The Noble Qur'an Encyclopedia
Towards providing reliable exegeses and translations of the meanings of the Noble Qur'an in the world languagesThe Dawn [Al-Fajr] - Kannada translation
Surah The Dawn [Al-Fajr] Ayah 30 Location Maccah Number 89
ಪ್ರಭಾತದ ಮೇಲಾಣೆ!
ಹತ್ತು ರಾತ್ರಿಗಳ ಮೇಲಾಣೆ![1]
ಸಮ ಮತ್ತು ಬೆಸಗಳ ಮೇಲಾಣೆ!
ರಾತ್ರಿಯ ಮೇಲಾಣೆ! ಅದು ಚಲಿಸತೊಡಗುವಾಗ.
ಇವುಗಳಲ್ಲಿ ಬುದ್ಧಿಯಿರುವವನ ಮಟ್ಟಿಗೆ ಪರ್ಯಾಪ್ತ ಆಣೆಯಿದೆಯೇ?
ನಿಮ್ಮ ಪರಿಪಾಲಕನು (ಅಲ್ಲಾಹು) ಆದ್ ಗೋತ್ರದವರೊಂದಿಗೆ ಏನು ಮಾಡಿದನೆಂದು ನೀವು ನೋಡಿಲ್ಲವೇ?
ಸ್ತಂಭಗಳ ಜನರಾದ ಇರಮ್ ಗೋತ್ರದವರೊಂದಿಗೆ.[1]
ಅವರಂತಿರುವ ಜನರನ್ನು ಯಾವುದೇ ಊರಲ್ಲೂ ಸೃಷ್ಟಿಸಲಾಗಿಲ್ಲ.
ಕಣಿವೆಯಲ್ಲಿ ಬಂಡೆಗಳನ್ನು ಕೊರೆಯುತ್ತಿದ್ದ ಸಮೂದ್ ಗೋತ್ರದವರೊಂದಿಗೆ.
ಗೂಟಗಳ ಒಡೆಯನಾದ ಫರೋಹನೊಂದಿಗೆ.[1]
ಅವರೆಲ್ಲರೂ ಊರುಗಳಲ್ಲಿ ಅತಿರೇಕವೆಸಗುತ್ತಿದ್ದರು.
ಕಿಡಿಗೇಡಿತನವನ್ನು ಅತಿಯಾಗಿ ಹಬ್ಬಿಸಿದ್ದರು.
ಕೊನೆಗೆ ನಿಮ್ಮ ಪರಿಪಾಲಕನು (ಅಲ್ಲಾಹು) ಅವರೆಲ್ಲರ ಮೇಲೆ ಶಿಕ್ಷೆಯ ಕೊರಡನ್ನು ಸುರಿಸಿದನು.
ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ನಿಗಾವಣೆಯಲ್ಲಿದ್ದಾನೆ.[1]
ಮನುಷ್ಯನ ಸ್ಥಿತಿ ಹೇಗಿದೆಯೆಂದರೆ, ಅವನ ಪರಿಪಾಲಕನು (ಅಲ್ಲಾಹು) ಅವನನ್ನು ಪರೀಕ್ಷಿಸಿ ಅವನಿಗೆ ಗೌರವ ಮತ್ತು ಅನುಗ್ರಹವನ್ನು ದಯಪಾಲಿಸಿದರೆ, ಅವನು ಹೇಳುತ್ತಾನೆ: “ನನ್ನ ಪರಿಪಾಲಕ (ಅಲ್ಲಾಹು) ನನ್ನನ್ನು ಗಣ್ಯ ವ್ಯಕ್ತಿಯಾಗಿ ಮಾಡಿದ್ದಾನೆ.”
ಆದರೆ ಅವನು ಮನುಷ್ಯನನ್ನು ಪರೀಕ್ಷಿಸಿ ಅವನ ಉಪಜೀವನವನ್ನು ಇಕ್ಕಟ್ಟುಗೊಳಿಸಿದರೆ, ಅವನು ಹೇಳುತ್ತಾನೆ: “ನನ್ನ ಪರಿಪಾಲಕ (ಅಲ್ಲಾಹು) ನನ್ನನ್ನು ನಿಂದನಾರ್ಹನಾಗಿ ಮಾಡಿದ್ದಾನೆ.”
ಇಲ್ಲವೇ ಇಲ್ಲ, ವಾಸ್ತವವಾಗಿ ನೀವು ಅನಾಥರಿಗೆ ಗೌರವ ನೀಡುವುದಿಲ್ಲ.
ಬಡವರಿಗೆ ಅನ್ನ ನೀಡಲು ಪರಸ್ಪರ ಉತ್ತೇಜಿಸುವುದಿಲ್ಲ.
ನೀವು ಉತ್ತರಾಧಿಕಾರದ ಆಸ್ತಿಯನ್ನು ಬಾಚಿ ಬಾಚಿ ತಿನ್ನುತ್ತೀರಿ.
ನೀವು ಧನವನ್ನು ಅತಿಯಾಗಿ ಪ್ರೀತಿಸುತ್ತೀರಿ.
ಅಲ್ಲ (ನಿಮ್ಮ ಸ್ಥಿತಿ ಹಾಗಾಗಬಾರದು). ಭೂಮಿಯನ್ನು ಸಂಪೂರ್ಣ ಪುಡಿ ಮಾಡಿ ಸಮತಟ್ಟುಗೊಳಿಸುವಾಗ.
ನಿಮ್ಮ ಪರಿಪಾಲಕನು (ಅಲ್ಲಾಹು) ಬರುವಾಗ ಮತ್ತು ಸಾಲುಸಾಲಾಗಿ ದೇವದೂತರುಗಳು ಬರುವಾಗ.
ಆ ದಿನ ನರಕವನ್ನು ತರಲಾಗುವುದು. ಅಂದು ಮನುಷ್ಯನಿಗೆ ಮನವರಿಕೆಯಾಗುವುದು. ಆದರೆ ಆಗ ಮನವರಿಕೆಯಾಗುವುದರಿಂದ ಏನು ಪ್ರಯೋಜನ?
ಅವನು ಹೇಳುವನು: “ಅಯ್ಯೋ! ನಾನು ನನ್ನ ಈ ಜೀವನಕ್ಕಾಗಿ ಏನಾದರೂ ಸಿದ್ಧತೆಗಳನ್ನು ಮಾಡಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು!”
ಅಂದು ಅಲ್ಲಾಹು ನೀಡುವಂತಹ (ಕಠೋರ) ಶಿಕ್ಷೆಯನ್ನು ನೀಡಲು ಯಾರಿಗೂ ಸಾಧ್ಯವಿಲ್ಲ.
ಅವನು ಹಿಡಿದು ಬಂಧಿಸುವಂತೆ ಹಿಡಿದು ಬಂಧಿಸಲು ಯಾರಿಗೂ ಸಾಧ್ಯವಿಲ್ಲ.
ಓ ಸಮಾಧಾನದಲ್ಲಿರುವ ಆತ್ಮವೇ!
ನಿನ್ನ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳು—ನೀನು ಅವನ ಬಗ್ಗೆ ಸಂಪ್ರೀತನಾಗಿರುವ ಮತ್ತು ಅವನು ನಿನ್ನ ಬಗ್ಗೆ ಸಂಪ್ರೀತನಾಗಿರುವ ಸ್ಥಿತಿಯಲ್ಲಿ.
ನನ್ನ ವಿಶೇಷ ದಾಸರೊಡನೆ ಸೇರಿಕೋ.
ನನ್ನ ಸ್ವರ್ಗಕ್ಕೆ ಪ್ರವೇಶಿಸು.