು, ಅತಿಯಾಗಿ ಪ್ರೀತಿಸುವವನು.

ಅವನು ಸಿಂಹಾಸನದ ಒಡೆಯನು ಮತ್ತು ಪರಮೋನ್ನತನು.

ತಾನು ಬಯಸುವುದೆಲ್ಲವನ್ನೂ ಕಾರ್ಯರೂಪಕ್ಕೆ ತರುವವನು.

ಸೈನ್ಯಗಳ ಸಮಾಚಾರವು ನಿಮಗೆ ತಲುಪಿದೆಯೇ?

ಫರೋಹ‍ ಮತ್ತು ಸಮೂದ್ ಗೋತ್ರದವರ (ಸಮಾಚಾರ).

ಆದರೆ ಸತ್ಯನಿಷೇಧಿಗಳು ನಿಷೇಧಿಸುತ್ತಲೇ ಇದ್ದಾರೆ.

ಅಲ್ಲಾಹು ಅವರನ್ನು ಎಲ್ಲಾ ದಿಕ್ಕುಗಳಿಂದ ಆವರಿಸಿಕೊಂಡಿದ್ದಾನೆ.

ಆದರೆ ಇದು ಮಹತ್ವಪೂರ್ಣ ಕುರ್‌ಆನ್ ಆಗಿದೆ.

ಇದನ್ನು ಸುರಕ್ಷಿತ ಫಲಕದಲ್ಲಿ ಬರೆದಿಡಲಾಗಿದೆ.